ಟಾಕ್ಸಿಕ್ ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಜೊತೆಗಿನ ಹಸಿಬಿಸಿ ದೃಶ್ಯಗಳ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಟ್ರೋಲಿಂಗ್ ಎದುರಿಸುತ್ತಿರುವ ಬಗ್ಗೆ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಮೌನ ಮುರಿದಿದ್ದಾರೆ. ಜೊತೆಗೆ ವಿವಾದಕ್ಕೆ ಪತಿ ಸಿದ್ಧಾರ್ಥ್ ಮಲ್ಹೋತ್ರಾ ಅವರ ಪ್ರತಿಕ್ರಿಯೆಯನ್ನು ಬಹಿರಂಗಪಡಿಸಿದ್ದಾರೆ.
ಕಾಫಿ ವಿತ್ ಕರಣ್ ಸೀಸನ್ 9 ರಲ್ಲಿ ತಮ್ಮ ಪತಿ ಹಾಗೂ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ಕಾಣಿಸಿಕೊಂಡ ಕಿಯಾರಾ ಅಡ್ವಾಣಿ, ತಬಾಹಿ ಟ್ರ್ಯಾಕ್ ಬಿಡುಗಡೆಯಾದ ನಂತರ ತಮ್ಮ ವಿರುದ್ಧದ ವೈಯಕ್ತಿಕ ಟೀಕೆಗಳನ್ನು ಉಲ್ಲೇಖಿಸಿದರು. ಇಂಟರ್ನೆಟ್‌ನ ಕೆಲವರು ಮದುವೆ ಮತ್ತು ತಾಯ್ತನದ ನಂತರವೂ ಇಂತಹ ದೃಶ್ಯಗಳಲ್ಲಿ ನಟಿಸಬೇಕಾ?" ಎಂದು ನೈತಿಕ ಪಾಠ ಮಾಡಲು ಶುರುಮಾಡಿದ್ದರು.
ಈ ಟ್ರೋಲಿಂಗ್ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ ಮತ್ತು ಅದನ್ನು ಎಂದಿಗೂ ಸಮಸ್ಯೆಯಾಗಿ ಪರಿಗಣಿಸಲಿಲ್ಲ ಎಂದು ನಟಿ ಕಿಯಾರಾ ಅವರು ಸ್ಪಷ್ಟಪಡಿಸಿದರು. ನಾವು ಎಂದೂ ಅದರ ಬಗ್ಗೆ ಮಾತನಾಡಿಲ್ಲ ಮತ್ತು ತಮ್ಮ ಮೇಲೆ ಅದು ಪರಿಣಾಮ ಬೀರಲಿಲ್ಲ" ಎಂದು ತಿಳಿಸಿದ್ದಾರೆ.
"ವಿವಾಹಿತ ಪುರುಷ ನಟರು ಎಷ್ಟೇ ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸಿದರೂ ಯಾರೂ ಪ್ರಶ್ನಿಸುವುದಿಲ್ಲ. ಆದರೆ ನಟಿಯರಿಗೆ ಮಾತ್ರ ಯಾಕೆ ಈ ನೈತಿಕ ಪೊಲೀಸ್‌ಗಿರಿ?" ಎಂದು ಕರಣ್ ಕೇಳಿದರು. ಅಲ್ಲದೆ, ಯಶ್ ಜೊತೆಗಿನ ಆ ದೃಶ್ಯಗಳ ಬಗ್ಗೆ ದೊಡ್ಡ ಗದ್ದಲವೇ ಎದ್ದಾಗ ನಿಮ್ಮ ಪತಿ ಸಿದ್ಧಾರ್ಥ್ ಹೇಗೆ ಪ್ರತಿಕ್ರಿಯಿಸಿದರು ಎಂದು ಕರಣ್ ನೇರವಾಗಿ ಪ್ರಶ್ನಿಸಿದರು.
ಕರಣ್ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಕಿಯಾರಾ, ಸಿದ್ಧಾರ್ಥ್ ಅವರಿಗೆ ಈ ವಿವಾದ ಕಿಂಚಿತ್ತೂ ಪರಿಣಾಮ ಬೀರಲಿಲ್ಲ ಎಂದು ಸ್ಪಷ್ಟಪಡಿಸಿದರು. "ಸಿದ್ಧಾರ್ಥ್‌ಗೆ ಇದರ ಬಗ್ಗೆ ಯಾವುದೇ ತಲೆಬಿಸಿ ಇರಲಿಲ್ಲ. ನಿಜ ಹೇಳಬೇಕೆಂದರೆ, ಅವರು ಈ ವಿಷಯವನ್ನು ನಮ್ಮ ಮನೆಯಲ್ಲಿ ಒಮ್ಮೆಯೂ ಪ್ರಸ್ತಾಪಿಸಲಿಲ್ಲ. ನಾವು ಇದರ ಬಗ್ಗೆ ಮಾತನಾಡಿಯೇ ಇಲ್ಲ. ಹೊರಗಡೆ ಎಷ್ಟೇ ಚರ್ಚೆಯಾದರೂ, ಅದು ನಮ್ಮಿಬ್ಬರ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಅವರು ನನ್ನ ಬೆಂಬಲಕ್ಕೆ ನಿಂತಿದ್ದರು" ಎಂದು ಕಿಯಾರಾ ಹೇಳಿದ್ದಾರೆ.