ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಜೀವನಾಧಾರಿತ ಚಿತ್ರ ಬಿಡುಗಡೆಗೆ ಕೊನೆಗೂ ಮಹೂರ್ತ ಫಿಕ್ಸ್ ಆಗಿದ್ದು, ಇದೇ ಏಪ್ರಿಲ್ 11ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ಸಂದೀಪ್ ಸಿಂಗ್ ಮಾಹಿತಿ ನೀಡಿದ್ದಾರೆ.
ಈ ಹಿಂದೆ ಚಿತ್ರವನ್ನು ಏಪ್ರಿಲ್ 5ರಂದು ತೆರೆ ಮೇಲೆ ತರುವುದಾಗಿ ನಿರ್ಮಾಪಕರು ತಿಳಿಸಿದ್ದರು. ಆದರೆ ಸೆನ್ಸಾರ್ ಮಂಡಳಿ ಇನ್ನೂ ಸಿನಿಮಾದ ಪರಿಶೀಲನೆ ನಡೆಸುತ್ತಿರುವ ಕಾರಣ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ ಎಂದು ಸಂದೀಪ್ ಸಿಂಗ್ ತಿಳಿಸಿದ್ದರು. ಇದೀಗ ಮತ್ತೆ ಟ್ವೀಟ್ ಮಾಡಿರುವ ಅವರು, ಸಿನಿಮಾ ಏ.11ರಂದು ತೆರೆಗೆ ಬರಲಿದೆ ಎಂದು ಹೇಳಿದ್ದಾರೆ.
ಲೋಕಸಭಾ ಚುನಾವಣಾ ದಿನಾಂಕ ಘೋಷಣೆಯಾದ ಹಿನ್ನೆಲೆಯಲ್ಲಿ ‘ಪಿಎಂ ನರೇಂದ್ರ ಮೋದಿ’ ಬಿಡುಗಡೆಗೆ ಚುನಾವಣಾ ಆಯೋಗವೂ ವಿರೋಧ ವ್ಯಕ್ತಪಡಿಸಿತ್ತು. ಹಾಗೆಯೇ ಈ ಚಿತ್ರ ತೆರೆಗೆ ಬರಲು ಅವಕಾಶ ಮಾಡಿಕೊಡಬಾರದು ಎಂದು ದೆಹಲಿ, ಬಾಂಬೆ, ಮಧ್ಯಪ್ರದೇಶ, ಕರ್ನಾಟಕ ಹೈಕೋರ್ಟ್ ಗಳಲ್ಲಿ ಕೂಡ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಈ ಎಲ್ಲ ಹೈಕೋರ್ಟ್ ಗಳೂ ಅರ್ಜಿ ವಜಾಗೊಳಿಸಿದ್ದು ಸಿನಿಮಾ ಬಿಡುಗಡೆಗೆ ಅಸ್ತು ಎಂದಿವೆ.
ಒಮಂಗ್ ಕುಮಾರ್ ನಿರ್ದೇಶಿಸಿರುವ ‘ಪಿಎಂ ನರೇಂದ್ರ ಮೋದಿ’ ಬಯೋಪಿಕ್ ಸಿನಿಮಾದಲ್ಲಿ ವಿವೇಕ್ ಒಬೆರಾಯ್ ಮೋದಿ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಚಿತ್ರ ಮೋದಿ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಕೆರಳಿಸಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos