ಬಾಲಿವುಡ್ ಸಿನಿಮಾ ಎಂದಾಕ್ಷಣ ಕಾರ್ಪೊರೇಟ್ ಜಗತ್ತಿನ ಕಲ್ಪಿತ ಕಥೆಗಳು, 'ಮಸಾಲೆ'ಯನ್ನು ತುಸು ಹೆಚ್ಚಾಗಿ ತಿಂದು ಕೊಬ್ಬಿರುವ ಚಿತ್ರಗಳೇ ಹೆಚ್ಚು ನೆನಪಾಗುತ್ತವೆ. ಆದರೆ ಈಗ ಕಾಲ ಬದಲಾಗುತ್ತಿದೆ. ಹೊಸ ಆಲೋಚನೆಯೊಂದು ಹೊರಳುತ್ತಿದೆ. ಹೀಗಾಗಿ ಬಾಲಿವುಡ್‌ನಲ್ಲಿ ಕಟ್ಟು ಕಥೆಗಳಿಗೆ ಮೂಟೆ ಕಟ್ಟುವ ಕಾಲ ಹತ್ತಿರವಾಗಿದೆಯೇ? ಗೊತ್ತಿಲ್ಲ. ಆದರೆ, ಬಾಂಬೆ ಟಾಕೀಸ್‌ನಲ್ಲಿ ಸಣ್ಣ ಮಟ್ಟದಲ್ಲಿ ಅಂಥದ್ದೊಂದು ಹೊಸ ಅಲೋಚನಾ ಕ್ರಮದ ಚಿತ್ರಗಳು ಸದ್ದು ಮಾಡುತ್ತಿವೆ. ಬಾಲಿವುಡ್ ತನ್ನ ಮೂಲ ನೆಲೆಯನ್ನು ಬದಲಿಸಿಕೊಳ್ಳುತ್ತಿದೆ. ಮುಂಬೈ ಸಿನಿಮಾ ಮಂದಿ ಪ್ರಚಲಿತ ವಿದ್ಯಮಾನಗಳು, ವ್ಯಕ್ತಿ ಮತ್ತು ವ್ಯಕ್ತಿತ್ವಗಳ ಹಾಗೂ ನಿಜ ಜೀವನದ ಘಟನೆಗಳತ್ತ ದೃಷ್ಟಿ ನೆಟ್ಟಿದ್ದಾರೆ.
ಬಿಟೌನ್ ಚಿತ್ರರಂಗದ ಈ ಬೆಳವಣಿಗೆಯನ್ನು ಪೂರ್ಣ ಪ್ರಮಾಣದಲ್ಲಿ ಹೊಸ ಅಲೆ ಎಂದು ಬ್ರ್ಯಾಂಡ್ ಮಾಡಲಾಗದಿದ್ದರೂ ಹೊಸತನ ಹೊಂದಿದಂಥ ಚಿತ್ರಗಳಂತೂ ಬರಲಾರಂಭಿಸಿವೆ. ಒಬ್ಬ ಪ್ರಾಮಾಣಿಕ ಕ್ರೀಡಾಪಟು ವ್ಯವಸ್ಥೆಯ ಪಿತೂರಿಗೆ ಸಿಲುಕಿ ಅನಿವಾರ್ಯವಾಗಿ ಡಕಾಯಿತನ ಪಟ್ಟ ಅಲಂಕರಿಸಿ ಬಲಿಯಾಗುವ 'ಪಾನ್ ಸಿಂಗ್ ತೋಮರ್' ಚಿತ್ರವನ್ನೇ ತೆಗೆದುಕೊಳ್ಳಿ. ಹಿಂದಿ ಸಿನಿಮಾದ ಲೆಕ್ಕಾಚಾರಗಳಿಗೆ ಒಗ್ಗುವಂಥ ಯಾವುದೇ ಅಂಶಗಳಿಲ್ಲ. ಆದರೂ ಆ ಚಿತ್ರ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಮೂಲಕ 'ಸಿನಿಮಾಸಕ್ತ'ರನ್ನೂ, ಬಾಕ್ಸ್ ಆಫೀಸ್‌ನಲ್ಲಿ ಕಾಸು ಮಾಡುವ ಮೂಲಕ 'ಸಿನಿಮಾ ಪ್ರೇಕ್ಷಕ'ರನ್ನೂ... ಏಕಕಾಲದಲ್ಲಿ ಎರಡೂ ವರ್ಗದವರನ್ನು ತನ್ನತ್ತ ಸೆಳೆಯಿತು. ಪಾನ್ ಸಿಂಗ್ ತೋಮರ್‌ನ ಪಾತ್ರದಲ್ಲಿ ಕಾಣಿಸಿಕೊಂಡ ಇರ್ಫಾನ್ ಖಾನ್ ಪ್ರೇಕ್ಷಕನ ನೆಚ್ಚಿನ ನಟನಾಗಿಬಿಟ್ಟ. ನಿರೂಪಣೆ, ಮೇಕಿಂಗ್, ಕಥೆಯಲ್ಲಿ ಒಂಚೂರು ಹೆಚ್ಚೂಕಮ್ಮಿಯಾಗಿದ್ದರೂ ಕೇವಲ 'ಸಂವಾದಗೋಷ್ಠಿ'ಗಳಿಗಷ್ಟೇ ಸೀಮಿತವಾಗಬಹುದಾದ 'ಕಹಾನಿ' ಚಿತ್ರ ಗಲ್ಲಾಪೆಟ್ಟಿಗೆಯಲ್ಲೂ ಸದ್ದು ಮಾಡಿದ್ದಲ್ಲದೇ, ಅವಾರ್ಡ್ ಸ್ಟೋರ್‌ನಲ್ಲೂ ಹೆಚ್ಚು ಸ್ಕೋರ್ ಮಾಡುವ ಮಟ್ಟಿಗೆ ಅಕಾಡೆಮಿಕ್ ಆಗಿ ಪ್ರಭಾವ ಬೀರಿತು. 'ಚಕ್ರವ್ಯೂಹ' ಚಿತ್ರ ಹೆಚ್ಚು ಕಾಸು ಮಾಡದಿದ್ದರೂ, ಅದರ ಕಥೆ ಕಳಪೆಯೇನಾಗಿರಲಿಲ್ಲ.
'ಭಾಗ್ ಮಿಲ್ಖಾ ಭಾಗ್'ನಲ್ಲಿ 'ಚೆನ್ನೈ ಎಕ್ಸ್‌ಪ್ರೆಸ್' ಚಿತ್ರದಲ್ಲಿರುವಷ್ಟು ಸ್ಟಾರ್ ನಟರು ಇಲ್ಲದಿದ್ದರೂ ಕೋಟಿಗಳ ಲೆಕ್ಕದಲ್ಲಿ ಹಣ ಮಾಡಿದೆ. ಇನ್ನು 'ಕಹಾನಿ', ಚರ್ಚೆ ಹುಟ್ಟಿ ಹಾಕಿದ ಸಿನಿಮಾ. 'ಗ್ಯಾಂಗ್ಸ್ ಆಫ್ ವಸ್ಸೇಪುರ್' ಚಿತ್ರ ಪ್ರಚಲಿತ ವಿದ್ಯಮಾನ ಎನ್ನುವ ಕಾರಣಕ್ಕೆ ಸದ್ದುಮಾಡಿತು.
ಹೀಗೆ ಹೊಸ ಅಲೋಚನೆಯಲ್ಲಿ ಮೂಡಿ ಬರುತ್ತಿರುವ ಚಿತ್ರಗಳು ವ್ಯಕ್ತಿ, ವ್ಯಕ್ತಿತ್ವಗಳ ಕಥೆ, ಪ್ರಚಲಿತ ಅಥವಾ ನೈಜ ಘಟನೆಗಳನ್ನು ಒಳಗೊಂಡಿವೆ ಹಾಗೂ ಒಳಗೊಳ್ಳುತ್ತಿವೆ. ಮುಖ್ಯವಾಗಿ ಪೊಲಿಟಿಕಲ್ ಟ್ರೆಂಡ್ ಹಿಂದೆ ಬಾಲಿವುಡ್ ಹೆಜ್ಜೆ ಹಾಕುತ್ತಿದೆ. ಹೀಗಾಗಿ ಹುಡುಗಿಯರಿಗಿಂತ ತಾನೇನು ಕಮ್ಮಿ ಇಲ್ಲ ಅಂತ ಬಾಡಿ ಶೋ ಮಾಡುವ ಜಾನ್ ಅಬ್ರಹಾಂನಂಥ ಸಿಕ್ಸ್‌ಪ್ಯಾಕ್ ನಟ ಸಹ ಶ್ರೀಲಂಕಾ ರಾಜಕೀಯ ವಸ್ತುವನ್ನೊಳಗೊಂಡ 'ಮದ್ರಾಸ್ ಕೆಫೆ' ಚಿತ್ರದಲ್ಲಿ ಮೆರೆಯುತ್ತಾನೆ. ಬಿಡುಗಡೆಯ ಹಾದಿಯಲ್ಲಿರುವ ಈ ಚಿತ್ರದಲ್ಲಿ ಕನ್ನಡಿಗ ಪ್ರಕಾಶ್ ಬೆಳವಾಡಿ ಕೂಡ ಅಭಿನಯಿಸಿದ್ದಾರೆ. ಎರಡು ಭಾಗಗಳಲ್ಲಿ ಬಂದ ಬಿಹಾರದ ರಕ್ತಚರಿತ್ರೆಯನ್ನು ತೆರೆದಿಡುವ ಅನುರಾಗ್ ಕಶ್ಯಪ್‌ರ 'ಗ್ಯಾಂಗ್ಸ್ ಆಫ್ ವಸ್ಸೇಪುರ್' ಆಗಿರಬಹುದು, ಶ್ರೀಲಂಕಾದ ಎಲ್‌ಟಿಟಿಇ ಹೋರಾಟ, ಇದರ ಸುತ್ತ ಭಾರತ, ಪಾಕಿಸ್ತಾನಗಳ ಪಾತ್ರವನ್ನು ಹೇಳುವ 'ಮದ್ರಾಸ್ ಕೆಫೆ', ವ್ಯವಸ್ಥೆಯ ವಿರುದ್ಧ ತಿರುಗಿ ಬೀಳುವ ಪ್ರಕಾಶ್ ಝಾ ಅವರ 'ಚಕ್ರವ್ಯೂಹ', ಆಕಾಶದ ಎತ್ತರಕ್ಕೆ ಬೆಳಗಿದ ಕ್ರೀಡಾಪಟುಗಳ ಬದುಕನ್ನು ತೆರೆದಿಡುವ ಟಿಗ್‌ಮಾನ್ಷು ಧುಲಿಯಾರ 'ಪಾನ್ ಸಿಂಗ್ ತೋಮರ್', ರಾಕೇಶ್ ಓಂಪ್ರಕಾಶ್ ಮೆಹ್ರಾನ 'ಭಾಗ್ ಮಿಲ್ಖಾ ಭಾಗ್' ಚಿತ್ರಗಳಿಗೆ ಕಟ್ಟು ಕಥೆಗಳ ಬಣ್ಣವಿಲ್ಲ.
ಪ್ರತಿ ಚಿತ್ರವೂ ನೈಜತೆಯ ಸ್ಪರ್ಶದಲ್ಲಿ ಹುಟ್ಟಿಕೊಂಡ ದೃಶ್ಯ ಚಿತ್ತಾರಗಳು. ಇನ್ನು 'ಕಹಾನಿ' ಚಿತ್ರ ಕಲ್ಪಿತ ಎನಿಸಿದರೂ ಬಾಂಬೆ ಗಲ್ಲಿ ಅಥವಾ ನಮ್ಮ ಸುತ್ತಲಿನ ಯಾರದ್ದೋ ಕಣ್ಣೀರ ಕಥೆ ಎನಿಸುತ್ತದೆ. ಅಷ್ಟರ ಮಟ್ಟಿಗೆ ಆ ಚಿತ್ರ ನಮ್ಮನ್ನು ಪ್ರಭಾವಿಸುತ್ತದೆ. ಹೀಗೆ ಇತ್ತೀಚಿನ ದಿನಗಳಲ್ಲಿ ವ್ಯಕ್ತಿ ಅಥವಾ ರಾಜಕೀಯ ಕೇಂದ್ರಿತ ಕಥಾವಸ್ತುಗಳನ್ನು ಬೆನ್ನತ್ತಿ ಹೋಗುತ್ತಿರುವ ಬಾಲಿವುಡ್‌ಗೆ ಒಂದು ಹಂತದಲ್ಲಿ ಹಾಲಿವುಡ್‌ನ 'ಲಿಂಕನ್' ಚಿತ್ರ ಸ್ಫೂರ್ತಿ ಎನ್ನಬಹುದು. ಈ ಚಿತ್ರದ ಪ್ರಚಾರಕ್ಕೆ ಸ್ವತಃ ನಿರ್ದೇಶಕ ಸ್ಟೀವನ್ ಸ್ಪೀಲ್ಬರ್ಗ್ ಬಾಂಬೆಗೆ ಬಂದಿದ್ದರು. ಹಾಗೆ ನೋಡಿದರೆ ಹಿಂದಿನಿಂದಲೂ ಇಂಥ ಹೊಸ ಅಲೋಚನೆಯ ಒಂದಿಷ್ಟು ರಾಜಕೀಯ ಸಿನಿಮಾಗಳು ಬಂದಿವೆ. ಆದರೆ ಹೊಸ ತಲೆಮಾರಿನ ಬಾಲಿವುಡ್ ಮಂದಿಗೆ 'ಲಿಂಕನ್' ಹೆಚ್ಚು ಸ್ಫೂರ್ತಿಯಾದಂತಿದೆ. ಆನಂದ್ ಗಾಂಧಿ ನಿರ್ದೇಶನದ 'ಶಿಪ್ ಆಫ್ ಥಿಸಿಯಸ್' ಚಿತ್ರದ ಹಿಂದೆ ಬಾಲಿವುಡ್ ಮಂದಿ ಇರುವುದರಿಂದ ಇದು ಬಾಂಬೆ ಚಿತ್ರ. ಆರಂಭದಲ್ಲೇ ತನ್ನ ಪೋಸ್ಟರ್‌ಗಳ ಮೂಲಕ ಗಮನ ಸೆಳೆದ ಈ ಚಿತ್ರದ ಕಥೆ ಕೂಡ ತುಂಬಾ ಭಿನ್ನ. ಅಂಗಾಂಗ ದಾನ, ಒಬ್ಬರ ನೆರವಿನಿಂದ ಮತ್ತೊಬ್ಬರ ಜೀವನ ಇತ್ಯಾದಿ ಸಾಮಾಜಿಕ ಕಳಕಳಿ ಅಂಶಗಳನ್ನಿಟ್ಟುಕೊಂಡು ಮೂಡಿ ಬಂದಿರುವ ಈ ಚಿತ್ರ ಜನ ಮೆಚ್ಚುಗೆಗೆ ಪಾತ್ರವಾಗಿದೆ. 'ಬಾಲಿವುಡ್ ಈಗ ಬಾಂಬೆಗೆ ಮಾತ್ರ ಸೀಮಿತವಾಗಿಲ್ಲ. ಕಥೆಗಳ ಆಯ್ಕೆ, ಉತ್ತಮ ಚಿತ್ರಗಳಿಂದ ಒಂದೇ ರೀತಿಯ ಸಿನಿಮಾ ಸೂತ್ರಗಳಿಂದ ಹೊರಬಂದಿದೆ. 'ದಬಾಂಗ್', 'ಯೇ ಜವಾನಿ ಹೈ ದಿವಾನಿ' ಚಿತ್ರಗಳ ನಡುವೆಯೂ 'ಪಾನ್ ಸಿಂಗ್ ತೋಮರ್', 'ಕಹಾನಿ'ಯಂಥ ಸದಭಿರುಚಿಯ ಚಿತ್ರಗಳನ್ನೂ ಜನ ಮೆಚ್ಚಿಕೊಳ್ಳುತ್ತಿದ್ದಾರೆ'- ಅಮೀರ್‌ಖಾನ್ ಪತ್ನಿ ಕಿರಣ್ ರಾವ್ 'ಶಿಪ್ ಆಫ್ ಥೀಸಿಯಸ್'ನ ಪ್ರಚಾರಕ್ಕೆ ಬೆಂಗಳೂರಿಗೆ ಬಂದಾಗ ಹೇಳಿದ ಮಾತಿದು. ಅವರ ಪ್ರಕಾರ, ಬಾಲಿವುಡ್ ಬದಲಾಗುತ್ತದೆ.
ಕನ್ನಡದಲ್ಲೂ ರಾಜಕೀಯ ಅಥವಾ ಪ್ರಚಲಿತ, ವ್ಯಕ್ತಿ ಕೇಂದ್ರಿತ ಚಿತ್ರಗಳು ಬರುತ್ತಿವೆ. ಆದರೆ ಅವುಗಳನ್ನು ನಾವು 'ಆರ್ಟ್' ವರ್ಗಕ್ಕೆ ಸೇರಿಸಿದ್ದೇವೆ. ಅಲ್ಲದೆ, ಅಂಥ ಚಿತ್ರಗಳು ಬಿಡುಗಡೆಯಾಗುವ ಬದಲು ಸಂವಾದಗಳಿಗೆ, ಪ್ರಶಸ್ತಿಗಳಿಗೆ ಸೀಮಿತ ಎನ್ನುವ ಅರೋಪಗಳೂ ಇವೆ. ಆದರೆ ಬಾಲಿವುಡ್‌ನಂತೆ ಜನಪ್ರಿಯ ಸೂತ್ರಗಳನ್ನು ಆಧರಿಸಿ ಹೊಸ ಅಲೋಚನೆಯ ಸಿನಿಮಾಗಳನ್ನು ಮಾಡಬೇಕಾದ ಗಾಂಧಿನಗರದ ಮಂದಿ ಪಾಕಿಸ್ತಾನದ ವೀಣಾ ಮಲ್ಲಿಕ್‌ರ ಚರ್ಮವನ್ನೇ ಹೆಚ್ಚು ನಂಬಿಕೊಂಡಂತೆ ಕಾಣುತ್ತಿದ್ದಾರೆ. ಹೀಗಾಗಿ ಬಾಲಿವುಡ್‌ನ ಈ ಹೊಸ ಗಾಳಿ ಕನ್ನಡಕ್ಕೆ ಯಾವಾಗ ತಟ್ಟುವುದು?
ಆಗಿನ ಹೊಸ ಅಲೆ
ಹಾಗೆ ನೋಡಿದರೆ ಬಾಲಿವುಡ್‌ನಲ್ಲಿ ಬದುಕಿಗೆ ಸಂಬಂಧವಿಲ್ಲದ ಕಲ್ಪಿತ ಅಥವಾ ಭ್ರಮಾಲೋಕದ ಚಿತ್ರಗಳ ನಡುವೆಯೂ ಭಾರತೀಯ ಚಿತ್ರರಂಗವೇ ಮೆಚ್ಚಿಕೊಳ್ಳುವಂಥ ನಿಜವಾದ ಅರ್ಥದಲ್ಲಿ ಹೊಸ ರೀತಿಯ ಚಿತ್ರಗಳು ಸಾಕಷ್ಟು ಬಂದಿವೆ. 'ಭೂಮಿಕಾ', 'ಅಂಕುರ್', 'ಮಂಥನ್', 'ನಿಶಾಂತ್', 'ತ್ರಿಕಾಲ್', 'ಸಲಾಂ ಬಾಂಬೆ', 'ಮಿಸಿಸಿಪಿ ಮಸಾಲ', 'ಮಾನ್‌ಸೂನ್ ವೆಡ್ಡಿಂಗ್' ಮುಂತಾದವು. ಶ್ಯಾಮ್ ಬೆನಗಲ್, ಹೃಷಿಕೇಶ್ ಮುಖರ್ಜಿ, ಮಧುರ್ ಭಂಡಾರ್‌ಕರ್, ಮೀರಾ ನಾಯರ್ ಮುಂತಾದವರ ನಿರ್ದೇಶನದ ಗರಡಿಯಲ್ಲಿ ಇಂಥ ಹೊಸ ಅಲೆಯ ಚಿತ್ರಗಳು ಬಂದಿವೆ. ಆದರೆ 'ಬಿ'ಟೌನ್‌ನಲ್ಲಿ ಸ್ಕಿನ್ ಶೋ ಚಿತ್ರಗಳೇ ಹೆಚ್ಚು ಅಬ್ಬರಿಸಿವೆ. ಹೊಸ ಅಲೆಗೆ ಮಹತ್ವ ಸಿಕ್ಕಿದ್ದು ಕಡಿಮೆ. <
ಪಕ್ಕದ್ಮನೆ ದೋಸೆಯೇ ಚೆಂದ!
ಬಾಲಿವುಡ್ ಕಣ್ಣೀಗ ದಕ್ಷಿಣ ಭಾರತದ ಚಿತ್ರರಂಗದ ಮೇಲೆ ಬಿದ್ದಿದೆ. ತೆಲುಗು, ತಮಿಳು ಚಿತ್ರಗಳನ್ನು ಯಥವತ್ತಾಗಿ ಕಾಪಿ ಮಾಡುತ್ತಿದ್ದಾರೆ. ಅಕ್ಷಯ್ ಕುಮಾರ್‌ರಂಥ ಸ್ಮಾರ್ಟ್ ಹೀರೋ ಕೂಡ ಮೀಸೆಯೊಂದಿಗೆ 'ರೌಡಿ ರಾಥೋಡ್' ಎಂದು ಅಬ್ಬರಿಸಿ ಬಾಕ್ಸ್ ಆಫೀಸ್‌ನಲ್ಲಿ ಕಾಸು ಕೊಳ್ಳೆ ಹೊಡೆದರು. ಇವರಿಗೆ ಬ್ರೇಕ್ ಕೊಟ್ಟ 'ಸಿಂಗ್ ಈಸ್ ಕಿಂಗ್' ಕೂಡ ತೆಲುಗು ನೆಲದ್ದೇ. ಸಲ್ಮಾನ್ ಖಾನ್‌ರ 'ಬಾಡಿಗಾರ್ಡ್' ಕೇರಳದಿಂದ ಆಮದಾಗಿದ್ದು. ಈ ಮೂರು ಚಿತ್ರಗಳು ಹಿಟ್ ಆದ ಮೇಲೆ ಉತ್ತರದವರಿಗೆ ದಕ್ಷಿಣದವರ ಮೇಲೆ ಎಲ್ಲಿಲ್ಲದ ಮಮಕಾರ. ಶಾರುಖ್ ಖಾನ್‌ರ 'ಚೆನ್ನೈ ಎಕ್ಸ್‌ಪ್ರೆಸ್' ಕೋಟಿ ಕೋಟಿ ಹಣ ಮಾಡುತ್ತಿರಬಹುದು. ಆದರೆ ಆ ಚಿತ್ರದಲ್ಲಿರುವುದು ಪಕ್ಕಾ ದಕ್ಷಿಣದ ಅಂಶಗಳೇ. ಮಹೇಶ್ ಬಾಬುರ 'ಒಕ್ಕಡು', ಪವನ್ ಕಲ್ಯಾಣ್‌ರ 'ಗುಡುಂಬಾ ಶಂಕರ್' ಚಿತ್ರಗಳ ಎಳೆಗಳು. ಜೊತೆಗೆ ಶಾರುಖ್ ಖಾನ್‌ರ ಒಂದಿಷ್ಟು ಹಳೇ ಚಿತ್ರಗಳ ನೆರಳು. ತೆಲುಗು ಚಿತ್ರರಂಗದ ಮಂದಿ ಕೂಡ ಪಕ್ಕದ್ಮನೆಯತ್ತ ಬಗ್ಗಿ ನೋಡುವ ಸಂಸ್ಕೃತಿಯೇನೂ ಬಿಟ್ಟಿಲ್ಲ. ರಾಣಾ ಅಭಿನಯದ 'ಕೃಷ್ಣಂ ವಂದೇ ಜಗದ್ಗುರಂ' ತೆಲುಗು ಚಿತ್ರವಾದರೂ ಅದರ ಮುಕ್ಕಾಲು ಪಾಲು ಕಥಾವಸ್ತು ಮತ್ತು ಅದು ನಡೆಯುವ ಪರಿಸರ ಕರ್ನಾಟಕದ ಬಳ್ಳಾರಿಯಲ್ಲಿ. ಇದರ ನಡುವೆ ಕನ್ನಡ ಚಿತ್ರರಂಗ ಕೂಡ ಯಾವುದೇ ಸ್ವಂತಿಕೆ ಇಲ್ಲದೆ 'ಪಕ್ಕದ್ಮನೆ ದೋಸೆನೇ ಸೂಪರ್' ಎಂದುಕೊಂಡು ರಿಮೇಕ್‌ನಲ್ಲಿ ಮುಳಗಿದೆ.
- ಆರ್. ಕೇಶವಮೂರ್ತಿ