ಬಾಲಿವುಡ್ ನಟ ಅಮಿತಾಬ್ ಬಚ್ಚನ್ ನಡೆಸಿಕೊಡುವ 'ಕೌನ್ ಬನೇಗಾ ಕರೋಡ್‌ಪತಿ' 17ನೇ ಸೀಸನ್, ಆಗಸ್ಟ್ 11ರ ಸೋಮವಾರ ಮತ್ತೆ ಆರಂಭಗೊಂಡಿದೆ. ಆಗಸ್ಟ್ 15ರಂದು ಪ್ರಸಾರವಾಗಲಿರುವ ವಿಶೇಷ ಸಂಚಿಕೆಯಲ್ಲಿ ಆಪರೇಷನ್ ಸಿಂಧೂರ ಕುರಿತ ಸುದ್ದಿಗೋಷ್ಠಿಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಭಾರತೀಯ ಸಶಸ್ತ್ರ ಪಡೆಯ ಕರ್ನಲ್ ಸೋಫಿಯಾ ಖುರೇಷಿ ಸೇರಿದಂತೆ ಮೂವರು ಗೌರವಾನ್ವಿತರು ಪಾಲ್ಗೊಂಡಿದ್ದಾರೆ.
ಸೋನಿ ಟಿವಿ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ, ನಿರೂಪಕ ಅಮಿತಾಬ್ ಬಚ್ಚನ್ ಅವರು ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಷಿ, ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮತ್ತು ಭಾರತೀಯ ನೌಕಾಪಡೆಯ ಕಮಾಂಡರ್ ಪ್ರೇರಣಾ ದಿಯೋಸ್ಥಲಿ ಅವರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸುತ್ತಿರುವುದು ಕಂಡುಬಂದಿದೆ.
ಆಗಸ್ಟ್ 15 ರಂದು ರಾತ್ರಿ 9 ಗಂಟೆಗೆ ಚಾನೆಲ್‌ನಲ್ಲಿ ಪ್ರಸಾರವಾಗಲಿರುವ ವಿಶೇಷ ಸಂಚಿಕೆಯಲ್ಲಿ, ಏಪ್ರಿಲ್ 22 ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸಶಸ್ತ್ರ ಪಡೆಗಳು ಮೇ 7ರ ಬೆಳಿಗ್ಗೆ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಾಕಿಸ್ತಾನದ ವಿರುದ್ಧ ಭಾರತ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಪ್ರಾರಂಭಿಸುವ ಸಮಯ ಬಂದಿದ್ದು ಹೇಗೆ ಎಂಬ ಬಗ್ಗೆ ಕರ್ನಲ್ ಸೋಫಿಯಾ ಖುರೇಷಿ ಮಾತನಾಡಿದ್ದಾರೆ. 'ಪಾಕಿಸ್ತಾನವು ವರ್ಷಗಳಿಂದ ಇದನ್ನು ಮಾಡುತ್ತಿದೆ; ಪ್ರತ್ಯುತ್ತರ ನೀಡುವುದು ಮುಖ್ಯವಾಗಿತ್ತು, ಅದಕ್ಕಾಗಿಯೇ ಆಪರೇಷನ್ ಸಿಂಧೂರವನ್ನು ಯೋಜಿಸಲಾಗಿತ್ತು' ಎಂದು ಅವರು ಹೇಳಿದರು.
'ರಾತ್ರಿ 1.05 ರಿಂದ 1.30 ರ ನಡುವೆ, ನಾವು ಅವರ ಆಟವನ್ನು ಕೇವಲ 25 ನಿಮಿಷಗಳಲ್ಲಿ ಮುಗಿಸಿದ್ದೇವೆ' ಎಂದು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಹೇಳಿದರು.
'ಉಗ್ರ ನೆಲೆಗಳು ನಾಶವಾದವು ಮತ್ತು ಯಾವುದೇ ನಾಗರಿಕರಿಗೆ ಹಾನಿಯಾಗಿಲ್ಲ' ಎಂದು ಕಮಾಂಡರ್ ಪ್ರೇರಣಾ ದಿಯೋಸ್ಥಲಿ ಹೇಳಿದರು.
ನಂತರ ಕರ್ನಲ್ ಸೋಫಿಯಾ, 'ಇದು ಹೊಸ ಮನಸ್ಥಿತಿಯೊಂದಿಗೆ ಹೊಸ ಭಾರತ' ಎಂದು ಹೇಳಿದರು.
ಕೆಬಿಸಿ ನಿರೂಪಕ ಅಮಿತಾಬ್ ಬಚ್ಚನ್ ಮತ್ತು ಪ್ರೇಕ್ಷಕರು ಒಗ್ಗಟ್ಟಿನಿಂದ 'ಭಾರತ್ ಮಾತಾ ಕಿ ಜೈ' ಎಂದು ಘೋಷಣೆ ಕೂಗುವುದರೊಂದಿಗೆ ಕ್ಲಿಪ್ ಕೊನೆಗೊಂಡಿತು. ಸ್ವಾತಂತ್ರ್ಯ ದಿನದ ವಿಶೇಷ ಸಂಚಿಕೆ ಸೋನಿ ಎಲ್ಐವಿಯಲ್ಲಿಯೂ ಸ್ಟ್ರೀಮಿಂಗ್‌ಗೆ ಲಭ್ಯವಿರುತ್ತದೆ.