ಅಕ್ಷಯ್ ಕುಮಾರ್ - ದೀಪಿಕಾ ಪಡುಕೋಣೆ
ಮುಂಬೈ: ಸಂಜಯ್ ಲೀಲಾ ಭನ್ಸಾಲಿ ಅವರ ವಿವಾದಿತ ಚಿತ್ರ 'ಪದ್ಮಾವತ್' ನೊಂದಿಗೆ ಬಾಕ್ಸ್ ಆಫೀಸ್ ಘರ್ಷಣೆ ತಪ್ಪಿಸುವುದಕ್ಕಾಗಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ತಮ್ಮ ಪ್ಯಾಡ್ ಮ್ಯಾನ್ ಚಿತ್ರದ ಬಿಡುಗಡೆಯ ದಿನಾಂಕವನ್ನು ಮುಂದೂಡಿದ್ದಾರೆ.
ಭನ್ಸಾಲಿ ಅವರು ಪ್ಯಾಡ್ ಮ್ಯಾನ್ ಚಿತ್ರದ ಬಿಡುಗಡೆ ದಿನಾಂಕ ಮುಂದೂಡುವಂತೆ ಕೇಳಿಕೊಂಡರು ಮತ್ತು ಅವರು ಈಗಾಗಲೇ ಸಾಕಷ್ಟು ವಿವಾದಿತ ಚಿತ್ರದ ಬಿಡುಗಡೆಗಾಗಿ ಸಾಕಷ್ಟು ಸಮಸ್ಯೆ ಎದುರಿಸಿರುವುದರಿಂದ ನಾನು ಪ್ಯಾಡ್ ಮ್ಯಾನ್ ಬಿಡುಗಡೆಯನ್ನು ಫೆಬ್ರವರಿ 9ಕ್ಕೆ ಮುಂದೂಡಿರುವುದಾಗಿ ಅಕ್ಷಯ್ ಕುಮಾರ್ ಅವರು ತಿಳಿಸಿದ್ದಾರೆ.
ಈ ಮುಂಚೆ ಆರ್ ಬಾಲ್ಕಿ ನಿರ್ದೇಶನದ ಪ್ಯಾಡ್ ಮ್ಯಾನ್ ಚಿತ್ರದ ಬಿಡುಗಡೆ ದಿನಾಂಕವನ್ನು ಜನವರಿ 25ಕ್ಕೆ ನಿಗದಿ ಮಾಡಲಾಗಿತ್ತು. ಈಗ ಅದನ್ನು ಫೆಬ್ರವರಿ 9ಕ್ಕೆ ಮುಂದೂಡಲಾಗಿದೆ.
ನನ್ನ ಪ್ಯಾಡ್ ಮ್ಯಾನ್ ಮತ್ತು ಪದ್ಮಾವತ್ ಎರಡು ಚಿತ್ರಗಳು ಜನವರಿ 25ರಂದು ಬಿಡುಗಡೆಯಾಗುತ್ತಿದ್ದವು. ಆದರೆ ಫಿಲ್ಮ್ ಫೇರ್ ಪತ್ರಿಕಾಗೋಷ್ಠಿಯಲ್ಲಿ ನಾನು ಸಂಜಯ್ ಲೀಲಾ ಭನ್ಸಾಲಿ ಅವರನ್ನು ಭೇಟಿ ಮಾಡಿದೆ. ಈ ವೇಳೆ ಅವರು ನಿಮ್ಮ ಚಿತ್ರದ ಬಿಡುಗಡೆ ದಿನಾಂಕ ಮುಂದೂಡುವಂತೆ ಮನವಿ ಮಾಡಿದರು ಎಂದು ಅಕ್ಷಯ್ ಕುಮಾರ್ ತಿಳಿಸಿದ್ದಾರೆ.
ನಾವು ಎಲ್ಲಾ ಒಂದೇ ಕುಟುಂಬವಿದ್ದಂತೆ. ಅವರ ಚಿತ್ರ ಮಾತ್ರ ಜನವರಿ 25ರಂದು ಬಿಡುಗಡೆಯಾಗಲಿ ಮತ್ತು ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ ಎಂದರು.