ಮುಂಬೈ: ಬಾಲಿವುಡ್ ನಟ ವಿಕ್ಕಿ ಕೌಶಲ್ ಮತ್ತು ನಟಿ ರಶ್ಮಿಕಾ ಮಂದಣ್ಣ ಅಭಿನಯದ ಛಾವಾ ಚಿತ್ರ ಬಾಕ್ಸಾಫೀಸ್ ನಲ್ಲಿ ತನ್ನ ನಾಗಾಲೋಟ ಮುಂದುವರೆಸಿದ್ದು, ಅಜಯ್ ದೇವಗನ್ ಅಭಿನಯದ ಚಿತ್ರ ಸಿಂಗಮ್ ಅಗೈನ್ ಚಿತ್ರದ ದಾಖಲೆಯನ್ನು ಹಿಂದಿಕ್ಕಿದೆ.
ಹೌದು.. ಛತ್ರಪತಿ ಸಂಭಾಜಿ ಮಹಾರಾಜರ ಜೀವನಾಧರಿತ ಚಿತ್ರ ಛಾವಾ ಬಿಡುಗಡೆಯಾದ 7 ದಿನಗಳಲ್ಲೇ ಚಿತ್ರ ಭರ್ಜರಿ ಕಲೆಕ್ಷನ್ ಮಾಡಿದ್ದು, ಚಿತ್ರದ ಗಳಿಕೆ 270 ದಾಟಿದೆ ಎಂದು ಹೇಳಲಾಗಿದೆ. ಅಂತೆಯೇ 2025 ಬಾಲಿವುಡ್ ನ ಮೊದಲ ಹಿಟ್ ಚಿತ್ರ ಎನಿಸಿಕೊಂಡಿದೆ.
ಇನ್ನು ಖ್ಯಾತ ಬಾಕ್ಸಾಫೀಸ್ ವಿಶ್ಲೇಷಕ ಸಕ್ನಿಲ್ಕ್ ಪ್ರಕಾರ, ಚಿತ್ರಮಂದಿರಗಳಲ್ಲಿ ಛಾವಾ ಏಳನೇ ದಿನವಾದ ಗುರುವಾರ 22 ಕೋಟಿ ರೂ. ಗಳಿಸಿದ್ದು, ಆ ಮೂಲಕ ಚಿತ್ರದ ಒಟ್ಟಾರೆ ಗಳಿಕೆ 270 ಕೋಟಿ ರೂ ದಾಟಿದೆ ಎಂದು ಮಾಹಿತಿ ನೀಡಿದ್ದಾರೆ.
ಛಾವಾ ಚಿತ್ರ ತನ್ನ ಮೂರನೇ ದಿನವಾದ ಭಾನುವಾರದಂದು ಗರಿಷ್ಠ ಅಂದರೆ 48.5 ಕೋಟಿ ರೂ. ಗಳಿಸಿತ್ತು. ಅಂದಿನಿಂದ, ಸೋಮವಾರದಂದು ಸಣ್ಣ ಕುಸಿತದ ಹೊರತಾಗಿಯೂ, ಚಿತ್ರವು ಪ್ರತಿದಿನ ಸರಾಸರಿ 20 ಕೋಟಿ ರೂ.ಗಳಿಗಿಂತ ಹೆಚ್ಚು ಕಲೆಕ್ಷನ್ ಕಾಯ್ದುಕೊಂಡಿದೆ. ಇದೀಗ ಛಾವಾ ಚಿತ್ರವು ಜಾಗತಿಕವಾಗಿ 270 ಕೋಟಿ ರೂ. ಗಳಿಸಿದೆ ಎಂದು ಹೇಳಿದ್ದಾರೆ.
ಸಿಂಗಮ್ ಅಗೈನ್ ದಾಖಲೆ ಪತನ
ವಿಕ್ಕಿ ಕೌಶಲ್ ಅವರ ಛಾವಾ ಅವರ ವೃತ್ತಿಜೀವನದ ಅತಿದೊಡ್ಡ ಹಿಟ್ ಚಿತ್ರವಾಗಿದೆ. ಈ ಚಿತ್ರವು ಕಳೆದ ವರ್ಷದ ಹಿಟ್ ಚಿತ್ರಗಳಾದ ಭೂಲ್ ಭುಲಯ್ಯ 3 ಮತ್ತು ಸಿಂಗಮ್ ಅಗೇನ್ ದಾಖಲೆಗಳನ್ನು ಹಿಂದಿಕ್ಕಿದೆ. ಈ ಚಿಕ್ರಗಳು ಬಿಡುಗಡೆಯಾದ ಒಂದು ವಾರದ ಅವಧಿಯಲ್ಲಿ ಗಳಿಸಿದ್ದಕ್ಕಿಂತ ಹೆಚ್ಚು ಹಣವನ್ನು ಛಾವಾ ಗಳಿಸಿದೆ. ಮೊದಲ ಏಳು ದಿನಗಳಲ್ಲಿ, ಕಾರ್ತಿಕ್ ಆರ್ಯನ್ ಅವರ ಭೂಲ್ ಭುಲಯ್ಯ 3 ಬಾಕ್ಸ್ ಆಫೀಸ್‌ನಲ್ಲಿ 158.25 ಕೋಟಿ ರೂ ಗಳಿಸಿದ್ದರೆ, ಅಜಯ್ ದೇವಗನ್ ಅವರ ಸಿಂಗಮ್ ಅಗೇನ್ ಭಾರತದಲ್ಲಿ 173 ಕೋಟಿ ರೂ. ಗಳಿಸಿತು.
ಈ ಎರಡೂ ಚಿತ್ರಗಳು ದೀಪಾವಳಿಯಲ್ಲಿ ಬಿಡುಗಡೆಯಾಗಿದ್ದರಿಂದ ರಜಾ ದಿನಗಳ ದಟ್ಟಣೆಯ ಲಾಭ ಈ ಚಿತ್ರಗಳಿಗೆ ಸಿಕ್ಕಿತ್ತು. ಭೂಲ್ ಭುಲಯ್ಯ 3 ಭಾರತದಲ್ಲಿ ಥಿಯೇಟರ್ ಪ್ರದರ್ಶನದಲ್ಲಿ 260.04 ಕೋಟಿ ರೂ. ಮತ್ತು ಸಿಂಗಮ್ ಅಗೇನ್ 247.85 ಕೋಟಿ ರೂ. ಗಳಿಸಿತು. ಇದೀಗ ಛಾವಾ 270 ಕೋಟಿ ರೂ ಗಳಿಸಿ ಈ ಎರಡೂ ಚಿತ್ರಗಳನ್ನು ಹಿಂದಿಕ್ಕಿದೆ. ಇನ್ನು 2024 ರ ಅತಿ ದೊಡ್ಡ ಹಿಂದಿ ಹಿಟ್ ಆಗಿದ್ದ ಸ್ತ್ರೀ 2, ಒಂದು ವಾರದಲ್ಲಿ 275.35 ಕೋಟಿ ರೂ. ಗಳಿಸಿತ್ತು.
ಫೆಬ್ರವರಿ 14ರಂದು ಬಿಡುಗಡೆಯಾಗಿದ್ದ ‘ಛಾವ’ ಸಿನಿಮಾದಲ್ಲಿ ಛತ್ರಪತಿ ಸಂಭಾಜಿ ಮಹಾರಾಜ್ ಜೀವನದ ಕಥೆ ಇದೆ. ಆ ಪಾತ್ರವನ್ನು ವಿಕ್ಕಿ ಕೌಶಲ್ ಅವರು ನಿಭಾಯಿಸಿದ್ದಾರೆ. ಶಂಭಾಜಿ ಪತ್ನಿ ಯೇಸುಬಾಯಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಅವರು ನಟಿಸಿದ್ದಾರೆ. ಲಕ್ಷ್ಮಣ್ ಉಟೇಕರ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ‘ಮೆಡಾಕ್ ಫಿಲ್ಮ್ಸ್’ ಮೂಲಕ ಈ ಚಿತ್ರ ನಿರ್ಮಾಣ ಆಗಿದ್ದು, ನಿರ್ಮಾಪಕರಿಗೆ ಭರ್ಜರಿ ಲಾಭ ತಂದುಕೊಟ್ಟಿದೆ.