ಸಿನಿಮಾ ಲೇಖನ

ಸಿನಿಮಾ ಜಿವಿ, ಭಾವ ಜಿವಿ

ಯೋಗರಾಜ ಭಟ್ರು ಮತ್ತು ಸೂರಿ ಎಂಬ ಗಾಡ್‌ಫಾದರ್‌ಗಳ ಆಶೀರ್ವಾದದಿಂದ ಗಾಡ್ ಮೇಲೆ ಭಾರ ಹಾಕಿ 'ದ್ಯಾವ್ರೇ' ಸಿನಿಮಾ ಮಾಡಿದ್ದಾರೆ ವಿಜಿ...

ಇವ್ರು ಬಾಲಿವುಡ್‌ನ 'ಆರ್‌ಜಿವಿ' ಅಲ್ಲ, ಬರೀ 'ಜಿ.ವಿ', ಗಡ್ಡ ವಿಜಿ. ಆದರೆ ಅಪ್ಪಟ ಸಿನಿಮಾ 'ಜಿ.ವಿ'. ಮುಖ ನೋಡಿದರೆ ಸ್ವಲ್ಪ ಭಾವ'ಜಿ.ವಿ' ಅನ್ನೋ ಅನುಮಾನವೂ ಬರಬಹುದು. ಯೋಗರಾಜಭಟ್ಟರ ಕ್ಯಾಂಪಿನ ಮಾಸ್ಟರ್‌ಮೈಂಡ್‌ಗಳಲ್ಲಿ ಒಬ್ಬರಾದ ವಿಜಿ ಈಗ ತಮ್ಮ ನಿರ್ದೇಶನದ ಮೊದಲ ಸಿನಿಮಾ ಬಿಡುಗಡೆ ಮಾಡಲು ತಯಾರಾಗಿದ್ದಾರೆ.
ಯೋಗರಾಜ ಭಟ್ರು ಮತ್ತು ಸೂರಿ ಎಂಬ ಗಾಡ್‌ಫಾದರ್‌ಗಳ ಆಶೀರ್ವಾದದಿಂದ ಗಾಡ್ ಮೇಲೆ ಭಾರ ಹಾಕಿ 'ದ್ಯಾವ್ರೇ' ಸಿನಿಮಾ ಮಾಡಿದ್ದಾರೆ ವಿಜಿ. ಆದ್ರೆ ಇದು 'ಐ ಆ್ಯಮ್ ಗಾಡ್‌' ಎನ್ನುವ ಉಪೇಂದ್ರರ ಸಿನಿಮಾ ಅಲ್ಲ. ಭಟ್ರು ಈ ಮುಂಚೆ 'ಪರಮಾತ್ಮ' ಮಾಡಿದ್ರು, ಈಗ ವಿಜಿ ಕೂಡ 'ದ್ಯಾವ್ರೇ' ಅಂತ ದೇವರ ಸಹವಾಸ ಮಾಡ್ತಿದಾರೆ. ಹಾಗಂತ ಇದು 'ಸಹವಾಸ ದೋಷದಿಂದ ಸರಿಹೋಗಬಹುದೆ ನಾನು' ಎಂಬ ನಿರೀಕ್ಷೆಯೂ ಅಲ್ಲ. ಮತ್ತು ಪರಮಾತ್ಮ ಚಿತ್ರದಂತೆ ಇದೂ ಕೂಡ ಭಕ್ತಿಪ್ರಧಾನ ಚಿತ್ರವೇನಲ್ಲ. 'ದ್ಯಾವ್ರೇ' ಎಂಬ ಶೀರ್ಷಿಕೆಯ ಉದ್ಗಾರಲ್ಲಿರುವುದು ಆರ್ತನಾದ ಎನ್ನುತ್ತಾರೆ ವಿಜಿ. ಮೊದಲ ಸಿನಿಮಾ ಬಿಡುಗಡೆಯ ಸಮಯದಲ್ಲಿ ಧೈರ್ಯ, ಆತಂಕ ಎರಡೂ ಇದೆ. ನಮ್ಮ ಸ್ನೇಹಿತರ ವಲಯದಲ್ಲಿ ಧೈರ್ಯ ತುಂಬುವವರು ಸಾಕಷ್ಟಿದ್ದರೆ, ಹೊರಗಿನ ವಲಯದ ಪ್ರತಿಕ್ರಿಯೆ ಹೇಗಿರುತ್ತದೋ ಎನ್ನುವ ಆತಂಕ ಎನ್ನುವ ಗಡ್ಡವಿಜಿ ಅವರ ಜೊತೆಗೊಂದು ಮಾತುಕತೆ.
 
* ನೋಡೋಕೆ ಸ್ಕೂಲ್ ಮೇಷ್ಟ್ರ ಥರಾ ಇದೀರಿ, ಸಿನಿಮಾ ಡೈರೆಕ್ಟರ್ ಹೆಂಗಾದ್ರಿ?
ದ್ಯಾವ್ರೇ...ಇಂಥ ಕಾಂಪ್ಲಿಮೆಂಟ್‌ಗೆ ಥ್ಯಾಂಕ್ಸ್! ಆದ್ರೆ ನಾನು ನಿರ್ದೇಶಕ ಆಗಿದ್ದು ಸಹವಾಸ ದೋಷದಿಂದ ಎನ್ನಬಹುದು. ಒಂಥರಾ ಬಲವಂತಕ್ಕೆ. ನಿರ್ದೇಶಕನಾಗುವ ಯೋಗ್ಯತೆ ಇಲ್ಲ ಅಂತ ನಾನೇ ಡಿಸೈಡ್ ಮಾಡಿಬಿಟ್ಟಿದ್ದೆ. ಆದ್ರೆ ಯೋಗ ಇತ್ತು. ಯೋಗ್ಯತೆ ಅಂದ್ರೆ ಇಷ್ಟೇ ಅಂತ ಯೋಗರಾಜಭಟ್, ಸೂರಿ ಹೇಳಿದ ಮೇಲೆ ಧೈರ್ಯ ಮಾಡಿದೆ. ಈಗ ಸಿನಿಮಾ ನೋಡಿ ಯಾರೂ ಬಯ್ಯೊಲ್ಲ ಅನ್ನುವಂಥ ಚಿತ್ರ ಮಾಡಿದ್ದೀನಿ, ಪ್ರೇಕ್ಷಕ ಖಂಡಿತಾ ತೃಪ್ತಿ ಪಡ್ತಾನೆ ಅಂದ್ಕೊಂಡಿದ್ದೀನಿ. ಹಿನ್ನೆಲೆಯಲ್ಲಿ ಭಟ್ರು, ಸೂರಿ, ಜಯಣ್ಣರಂಥ ದೊಡ್ಡ ಹೆಸರುಗಳಿವೆ. ನನ್ನಿಂದ ಅವರ ಹೆಸರಿಗೆ ಚ್ಯುತಿ ಬರಲ್ಲ ಅನ್ನೋ ನಂಬಿಕೆ ಇದೆ.
 
* ದ್ಯಾವ್ರೇ ಸಿನಿಮಾ ಹೀರೋ ಯಾರು? ಯೋಗರಾಜಭಟ್ರು, ಸತೀಶ್, ಚೇತನ್?
ಗಡ್ಡ ವಿಜಿನೇ ಹೀರೋ. ತಮಾಷೆಗೆ ಹೇಳ್ದೆ. ಇದು ನಿರ್ದೇಶಕರ ಸಿನಿಮಾ ಅಂತ ಹಲವರು ಹೇಳ್ಕೊತಾರೆ. ಆದರೆ ಇದು ಪ್ರೇಕ್ಷಕರ ಸಿನಿಮಾ. ಅವರು ನೋಡಿ ಒಪ್ಪಿಕೊಂಡ ಮೇಲೆ ಮಾತ್ರ ಅದು ನಿರ್ದೇಶಕರ ಸಿನಿಮಾ ಆಗುತ್ತೆ ಅಂತ ನನ್ನ ಅನಿಸಿಕೆ. ನಾನು ಗೆದ್ರೆ, ನಂಗೆ ಪ್ರೇಕ್ಷಕರ ನಾಡಿಮಿಡಿತ ಗೊತ್ತಿದೆ ಎಂದರ್ಥ. ಇಲ್ಲಿ ಪ್ರತಿ ಪಾತ್ರಗಳೂ ಇಷ್ಟವಾಗುತ್ತವೆ. ಬಂದು ಹೋಗುವಂಥದ್ದು ಯಾವುದೂ ಇಲ್ಲ. ಆದರೆ, ಯೋಗರಾಜಭಟ್ಟರದ್ದು ಪ್ರಮುಖ ಪಾತ್ರ ಎನ್ನಬಹುದು.

* ಯಾವುದೋ ಇಂಗ್ಲಿಷ್ ಸಿನಿಮಾದ ಶೇಡ್ ಇದೆ ಅಂತಾರೆ. ನಿಜಾನಾ?
ಯಾವ್ ಶೇಡೂ ಇಲ್ಲ ಅಂದ್ಕೊಂಡಿದೀನಿ. ಯಾರೋ ಹಾಗಂದಿದ್ದಕ್ಕೆ ಆ ಸಿನಿಮಾಗಳನ್ನು ತರಿಸಿಕೊಂಡು ನೋಡಿದೀನಿ. ಹೋಲಿಕೆ ಇದ್ರೆ ಅದನ್ನು ಡಿಲೀಟ್ ಮಾಡೋಣ ಅಂತ. ಅಂಥದ್ಯಾವ್ದೂ ಸಿಕ್ಕಿಲ್ಲ. ಹಾಗಾಗಿ ಇದು ಅಪ್ಪಟ ದೇಸಿ ಸಿನಿಮಾ, ಅಪ್ಪಟ ಕನ್ನಡ ಸಿನಿಮಾ, ಅಪ್ಪಟ ಗಡ್ಡ ವಿಜಿ ಸಿನಿಮಾ.

* ನಿಮ್ಮ ಚಿತ್ರದ ಒನ್‌ಲೈನ್ ಸ್ಟೋರಿ ಕೇಳಿದ್ರೆ ಹೇಗೆ ಹೇಳ್ತೀರಾ?

ಖೈದಿಗಳ ಕಥನ ಎನ್ನಬಹುದು. ಅವರ ಭಾವನೆಗಳು, ಅವರು ಜೈಲಿಗೆ ಬಂದಿದ್ಯಾಕೆ, ಹೊರಗೆ ಹೋದ ಮೇಲೆ ಅವರು ಏನು ಮಾಡ್ತಾರೆ, ಹೀಗೆ, ಈ ಜೈಲು, ವ್ಯವಸ್ಥೆ ಎಲ್ಲಾ ಬಿಟ್ಟು ಕೇವಲ ಅವರ ವೈಯಕ್ತಿಕ ಬದುಕನ್ನು ಹೇಳಿದ್ದೇನೆ. ಆದರೆ, ಅದನ್ನು ಹೊಸರೀತಿಯಲ್ಲಿ ಹೇಳಿದ್ದೇನೆ ಅಂತ ಅಂದ್ಕೊಂಡಿದ್ದೀನಿ.

* ಯೋಗರಾಜಭಟ್ಟರು ಫಸ್ಟ್ ಟೈಮ್ ಆ್ಯಕ್ಟ್ ಮಾಡಿದಾರೆ. ಯಶಸ್ವೀ ನಿರ್ದೇಶಕರೊಬ್ಬರಿಂದ ಅಭಿನಯ ತೆಗೆಸೋ ಅನುಭವ ಹೇಗಿತ್ತು?
ಅವರು ಬೇರೆಯವರಿಗೆ ಅಭಿನಯಿಸಿ ತೋರಿಸೋದನ್ನ ನೋಡಿದ್ದೆ. ಅವರು ಆ್ಯಕ್ಟ್ ಮಾಡಬಹುದು ಅಂತ ಅನಿಸಿತ್ತು. ಹಾಗಾಗಿ 'ಜಾಕಿ' ಟೈಟಲ್ ಸಾಂಗ್‌ನಲ್ಲಿ ಅವರನ್ನ ಬಲವಂತವಾಗಿ ಕೂರಿಸಿದ್ದೆ. ಅಲ್ಲಿ ಜೊತೆಗಿದ್ದ ಸೂರಿ, ಹರಿಕೃಷ್ಣ ಅವರಿಗಿಂತ ಭಟ್ಟರು ಸಖತ್ ಎಕ್ಸ್‌ಪ್ರೆಷನ್ ಕೊಡ್ತಾ ಇದ್ರು. ನಾನೇ 'ಸಾರ್, ಈ ಸಿನಿಮಾಕ್ಕೆ ನೀವಲ್ಲ ಹೀರೋ, ಪುನೀತ್ ರಾಜ್‌ಕುಮಾರ್‌' ಅಂತ ಜೋಕ್ ಮಾಡಿದ್ದೆ. ಆ ಹಾಡಿನ್ನ ಮೊದಲು ರಜನೀಕಾಂತ್ ಅವರತ್ರ ಮಾಡಿಸೋ ಯೋಜನೆ ಇತ್ತು. ಕೊನೆಗೆ ನೀವು ಏನ್ ಕಮ್ಮಿ ಇಲ್ಲ ಅಂತ ಭಟ್ಟರನ್ನೇ ಕೂಡಿಸಿದ್ದೆ. ಈ ಚಿತ್ರದ ಕಥೆ ಬರೆಯುವಾಗಲೇ ಈ ಪಾತ್ರಕ್ಕೆ ಭಟ್ಟರು ಅಂತ ಡಿಸೈಡ್ ಮಾಡಿದ್ದೆ. ಭಟ್ಟರದ್ದು ಒಂಥರಾ ನ್ಯಾಚುರಲ್ ಅಭಿನಯ. ಈ ಓಂಪುರಿ, ನಾಸೀರುದ್ದೀನ್ ಶಾ ಅವರ ಟೈಪ್. ಮೊದಲ ದಿನ ಹೇಗೋ ಏನೋ ಅಂಥ ಅಳುಕಿತ್ತು. ಆದರೆ ಅವರ ಅಭಿನಯ ನೋಡಿ ಕಾಲಿಗೆ ಬಿದ್‌ಬಿಡಬೇಕು ಅನ್ನಿಸಿಬಿಡ್ತು. ನನ್ನ ನಿರೀಕ್ಷೆಗೂ ಮೀರಿದ ಅಭಿನಯ ಅವರದ್ದು.

* 'ಎಷ್ಟೊಳ್ಳೆ ಬಾಳನು ಬಾಳಿ ಸತ್ತರೂ ಲೋಕಾ ಕೇಳ್ತದಾ, ಪಾಪ ಪುಣ್ಯ ಲೆಕ್ಕ ಹಾಕಿ ಬದುಕೋಕಾಯ್ತದಾ' ಅಂತೆಲ್ಲ  ಹಾಡು ಬರೆದ್ರೆ, ಭಟ್ಟರ ಸ್ಟೈಲಲ್ಲಿ ಕೇಳೋದಾದ್ರೆ, ಈಗ್ಲೇ ಹಾಳಾಗೋಗಿರೋ ನಮ್ಮ ನವಯುವಕರು ಇನ್‌ಸ್ವಲ್ಪ  ಹಾಳಾಗೊಲ್ವೆ?
ನೆಗೆಟಿವ್ ಆಗಿ ತಗೊಂಡ್ರೆ ಆಗಬಹುದು. ಪಾಸಿಟಿವ್ ಆಗಿ ತಗೊಂಡ್ರೆ ಆಗೊಲ್ಲ. ಇಲ್ಲಿ ನಮ್ಮ ಜನಕ್ಕೆ ನೇರವಾಗಿ  ಉಪದೇಶ ಹೇಳಿದ್ರೆ ರುಚಿಸಲ್ಲ. ಅದೇ 'ಹಾಳಾಗೋಗು' ಅಂದ್ರೆ 'ಹೌದಲ್ಲ ನಾನು ಹಾಳಾಗೋಗ್ತಾ ಇದೀನಿ' ಅನ್ನೋ ಭಾವನೆ ಅವನಲ್ಲಿ ಜಾಗೃತವಾಗುತ್ತೆ. ಅಲ್ಲದೆ ಸಿನಿಮಾ ಮನರಂಜನೆಗೆ, ಅದರಿಂದ ಸಮಾಜ ಉದ್ಧಾರ ಆಗುತ್ತೆ ಅನ್ನೋದೆಲ್ಲ ಹಳೇ ಕಾಲದ ನಂಬಿಕೆ ಅಂತ ನನ್ನ ಇಂದಿನ ನಂಬಿಕೆ.

* ಚಿತ್ರದಲ್ಲಿ ಜೈಲ್ ಒಳಗಿನ ಕಥೆ ಎಷ್ಟು ಪೋರ್ಷನ್ ಇದೆ? ಫ್ಲ್ಯಾಷ್‌ಬ್ಯಾಕ್ ಎಷ್ಟಿದೆ?
ಎರಡೂ ಅರ್ಧರ್ಧ, ಫಿಫ್ಟಿ-ಫಿಫ್ಟಿ ಎನ್ನುವಷ್ಟಿದೆ.

* ನಿಮ್ಮ ದ್ಯಾವ್ರೇ ಸಿನಿಮಾ ಆಸ್ತಿಕರಿಗಾ, ನಾಸ್ತಿಕರಿಗಾ?
ಇದೊಂಥರಾ ನೋವಾದಾಗ 'ಅಮ್ಮಾ..' ಅಂತೀವಲ್ಲ ಹಾಗೆ. 'ದ್ಯಾವ್ರೇ...' ಅನ್ನೋದೊಂದು ಉದ್ಗಾರ, ಆರ್ತನಾದ ಅಷ್ಟೆ. ದೇವರು ನಂಬಿಕೆ ಅಂತೆಲ್ಲ ಏನಿಲ್ಲ.

- ಹರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ವಿವಾದ: ಚುನಾವಣಾ ಆಯೋಗ, ಜ್ಞಾನೇಶ್ ಕುಮಾರ್​ಗೆ ಸುಪ್ರೀಂ ಕೋರ್ಟ್ ನೋಟಿಸ್; ರಾಹುಲ್ ಗಾಂಧಿಗೂ ತರಾಟೆ

'ಮೋದಿ ವಿರೋಧಿ ಪ್ರತಿಭಟನೆಗಳಿಗೆ ಅಮೆರಿಕನ್ನರ ಆರ್ಥಿಕ ನೆರವು?'; Mary Millben ಸ್ಫೋಟಕ ಆರೋಪ!

‘ಮೋದಿಗೆ ಅಮೆರಿಕ ಬೇಕಿಲ್ಲ, ಆದರೆ ಅಮೆರಿಕಕ್ಕೆ ಮೋದಿ ಬೇಕು'.. 'ನಿಮ್ಮನ್ನು ಬಳಸಿಕೊಂಡು ಕೈ ಬಿಡುತ್ತಾರೆ': ಅಭಿಜಿತ್ ದೀಪ್ಕೆಗೆ ಹಾಲಿವುಡ್ ಗಾಯಕಿ ಎಚ್ಚರಿಕೆ

CJP ಪ್ರತಿಭಟನೆಯಲ್ಲಿ ಭಾಗಿ: ನಟ Imran Khanಗೆ ಮುಂಬೈ ಪೊಲೀಸರಿಂದ 'Leave India' ನೋಟಿಸ್, ಅ.28ರೊಳಗೆ ಭಾರತ ತೊರೆಯುವಂತೆ ಗಡುವು..!

ಜಿಯೋ - ಸ್ಟಾರ್‌ಲಿಂಕ್‌, ಸ್ಟಾರ್ ವಾರ್ ಹಿಂದಿನ ಆರ್ಥಿಕತೆ! (ಹಣಕ್ಲಾಸು)