ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು ಬಾಲಿವುಡ್ ನಟಿ ಕೃತಿ ಸನೋನ್ ಅವರ ರಕ್ಷಾ ಬಂಧನ ಜಾಹೀರಾತಿನ ಕುರಿತು ಟೀಕೆ ವ್ಯಕ್ತಪಡಿಸಿದ್ದಾರೆ. ಈ ಜಾಹೀರಾತಿನಲ್ಲಿ ನಟಿ ಧರಿಸಿರುವ ಉಡುಪಿನ ಬಗ್ಗೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ಹಾಗೂ ಟೀಕೆಗೆ ಗ್ರಾಸವಾಗಿದೆ.
ಕೃತಿ ಸನೋನ್ ಇತ್ತೀಚೆಗೆ ಆಭರಣ ಬ್ರ್ಯಾಂಡ್ ಒಂದರ ರಕ್ಷಾ ಬಂಧನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಈ ಜಾಹೀರಾತಿನಲ್ಲಿ, ಅವರು 'ಆಫ್-ವೈಟ್' ಬಣ್ಣದ ಬ್ರಾಲೆಟ್-ಶೈಲಿಯ ಬ್ಲೌಸ್ ಅನ್ನು ಕೇಪ್ (ಮೇಲು ಹೊದಿಕೆ) ಮತ್ತು ಡ್ರೇಪ್ಡ್ ಸ್ಕರ್ಟ್‌ನೊಂದಿಗೆ ಧರಿಸಿದ್ದರು.
ಸಾಮಾಜಿಕ ಜಾಲತಾಣ ಬಳಕೆದಾರರ ಒಂದು ವರ್ಗವು ಈ ಬ್ರ್ಯಾಂಡ್ ಭಾರತೀಯ ಹಬ್ಬಗಳನ್ನು ಅಪಹಾಸ್ಯ ಮಾಡಿದೆ ಎಂದು ಆರೋಪಿಸಿದರೆ, ಇನ್ನು ಕೆಲವರು ಕೃತಿ ಸನೋನ್ ಅವರ ಉಡುಪನ್ನು 'ಅತಿಯಾಗಿ ಮೈತೋರಿಸುವಂತಿದೆ' (skimpy) ಎಂದು ಬಣ್ಣಿಸಿದರು.
ಈ ವಿವಾದದ ಕುರಿತು ಕಂಗನಾ ರಣಾವತ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಕೃತಿ ಸನೋನ್ ಅವರ ಹೆಸರನ್ನು ನೇರವಾಗಿ ಪ್ರಸ್ತಾಪಿಸದಿದ್ದರೂ, ತಮ್ಮ ಸಹೋದ್ಯೋಗಿ ನಟಿ ಕಾಣಿಸಿಕೊಂಡಿರುವ ಆಭರಣ ಬ್ರ್ಯಾಂಡ್‌ನ ಜಾಹೀರಾತಿಗೆ ಸಂಬಂಧಿಸಿದ ವಿವಾದದ ಕುರಿತೇ ತಾವು ಈ ಅಭಿಪ್ರಾಯ ವ್ಯಕ್ತಪಡಿಸುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
'ಮಹಿಳೆಯರಿಗೆ ಇದೊಂದು ಅದ್ಭುತವಾದ ಕಾಲ; ನಮ್ಮ ವಸ್ತ್ರಸಂಗ್ರಹದಲ್ಲಿ ವೈವಿಧ್ಯಮಯ ಉಡುಪುಗಳಿವೆ ಮತ್ತು ಈ ಮಹಿಳೆ ಜಾಗತಿಕ ಮಟ್ಟದಲ್ಲಿ ಖ್ಯಾತಿ ಪಡೆದವಳು. ಕಾಕ್‌ಟೈಲ್ ಡ್ರೆಸ್‌ಗಳಿಂದ ಹಿಡಿದು ಲೆಹಂಗಾ-ಚೋಲಿ, ಜೀನ್ಸ್‌ನಿಂದ ಸೀರೆ, ಬಿಕಿನಿಯಿಂದ ಸಲ್ವಾರ್-ಕಮೀಜ್‌ವರೆಗೆ ನಮಗೆ ಇಂದು ಅನೇಕ ಆಯ್ಕೆಗಳು ಲಭ್ಯವಿವೆ. ಹೀಗಿರುವಾಗ, ಬಿಕಿನಿ ಅಥವಾ ಒಳ ಉಡುಪುಗಳನ್ನು ಧರಿಸಿ ಸಹೋದರನಿಗೆ ರಾಖಿ ಕಟ್ಟುವುದೇಕೆ? ನಿಮ್ಮ ಇತರ ಸ್ಟೈಲಿಂಗ್ ಆಯ್ಕೆಗಳೆಲ್ಲ ಎಲ್ಲಿ ಹೋದವು?' ಎಂದು ಅವರು ಪ್ರಶ್ನಿಸಿದರು.
ಕಂಗನಾ ರಣಾವತ್ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಈ ಜಾಹೀರಾತನ್ನು 'ಉದ್ದೇಶಪೂರ್ವಕವಾಗಿ ಅಹಿತಕರ' (creepy) ಎಂದು ಕರೆದಿದ್ದಾರೆ.
ನಾಯಿಗೆ ರಾಖಿ ಕಟ್ಟುವ ವಿಷಯವಾಗಿಯೂ ಈ ಜಾಹೀರಾತು ಆನ್‌ಲೈನ್‌ನಲ್ಲಿ ಟೀಕೆಗೆ ಗುರಿಯಾಗಿದೆ. ಜಾಹೀರಾತಿನಲ್ಲಿ, ನಾಯಿಯು ತನ್ನತ್ತ ಬೊಗಳಿದ ನಂತರ ಕೃತಿ ಅದಕ್ಕೆ ಸಾಂಪ್ರದಾಯಿಕ ರಾಖಿಯನ್ನು ಕಟ್ಟುವುದನ್ನು ಕಾಣಬಹುದು.
ರಕ್ಷಾ ಬಂಧನ ಜಾಹೀರಾತಿಗೆ ಸಂಬಂಧಿಸಿದ ವಿವಾದದ ನಡುವೆಯೇ ನಟಿ, ತಮ್ಮ ಸಹೋದರಿ ನೂಪುರ್ ಸನೋನ್ ಮತ್ತು ತಮ್ಮೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾದ ಕಬೀರ್ ಬಹಿಯಾ ಅವರೊಂದಿಗೆ ತೆಗೆಸಿಕೊಂಡ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.