ಮುಂಬೈ: ಬಾಲಿವುಡ್ ನಟಿ, ಸಂಸದೆ ಕಂಗನಾ ರಣಾವತ್ ತಾವು ನಿರ್ದೇಶಿಸಿ, ನಿರ್ಮಿಸಿ, ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿರುವ ʼಎಮರ್ಜೆನ್ಸಿʼ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ.
ಭಾರತದ ಇತಿಹಾಸದಲ್ಲಿಯೇ ಕಪ್ಪು ಚುಕ್ಕೆಯಾಗಿರುವ ತುರ್ತು ಪರಿಸ್ಥಿತಿಯ 50ನೇ ವರ್ಷಾಚರಣೆಯ ಆರಂಭದಲ್ಲಿ ʼಎಮರ್ಜೆನ್ಸಿʼ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸುತ್ತಿದ್ದೇವೆ. ಸೆಪ್ಟೆಂಬರ್ 6ರಂದು ಚಿತ್ರ ತೆರೆ ಕಾಣಲಿದೆ. ಭಾರತದ ಸಂವಿಧಾನದ ಬಹುದೊಡ್ಡ ವಿವಾದ ತೆರೆ ಮೇಲೆ ಅನಾವರಣಗೊಳ್ಳಲಿದೆʼ ಎಂದು ಸೋಷಿಯಲ್ ಮೀಡಿಯಾದಲ್ಲಿ ಚಿತ್ರತಂಡ ಬರೆದುಕೊಂಡಿದೆ. ಈ ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದ ಕಂಗನಾ ಕೆಲವು ದಿನಗಳ ಹಿಂದೆ ಚಿತ್ರದ ಬಿಡುಗಡೆಯನ್ನು ಮುಂದಕ್ಕೆ ಹಾಕಿದ್ದರು. ಇಲ್ಲದಿದ್ದರೆ ಇಷ್ಟರಲ್ಲಾಗಲೇ ಚಿತ್ರ ತೆರೆ ಕಾಣಬೇಕಿತ್ತು. ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಅವರು ರಿಲೀಸ್ ಡೇಟ್ ಮುಂದೂಡಿದ್ದರು. ಸದ್ಯ ಅವರು ಹಿಮಾಚಲ ಪ್ರದೇಶ ಮಂಡಿ ಕ್ಷೇತಚರದಿಂದ ಗೆದ್ದು, ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಎಮರ್ಜೆನ್ಸಿ’ಯಲ್ಲಿ ಅನುಪಮ್ ಖೇರ್, ಮಹಿಮಾ ಚೌಧರಿ, ಮಿಲಿಂದ್ ಸೋಮನ್, ಶ್ರೇಯಸ್ ತಲ್ಪಾಡೆ, ವಿಶಾಕ್ ನಾಯರ್ ಮತ್ತು ದಿವಂಗತ ಸತೀಶ್ ಕೌಶಿಕ್ ಕೂಡ ಕಾಣಿಸಿಕೊಂಡಿದ್ದಾರೆ. ಕಂಗನಾ ಅವರು ದಿವಂಗತ ಪ್ರಧಾನಿ ಇಂದಿರಾ ಗಾಂಧಿಯವರ ಪಾತ್ರದಲ್ಲಿ ನಟಿಸಿದ್ದು, ಫಸ್ಟ್ ಲುಕ್‌ನಲ್ಲಿ ಇಂದಿರಾ ಗಾಂಧಿ ಅವರನ್ನೇ ಹೋಲುತ್ತಿರುವುದನ್ನು ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.