ರಮಾನಂದ ಸಾಗರ್ ಅವರ 'ರಾಮಾಯಣ' (1987-88) ಧಾರಾವಾಹಿಯಲ್ಲಿ ಲಕ್ಷ್ಮಣನ ಪಾತ್ರವನ್ನು ನಿರ್ವಹಿಸಿದ್ದ ಸುನಿಲ್ ಲಹರಿ, ಇಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರದ ಕುರಿತು ತಮ್ಮ ಪ್ರತಿಕ್ರಿಯೆಯನ್ನು ಹಂಚಿಕೊಂಡಿದ್ದಾರೆ. ಸುನಿಲ್ ಲಹರಿ ಇನ್ನೂ ಈ ಚಿತ್ರವನ್ನು ನೋಡಿಲ್ಲವಾದರೂ, ನಿತೇಶ್ ತಿವಾರಿ ಮತ್ತು ಅವರ ಇಡೀ ತಂಡವು ಒಂದು 'ಉತ್ತಮ' ಚಿತ್ರವನ್ನು ರೂಪಿಸಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡ ವಿಡಿಯೋ ಸಂದೇಶವೊಂದರಲ್ಲಿ, ಟ್ರೈಲರ್ನಲ್ಲಿ ತಮಗೆ ಕೇಳಿಸಿದ ಚಿತ್ರದ ಸಂಗೀತದ ಬಗ್ಗೆ ಮಾತ್ರ ಸುನೀಲ್ ಲಹರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
'ನನಗೆ ನಂಬಿಕೆಯಿದೆ... ನಿತೇಶ್ ಜಿ ಒಬ್ಬ ಅತ್ಯುತ್ತಮ ನಿರ್ದೇಶಕರು; ಅವರು ಹಿಂದೆ ಉತ್ತಮ ಚಿತ್ರಗಳನ್ನು ನೀಡಿದ್ದಾರೆ. ಸಂಗೀತವು ಬಹಳ ಪ್ರಮುಖ ಪಾತ್ರ ವಹಿಸುತ್ತದೆ—ಒಂದು ರೀತಿಯಲ್ಲಿ ಹೇಳಬೇಕೆಂದರೆ, ಅದು ಬೆನ್ನೆಲುಬಿನಂತೆ ಕಾರ್ಯನಿರ್ವಹಿಸುತ್ತದೆ. ಈ ಚಿತ್ರಕ್ಕಾಗಿ ನಾನು ಕೇಳಿರುವ ಸಂಗೀತದ ವಿಷಯಕ್ಕೆ ಬಂದರೆ, ಕೆಲವು ಹಾಡುಗಳು ನನಗೆ ಸ್ವಲ್ಪ ನಿರಾಶೆಯನ್ನುಂಟುಮಾಡಿದವು' ಎಂದಿದ್ದಾರೆ.
ಸಂಗೀತದಲ್ಲಿ ಅಯೋಧ್ಯೆ ಮತ್ತು ಮಿಥಿಲೆಯ ಸ್ಥಳೀಯ ಸೊಗಡು ಇರಬೇಕಿತ್ತು. ಆದರೆ ಅದು ಅಲ್ಲಿ 'ಕಾಣೆಯಾಗಿದೆ'. ತಾನು ಸಂಗೀತದ ವಿಷಯದಲ್ಲಿ ಪರಿಣಿತನಲ್ಲ; ಆದರೂ, ಒಬ್ಬ ಕೇಳುಗನಾಗಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ಚಿತ್ರವು ದೊಡ್ಡ ಮಟ್ಟದ ಯಶಸ್ಸನ್ನು ಕಾಣಲಿ ಎಂದು ಹಾರೈಸಿದ ಸುನೀಲ್ ಲಹರಿ, ಅನೇಕ ಜನರ ಜೀವನೋಪಾಯವು ಈ ಚಿತ್ರದೊಂದಿಗೆ ಬೆಸೆದುಕೊಂಡಿರುವುದರಿಂದ, ಇದು ಖಂಡಿತವಾಗಿಯೂ ದೊಡ್ಡ ಹಿಟ್ ಆಗಬೇಕಿದೆ ಎಂದು ಹೇಳಿದರು.
ರಾಮಾಯಣ ಚಿತ್ರಕ್ಕೆ ಖ್ಯಾತ ಸಂಗೀತ ಸಂಯೋಜಕರಾದ ಹ್ಯಾನ್ಸ್ ಝಿಮ್ಮರ್ ಮತ್ತು ಎ.ಆರ್. ರೆಹಮಾನ್ ಸಂಗೀತ ನೀಡಿದ್ದಾರೆ. ಈ ಇಬ್ಬರು ಸಂಗೀತ ಪ್ರತಿಭೆಗಳು ಒಟ್ಟಾಗಿ ಸೇರಿ, ಒಂದು ಚಿತ್ರಕ್ಕಾಗಿ ಸಂಗೀತ ಮತ್ತು ಹಿನ್ನೆಲೆ ಸಂಗೀತವನ್ನು (ಬ್ಯಾಕ್ಗ್ರೌಂಡ್ ಸ್ಕೋರ್) ಸಂಯೋಜಿಸಿರುವುದು ಇದೇ ಮೊದಲು.
ನಿತೇಶ್ ತಿವಾರಿ ಅವರ 'ರಾಮಾಯಣ' ಚಿತ್ರದ ಸಂಗೀತವು, ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಹೊರಗಡೆ ಟೀಕೆಗೆ ಗುರಿಯಾಗಿದೆ.
ಇತ್ತೀಚೆಗೆ, 'ಮಂಗಲ್ ರಂಗ್' ಹಾಡು, ಅದರಲ್ಲಿ ಸೂಫಿ-ಇಸ್ಲಾಮಿಕ್ ಕವ್ವಾಲಿಯ ಪ್ರಭಾವಗಳಿವೆ ಎಂಬ ಕಾರಣಕ್ಕೆ ಟೀಕೆಗೆ ಗುರಿಯಾಯಿತು.
ಈ ಚಿತ್ರವು ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದ್ದು, ಮೊದಲ ಭಾಗವು ದೀಪಾವಳಿಗೂ ಮುನ್ನ ನವೆಂಬರ್ 5ರಂದು; ಎರಡನೇ ಭಾಗವು 2028ರ ದೀಪಾವಳಿಯಂದು ಬಿಡುಗಡೆಯಾಗಲು ನಿಗದಿಯಾಗಿದೆ.