ಮುಂಬೈ: ಬಾಲಿವುಡ್ ನಟಿ ಮೌನಿರಾಯ್ ಮತ್ತು ಉದ್ಯಮಿ ಸೂರಜ್ ನಂಬಿಯಾರ್ (Suraj Nambiar) ವೈವಾಹಿಕ ಜೀವನ ಅಂತ್ಯವಾಗಿದ್ದು ಇಬ್ಬರೂ ಪರಸ್ಪರ ದೂರಾದ ಬಳಿಕ ಇದೇ ಮೊದಲ ಬಾರಿಗೆ ಸೂರಜ್ ಮೌನ ಮುರಿದಿದ್ದಾರೆ.
ಹೌದು.. ಸೂರಜ್ ನಂಬಿಯಾರ್ ಮತ್ತು ನಟಿ ಮೌನಿ ರಾಯ್ ಅವರ ಜೊತೆಗಿನ ನಾಲ್ಕು ವರ್ಷದ ವಿವಾಹ ಜೀವನಕ್ಕೆ ಅಂತ್ಯ ಘೋಷಿಸಿದ ನಂತರ, ತಮ್ಮ ಖಾಸಗಿ ಜೀವನದ ಬಗ್ಗೆ ಮಾಧ್ಯಮಗಳ ಕೆಲವು ವಲಯಗಳು ತೋರಿಸುತ್ತಿರುವ “ಅತಿಯಾದ ಹಸ್ತಕ್ಷೇಪ”ವನ್ನು ಸೂರಜ್ ಖಂಡಿಸಿದ್ದಾರೆ.
ಕಳೆದ ಗುರುವಾರ ಹೇಳಿಕೆಯ ಮೂಲಕ ದಂಪತಿ ವಿಚ್ಛೇದನ ಘೋಷಣೆ ಮಾಡಿದ್ದು, ಅವರ ಸಂಬಂಧದ ಸ್ಥಿತಿಯ ಬಗ್ಗೆ ಹಲವು ವಾರಗಳಿಂದ ನಡೆಯುತ್ತಿದ್ದ ಊಹಾಪೋಹಗಳಿಗೆ ತೆರೆ ಎಳೆದಿದ್ದರು. ಸೋಮವಾರ ಬಿಡುಗಡೆ ಮಾಡಿದ ಮತ್ತೊಂದು ಹೇಳಿಕೆಯಲ್ಲಿ, ತಮ್ಮ ಬೇರ್ಪಡಿಕೆಗೆ ಕಾರಣವೇನು ಎಂಬುದರ ಬಗ್ಗೆ ಹರಿದಾಡುತ್ತಿರುವ ವದಂತಿಗಳನ್ನು ನಂಬಬಾರದು ಎಂದು ನಂಬಿಯಾರ್ ಹೇಳಿದ್ದಾರೆ.
“ಮಾಧ್ಯಮಗಳ ಕೆಲವು ವಲಯಗಳು ನಮ್ಮ ವೈಯಕ್ತಿಕ ಜೀವನದ ಮೇಲೆ ತೋರಿಸುತ್ತಿರುವ ಅನಗತ್ಯ ಮತ್ತು ಅತಿಯಾದ ಗಮನ ನಮ್ಮಲ್ಲಿ ಬೇಸರ ಉಂಟುಮಾಡಿದೆ. ನಾವು ಪರಸ್ಪರ ಒಪ್ಪಿಗೆಯೊಂದಿಗೆ ಬೇರ್ಪಡುವ ನಿರ್ಧಾರ ತೆಗೆದುಕೊಂಡಿದ್ದೇವೆ ಮತ್ತು ಈ ವಿಷಯಗಳನ್ನು ಖಾಸಗಿಯಾಗಿ ಹಾಗೂ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಅಗತ್ಯ ಸಮಯ ತೆಗೆದುಕೊಳ್ಳುತ್ತಿದ್ದೇವೆ,” ಎಂದು ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
“ನಮ್ಮ ಬೇರ್ಪಡಿಕೆಗೆ ಸಂಬಂಧಿಸಿದ ಇತ್ತೀಚಿನ ಆಧಾರರಹಿತ ವರದಿಗಳು ಅತ್ಯಂತ ಕೆಟ್ಟ ಉದ್ದೇಶದಿಂದ ಹರಡಲ್ಪಟ್ಟಿದ್ದು, ಸಂಪೂರ್ಣ ದುರುದ್ದೇಶಪೂರಿತವಾಗಿವೆ. ನಾನು ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ. ವಿಚ್ಛೇದನಕ್ಕೆ ಸಂಬಂಧಿಸಿದಂತೆ ಯಾವುದೇ ಪರಿಹಾರಧನ (ಅಲಿಮನಿ) ಇಲ್ಲ.
ಯಾವುದೇ ವಿವಾದಗಳಿಲ್ಲ. ಯಾವುದೇ ಮೂರನೇ ವ್ಯಕ್ತಿಯ ಪಾತ್ರವೂ ಇಲ್ಲ... ಮೌನಿ ಮತ್ತು ನಾನು ಪರಸ್ಪರ ಗೌರವ ಮತ್ತು ಒಬ್ಬರ ಒಳಿತನ್ನು ಪರಿಗಣಿಸಿ ಈ ನಿರ್ಧಾರ ಕೈಗೊಂಡಿದ್ದೇವೆ. ಅದೇ ಸತ್ಯ. ಉಳಿದಂತೆ ವರದಿಯಾಗುತ್ತಿರುವ ಎಲ್ಲವೂ ಕೇವಲ ಕಲ್ಪನೆಗಳು; ಕೆಲವು ಸಂದರ್ಭಗಳಲ್ಲಿ ಏನೂ ತಪ್ಪು ಮಾಡದವರನ್ನು ದುರುದ್ದೇಶಪೂರ್ವಕವಾಗಿ ಕೆಟ್ಟವರಾಗಿ ತೋರಿಸಲು ಮಾಡಿದ ಪ್ರಯತ್ನ,” ಎಂದು ನಂಬಿಯಾರ್ ಕಿಡಿಕಾರಿದ್ದಾರೆ.
ಅಲ್ಲದೆ ಇತರರನ್ನು ನಮ್ಮ ವೈವಾಹಿಕ ಬೇರ್ಪಡಿಕೆಯಲ್ಲಿ ಎಳೆಯುವುದು ಸರಿಯಲ್ಲ. ಈ ಅವಧಿಯಲ್ಲಿ ಮೌನಿ ಮತ್ತು ನಾನು ಇಬ್ಬರೂ ಗೌರವಯುತವಾಗಿ ನಡೆದುಕೊಂಡಿದ್ದೇವೆ ಮತ್ತು ನಮ್ಮ ಬಗ್ಗೆ ವರದಿ ಮಾಡುವವರಿಂದಲೂ ಅದೇ ರೀತಿಯ ಗೌರವವನ್ನು ನಿರೀಕ್ಷಿಸುತ್ತೇವೆ... ಉದ್ದೇಶಪೂರ್ವಕ ತಪ್ಪುಮಾಹಿತಿಯ ಎದುರು ಮೌನವಾಗಿರುವುದು ನಾನು ಒಪ್ಪಿಕೊಳ್ಳುವ ವಿಷಯವಲ್ಲ, ಆದ್ದರಿಂದ ನಾನು ಇದನ್ನು ಸ್ಪಷ್ಟವಾಗಿ ಮತ್ತು ನೇರವಾಗಿ ಹೇಳುತ್ತಿದ್ದೇನೆ,” ಎಂದು ಅವರು ಹೇಳಿದರು.