ಮುಂಬೈ: ‘ಹನುಮಾನ್ ಅಂಶ್’ ಚಿತ್ರವನ್ನು ಚಿತ್ರಮಂದಿರದಲ್ಲಿ ವೀಕ್ಷಿಸುತ್ತಿರುವ ಮುಸ್ಲಿಂ ವ್ಯಕ್ತಿಯೊಬ್ಬರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ.
ಉತ್ತರಾಖಂಡದ ಕೈಂಚಿ ಧಾಮ್ ಆಶ್ರಮದ ಖ್ಯಾತ ಧಾರ್ಮಿಕ ಗುರು ನೀಮ್ ಕರೋಲಿ ಬಾಬಾ ಅವರ ಜೀವನಾಧಾರಿತ ಕಥೆ ಹೊಂದಿರುವ ‘ಹನುಮಾನ್ ಅಂಶ್’ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಈಗಾಗಲೇ ಚಿತ್ರ 70 ಕೋಟಿ ರೂ ಅಧಿಕ ಹಣ ಗಳಿಸಿ ಯಶಸ್ವಿಯಾಗಿ ದೇಶಾದ್ಯಂತ ಪ್ರದರ್ಶನವಾಗುತ್ತಿದೆ.
ಈ ನಡುವೆ ಈ ಚಿತ್ರವನ್ನು ಮುಸ್ಲಿಂ ವ್ಯಕ್ತಿಯೊಬ್ಬರು ವೀಕ್ಷಿಸುತ್ತಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗಿದೆ. ವಿಡಿಯೋದಲ್ಲಿ ಬಿಳಿ ಕುರ್ತಾ-ಪೈಜಾಮಾ ಹಾಗೂ ಬಿಳಿ ಟೋಪಿ ಧರಿಸಿರುವ ವ್ಯಕ್ತಿಯೊಬ್ಬರು ಚಿತ್ರಮಂದಿರದ ಸೀಟಿನಲ್ಲಿ ಬರಿಗಾಲಿನಲ್ಲಿ ಕುಳಿತು ಸಿನಿಮಾ ವೀಕ್ಷಿಸುತ್ತಿರುವುದು ಕಂಡುಬಂದಿದೆ.
ಅವರು ಸಿನಿಮಾ ವೀಕ್ಷಣೆಯಲ್ಲಿ ಸಂಪೂರ್ಣ ತಲ್ಲೀನರಾಗಿರುವಂತೆ ಕಾಣುತ್ತಿದ್ದು, ಯಾರೋ ತಮ್ಮ ವಿಡಿಯೋ ಮಾಡುತ್ತಿರುವುದರ ಬಗ್ಗೆಯೂ ಯಾವುದೇ ಅಸಮಾಧಾನ ವ್ಯಕ್ತಪಡಿಸಿಲ್ಲ.
ವ್ಯಾಪಕ ಪ್ರತಿಕ್ರಿಯೆ
ಈ ವಿಡಿಯೋ ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದಂತೆ, ಸಾಮಾಜಿಕ ಜಾಲತಾಣ ಬಳಕೆದಾರರು ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಒಬ್ಬ ನೆಟ್ಟಿಗ “ರಾಜಕೀಯವಿಲ್ಲದ ಭಾರತ” ಎಂದು ಪ್ರತಿಕ್ರಿಯಿಸಿದ್ದರೆ, ಮತ್ತೊಬ್ಬರು “ದಶಕಗಳಿಂದ ನಡೆಯುತ್ತಿರುವ ರಾಜಕೀಯ ಧ್ರುವೀಕರಣದಿಂದ ಅವರ ಮನಸ್ಸನ್ನು ಕಲುಷಿತಗೊಳಿಸಲು ಸಾಧ್ಯವಾಗಲಿಲ್ಲ” ಎಂದು ಬರೆದಿದ್ದಾರೆ.
1.8 ಕೋಟಿ ರೂ ಬಜೆಟ್, 62 ಕೋಟಿ ರೂಗೂ ಅಧಿಕ ಗಳಿಕೆ
ಸುಮಾರು 1.8 ಕೋಟಿ ರೂ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ ಎನ್ನಲಾಗಿರುವ ‘ಹನುಮಾನ್ ಅಂಶ್’ ಚಿತ್ರವು ಭಾರತದಲ್ಲಿ ಸುಮಾರು 10 ಲಕ್ಷ ರೂನ ಆರಂಭಿಕ ಗಳಿಕೆ ಕಂಡಿತ್ತು. 28ನೇ ದಿನದ ವೇಳೆಗೆ ಚಿತ್ರದ ನಿವ್ವಳ ಗಳಿಕೆ 62 ಕೋಟಿ ರೂಗೂ ಅಧಿಕವಾಗಿದೆ ಎಂದು ವರದಿಯಾಗಿದೆ.
ಚಿತ್ರಕ್ಕೆ ದೊರೆತ ಉತ್ತಮ ಮೌಖಿಕ ಪ್ರಚಾರದಿಂದಾಗಿ ಥಿಯೇಟರ್‌ಗಳಲ್ಲಿ ಪ್ರದರ್ಶನ ಮುಂದುವರಿದಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಅಂದಹಾಗೆ ‘ಹನುಮಾನ್ ಅಂಶ್’ ಚಿತ್ರವು 2026ರ ಆಗಸ್ಟ್ 7ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು.
ಯಾರು ಈ ನೀಮ್ ಕರೋಲಿ ಬಾಬಾ?
ನೀಮ್ ಕರೋಲಿ ಬಾಬಾ ಅವರು ಸುಮಾರು 1900ರಲ್ಲಿ ಉತ್ತರ ಪ್ರದೇಶದ ಅಕ್ಬರ್‌ಪುರದಲ್ಲಿ ಲಕ್ಷ್ಮಣ್ ನಾರಾಯಣ್ ಶರ್ಮಾ ಎಂಬ ಹೆಸರಿನಲ್ಲಿ ಜನಿಸಿದ್ದರು ಎಂದು ಹೇಳಲಾಗುತ್ತದೆ. ಅವರು ಭಾರತೀಯ ಗುರು ಹಾಗೂ ಹನುಮಂತನ ಪರಮ ಭಕ್ತರಾಗಿದ್ದರು.
1960 ಮತ್ತು 1970ರ ದಶಕಗಳಲ್ಲಿ ಕೈಂಚಿ ಧಾಮ್ ಹಾಗೂ ವೃಂದಾವನದಲ್ಲಿನ ಅವರ ಆಶ್ರಮಗಳ ಮೂಲಕ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧರಾದರು. ಅಮೆರಿಕದ ಹಾರ್ವರ್ಡ್ ಮನೋವಿಜ್ಞಾನಿ ರಿಚರ್ಡ್ ಆಲ್ಪರ್ಟ್ (ರಾಮ್ ದಾಸ್) ಸೇರಿದಂತೆ ಅನೇಕ ಪಾಶ್ಚಾತ್ಯ ಆಧ್ಯಾತ್ಮಿಕ ಸಾಧಕರು ಅವರ ಬೋಧನೆಗಳಿಂದ ಪ್ರಭಾವಿತರಾಗಿದ್ದರು.
ಅವರ ಬೋಧನೆಗಳಲ್ಲಿ ನಿಸ್ವಾರ್ಥ ಸೇವೆ ಹಾಗೂ ಭಕ್ತಿ ಪ್ರಮುಖವಾಗಿದ್ದವು. “ಎಲ್ಲರನ್ನೂ ಪ್ರೀತಿಸಿ, ಎಲ್ಲರಿಗೂ ಸೇವೆ ಮಾಡಿ, ಎಲ್ಲರಿಗೂ ಆಹಾರ ನೀಡಿ” ಎಂಬ ಸಂದೇಶ ಅವರ ಬೋಧನೆಗಳೊಂದಿಗೆ ಪ್ರಸಿದ್ಧವಾಗಿದೆ.
ಅವರ ಜೀವನಕ್ಕೆ ಸಂಬಂಧಿಸಿದ ಹಲವು ಪವಾಡಗಳ ಕಥೆಗಳನ್ನು ಅನುಯಾಯಿಗಳು ಹೇಳಿಕೊಂಡಿದ್ದರೂ, ಅವುಗಳನ್ನು ಐತಿಹಾಸಿಕ ದಾಖಲೆಗಳಿಗಿಂತ ಅವರ ಆಧ್ಯಾತ್ಮಿಕ ಪರಂಪರೆಯ ಭಾಗವಾಗಿ ಪರಿಗಣಿಸಲಾಗುತ್ತದೆ.
1973ರ ಸೆಪ್ಟೆಂಬರ್ 11ರಂದು ವೃಂದಾವನದಲ್ಲಿ ಅವರು ನಿಧನರಾದ ಬಳಿಕವೂ ಅವರ ಪ್ರಭಾವ ಜಾಗತಿಕವಾಗಿ ವಿಸ್ತರಿಸಿತು. ಸ್ಟೀವ್ ಜಾಬ್ಸ್, ಮಾರ್ಕ್ ಜುಕರ್‌ಬರ್ಗ್ ಹಾಗೂ ಜೂಲಿಯಾ ರಾಬರ್ಟ್ಸ್ ಸೇರಿದಂತೆ ಹಲವು ಪ್ರಸಿದ್ಧ ಪಾಶ್ಚಾತ್ಯ ವ್ಯಕ್ತಿಗಳು ಕೈಂಚಿ ಧಾಮ್ ಆಶ್ರಮಕ್ಕೆ ಭೇಟಿ ನೀಡಿದ್ದರು ಎಂದು ವರದಿಯಾಗಿದೆ.
ಇತ್ತೀಚೆಗೆ ಮಿರಾಜ್ ಸಿನಿಮಾ ಸಂಸ್ಥೆಯು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ನೀಮ್ ಕರೋಲಿ ಬಾಬಾ ತಮ್ಮ ಭಕ್ತರೊಂದಿಗೆ ಚಿತ್ರ ವೀಕ್ಷಿಸಲಿದ್ದಾರೆ ಎಂಬ ನಂಬಿಕೆಯಿಂದ ಸೀಟ್ ನಂಬರ್ 9 ಅನ್ನು ಅವರಿಗಾಗಿ ಕಾಯ್ದಿರಿಸಲು ನಿರ್ಧರಿಸಿರುವುದಾಗಿ ತಿಳಿಸಿತ್ತು.