ಪ್ರಶಾಂತ್ ರಾಜ್, ಗೋಪಿಕಿರಣ್ 
ಸಿನಿಮಾ ಲೇಖನ

ವಿಜಲ್‌ನ ಅಲೆ

ಈ ವಾರ ಎರಡು ಚಿತ್ರಗಳು ಪ್ರೇಕ್ಷಕರ ವಿಷಲ್ ಸದ್ದು ಕೇಳಿ ಯಶಸ್ಸಿನ ಅಲೆಯ ಮೇಲೆ...

ಈ ವಾರ ಎರಡು ಚಿತ್ರಗಳು ಪ್ರೇಕ್ಷಕರ ವಿಷಲ್ ಸದ್ದು ಕೇಳಿ ಯಶಸ್ಸಿನ ಅಲೆಯ ಮೇಲೆ ತೇಲಲು ಕಾಯುತ್ತಿವೆ. ತಮಿಳಿನ ಪಿಜ್ಜಾ ಅನ್ನು ಕನ್ನಡದಲ್ಲಿ ಡೆಲಿವರಿ ಮಾಡುತ್ತಿರುವ ಲವ್‌ಗುರು ಬಾಯ್ ಪ್ರಶಾಂತ್ ರಾಜ್ ಮೇಲೆ ಸಿನಿರಸಿಕರಿಗೆ ದೊಡ್ಡ ನಿರೀಕ್ಷೆ ಇದೆ. ಹಾಗಾಗಿ ಮೊದಲ ದಿನ ಚಿತ್ರಮಂದಿರದಲ್ಲಿ ಪ್ರಶಾಂತ ವಾತಾವರಣ ಇರುವುದಂತೂ ಸಾಧ್ಯವಿಲ್ಲ. ಅದಕ್ಕೆ ಕಾರಣ ಬಿಸಿ ಏರಿರುವ ಚಿತ್ರದ ಪ್ರಚಾರ ವಾತಾವರಣ. ಪ್ರಶಾಂತ್‌ರ ಹಿಂದಿನ ಚಿತ್ರಗಳಿಗೆ ಕಾಯಂ ಪ್ರೇಕ್ಷಕರಾಗಿದ್ದ ಕಾಲೇಜು ಹುಡುಗ, ಹುಡುಗಿಯರು ಚಿತ್ರಮಂದಿರದ ಗೇಟಲ್ಲೇ ಬೋಲ್ಡ್ ಆಗಿ ಬಂದವರ ಕಾಪಾಡು ಪರಮಾತ್ಮ ಎನ್ನುತ್ತಿದ್ದಾರೆ. ವರದನಾಯಕನ ತಮ್ಮನಾಗಿ ತಕ್ಕಮಟ್ಟಿಗೆ ಯಶಸ್ಸು ಕಂಡಿದ್ದ ಚಿರಂಜೀವಿ ಸರ್ಜಾ ಈಗ ಸೀಟಿ ಹೊಡೆಯುತ್ತಾ ಮತ್ತೆ  ಪ್ರೇಕ್ಷಕರನ್ನು ಭೇಟಿ ಮಾಡಲು ಹಾತೊರೆಯುತ್ತಿದ್ದಾರೆ. ಅವರ ಜೊತೆಗೆ ಸದ್ಯದ ಹಾಟ್ ಹುಡುಗಿ ಪ್ರಣಿತಾ. ಇನ್ನು ಮೊದಲ ಅಲೆಗಾಗಿ ಕಾದು ಕುಳಿತಿರುವುದು 'ಅಲೆ' ಚಿತ್ರದ ನಿರ್ದೇಶಕ ಗೋಪಿಕಿರಣ್. ನಾಯಕ ತನುಷ್ ಹೊಸಬರಾದರೂ ನಾಯಕಿ ಹರ್ಷಿಕಾ ಪೂಣಚ್ಛ ಪ್ರಚಾರಕ್ಕೆ ಬಾರದೆ ಚಿತ್ರಕ್ಕೆ ಭರ್ಜರಿ ಪ್ರಚಾರವನ್ನೇ ನೀಡುತ್ತಿದ್ದಾರೆ. ಮನೋಮೂರ್ತಿ ಸಂಗೀತದ ಅಲೆಗಳು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಎನ್ನುವುದರಲ್ಲಿ ಎರಡು ಮಾತಿಲ್ಲ.

ವಿಶಾಲ ಹೃದಯದ ಕನ್ನಡಿಗರು ವಿಷಲ್ ಚಿತ್ರವನ್ನು ಖಂಡಿತ ಅಪ್ಪಿಕೊಳ್ಳುತ್ತಾರೆ ಎಂಬ ನಂಬಿಕೆ ವ್ಯಕ್ತಪಡಿಸುವ ಪ್ರಶಾಂತ್‌ರಾಜ್ ಮತ್ತು ಸಂಗೀತದ ಅಲೆಗಳ ಮೇಲೆ ಪ್ರೀತಿಯ ಮೆರವಣಿಗೆ ಹೊರಟಿರುವ ಗೋಪಿಕಿರಣ್ ಅವರೊಂದಿಗೆ ಒಂದು ಮಾತುಕತೆ.

ಪ್ರಶಾಂತ್ ರಾಜ್- ವಿಜಲ್
ನಾನು ಸಿನಿಮಾ ಮಾಡದೆ ಮನೇಲಿ ಬೇಕಿದ್ರೂ ಕೂತಿರ್ತೀನಿ. ಸಿನಿಮಾ ಮಾಡಿ ಎಂದು ಯಾರೂ ನನ್ನ ಮನೆಯ ಬಳಿ ಬಂದು ಗಲಾಟೆ ಮಾಡುವಷ್ಟು ನಾನು ದೊಡ್ಡವನಲ್ಲ. ಆದರೆ ನನಗಿಷ್ಟವಿಲ್ಲದೆ ಕಾಟಾಚಾರಕ್ಕಾಗಿ ಸಿನಿಮಾ ಮಾಡುವುದಿಲ್ಲ. ನಾನು ದುಡ್ಡಿಗಾಗಿ ಸಿನಿಮಾ ಮಾಡೋದಿಲ್ಲ. ನಾನು ಸಿನಿಮಾ ಮೇಕಿಂಗ್‌ನಲ್ಲಿ ಇನ್ನೊಬ್ಬರಿಗೆ ರೋಲ್ ಮಾಡೆಲ್ ಆಗಬೇಕು ಎನ್ನುವ ಆಸೆ ಉಳ್ಳವನು. ಅದರಂತೇ ಸಿನಿಮಾ ಮಾಡುತ್ತೇನೆ. ಅದಕ್ಕೆ ನನ್ನ ವಿಜಲ್ ಚಿತ್ರ ಒಂದು ಉತ್ತಮ ಉದಾಹರಣೆ.

  • ನನ್ನ ಮೊದಲ ಚಿತ್ರ ಲವ್‌ಗುರು ಗೆದ್ದ ಮೇಲೆ ಕನ್ನಡ ಚಿತ್ರರಂಗದ ಇಬ್ಬರು ಸ್ಟಾರ್ ನಟರು ನನಗೆ ಸಿನಿಮಾ ಮಾಡಿಕೊಡಿ ಎಂದರೂ ನಾನು ಒಪ್ಪಿಕೊಳ್ಳಲಿಲ್ಲ. ಕಾರಣ ಅವು ರಿಮೇಕ್ ಸಿನಿಮಾಗಳಾಗಿದ್ದವು ಎನ್ನುವುದು. ಆದರೆ ಈಗ ವಿಜಲ್ ರಿಮೇಕ್ ಮಾಡಿದ್ದೇನೆ. ಆದರೆ ಇದು ರಿಮೇಕ್ ಚಿತ್ರ ಎಂದೂ ಎಲ್ಲೂ ಅನಿಸುವುದಿಲ್ಲ. ರಿಮೇಕ್ ಆಗಿದ್ದರೂ ಇದು ತಂತ್ರಜ್ಞನೊಬ್ಬನಿಗೆ ಛಾಲೆಂಜಿಂಗ್ ಎನಿಸುವಂಥ ಚಿತ್ರವಾಗಿತ್ತು. ಎಲ್ಲರ ಕೈಲೂ ಇಂಥ ಚಿತ್ರ ಮಾಡೋಕಾಗಲ್ಲ. ಸಂಪೂರ್ಣ ಹೊಸ ರೀತಿಯ ನಿರೂಪಣೆ ಇದೆ. ಒರಿಜಿನಲ್ ಪ್ಲಾಟ್ ಬಿಟ್ಟರೆ ಉಳಿದಂತೆ ಅದು ಪ್ರಶಾಂತ್‌ರಾಜ್ ಚಿತ್ರ ಮಾತ್ರ. ಆದರೂ ಇದು ನನ್ನ ಮೊದಲ ಮತ್ತು ಕೊನೆಯ ರಿಮೇಕ್ ಚಿತ್ರ.
  • ನಮ್ಮ ವಿಜಲ್ ಸದ್ದು ಕರ್ನಾಟಕದ ಗಡಿ ದಾಟಿ ಹೋಗುತ್ತಿದೆ ಎಂಬುದು ವಿಶೇಷ. ಕೇವಲ ಕರ್ನಾಟಕದ 90 ಸೆಂಟರ್‌ಗಳಲ್ಲಿ ಅಲ್ಲದೆ ಹೈದರಾಬಾದ್, ದೆಹಲಿ, ಮುಂಬೈ, ಚೆನ್ನೈ, ಕೊಚ್ಚಿನ್‌ನಂಥ 9 ಸೆಂಟರ್‌ಗಳಲ್ಲೂ ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ.
  • ಅಣ್ಣಾವ್ರ ಚಿತ್ರಗಳು ಬಿಡುಗಡೆಯಾಗುತ್ತಿದ್ದ ಚೆನ್ನೈನ ಸತ್ಯಂ ಸಿನಿಮಾಸ್‌ನಲ್ಲಿ ನಮ್ಮ ಸಿನಿಮಾ 2 ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ. ಇದು ಕನ್ನಡ ಚಿತ್ರಗಳ ಪಾಲಿಗೆ ಉತ್ತಮ ಬೆಳವಣಿಗೆ.
  • ಹಲವಾರು ಖ್ಯಾತ ವಿತರಕರು ಕೇಳಿದರೂ ಅವರಿಗೆ ಕೊಡದೆ, ಈ ಚಿತ್ರವನ್ನು ನಾವೇ ವಿತರಣೆ ಮಾಡುತ್ತಿದ್ದೇವೆ. ಆದರೆ ಇದು ಕೇವಲ ನಮ್ಮದೊಂದು ಚಿತ್ರಕ್ಕೆ ಸೀಮಿತವಲ್ಲ. ಚಿತ್ರರಂಗಕ್ಕೆ ಬರುವ ಎಲ್ಲ ಹೊಸ ಸಿನಿಮಾ ಮೇಕರ್ಸ್‌ಗಳಿಗೂ ವಿತರಣೆಯ ವಿಷಯದಲ್ಲಿ ನಮ್ಮ ಸಂಪೂರ್ಣ ಬೆಂಬಲ ಇರುತ್ತದೆ.
  • ಜೋಶ್ವಾ ಶ್ರೀಧರ್ ಸಂಗೀತದ ವಿಜಲ್ ಚಿತ್ರದ ಹಾಡುಗಳಿಗೆ ತುಂಬಾ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ. ಫಳ ಫಳ ಕಂಗಳ ಹಾಡು ವರ್ಷದ ಸೂಪರ್‌ಹಿಟ್ ಮೆಲೋಡಿ ಆಗುವ ಲಕ್ಷಣ ತೋರಿಸುತ್ತಿದೆ. ನಾನೇ ಹಾಡಿರುವ ಹಾಡಿಗೆ ಮಾಸ್ ಅಪೀಲ್ ಇದೆ. ಉಳಿದಂತೆ ಕವಿರಾಜ್, ಮಹೇಶ್ ದೇವಶೆಟ್ಟಿ ಸಾಹಿತ್ಯ ಬರೆದಿದ್ದಾರೆ.
  • ನನ್ನ ಚಿತ್ರಕ್ಕೆ ಸಂಭಾಷಣೆ ಬರೆಯಲು ಬಂದ ಗುರುಪ್ರಸಾದ್ ನಂತರ ನಟನೆಯನ್ನೂ ಮಾಡಿದರು. ನಟಿಸಿದ ಮೇಲೆ ಅವರು ಹೇಳಿದ ಒಂದು ಮಾತು 'ಈಗಾಗಲೇ ಚಿತ್ರರಂಗದಲ್ಲಿ ಉತ್ತಮ ನಿರ್ದೇಶಕ ಅಂತ ಗುರುತಿಸಿಕೊಂಡಿದ್ದೇನೆ. ಈ ಚಿತ್ರದ ನಂತರ ಉತ್ತಮ ನಟ ಎಂದು ಗುರುತಿಸಿಕೊಳ್ಳುತ್ತೇನೆ'.
  • ಇಂದಿನ ಕಾಲೇಜ್ ಹುಡುಗಿಯರು ಮೊದಲಿನಂತಲ್ಲ. ನಿಮಗೆ ಯಾವ ರೀತಿಯ ಸಿನಿಮಾ ಬೇಕು ಎಂದರೆ ರೊಮ್ಯಾಂಟಿಕ್ ಸಿನಿಮಾ ಎನ್ನುತ್ತಾರೆ. ರೊಮ್ಯಾಂಟಿಕ್ ಸಿನಿಮಾಗಳು ಕನ್ನಡದಲ್ಲಿ ಬರ್ತಾ ಇವೆಯಲ್ಲ ಎಂದರೆ ಆ ಥರದ್ದಲ್ಲ, ಹಿಂದಿಯ ಮರ್ಡರ್‌ನಷ್ಟು ರೊಮ್ಯಾಂಟಿಕ್ ಚಿತ್ರಗಳು ಬೇಕು ಎನ್ನುತ್ತಾರೆ.
  • ವಿಜಲ್ ಚಿತ್ರದ ಬಗ್ಗೆ ಎಲ್ಲರಿಗೂ ನಿರೀಕ್ಷೆ ಇದೆ. ಸೆನ್ಸಾರ್ ಮಂಡಳಿಯವರೂ ಕೂಡ ಚಿತ್ರ ನೋಡಿ ನನ್ನ ಬಳಿ ಚರ್ಚೆ ಮಾಡಿದರು. ಶ್, ಆಪ್ತಮಿತ್ರ ಚಿತ್ರಗಳ ನಂತರ ವಿಜಲ್ ಆ ಥರದ ಇನ್ನೊಂದು ಸಿನಿಮಾ ಆಗುತ್ತದೆ ಎಂಬ ನಂಬಿಕೆ ನನ್ನದು.
ಗೋಪಿಕಿರಣ್- ಅಲೆ
  • ಸಿನಿಮಾದಲ್ಲಿ ಸ್ಟಾರ್‌ಗಳಿಲ್ಲ ನಿಜ. ಆದರೆ ನನ್ನ ಚಿತ್ರಕ್ಕೆ ಪ್ರೇಕ್ಷಕರೇ ಸ್ಟಾರ್‌ಗಳು. ಮೊದಲ ಶೋನಲ್ಲಿ ಸಿನಿಮಾ ಇಷ್ಟವಾದವರು ಎರಡನೇ ಶೋ ಹೊತ್ತಿಗೆ ಮೌತ್ ಪಬ್ಲಿಸಿಟಿ ಕೊಟ್ಟರೆ ಸಾಕು. ಆದರೆ ಆ ಮೊದಲ ಶೋನ ಪ್ರೇಕ್ಷಕರನ್ನು ಖಂಡಿತಾ ಮೆಚ್ಚಿಸುತ್ತೇನೆ ಎಂಬ ನಂಬಿಕೆ ನನಗಿದೆ.
  • ಮನೋಮೂರ್ತಿ ಸಂಗೀತ ನನ್ನ ಚಿತ್ರದ ಪ್ಲಸ್ ಪಾಯಿಂಟ್. ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವಲ್ಲಿ ಮನೋಮೂರ್ತಿ ಅವರ ಪಾತ್ರ ದೊಡ್ಡದು. ನಮ್ಮ ಚಿತ್ರದ ಪ್ರತಿಯೊಂದು ಪ್ರಚಾರಕ್ಕೂ ಕೂಡ ಮನೋಮೂರ್ತಿ ಅವರು ಬಂದು ಮುಂದೆ ನಿಂತು ಎಲ್ಲವನ್ನೂ ನಿಭಾಯಿಸುತ್ತಿದ್ದಾರೆ ಎಂಬುದು ಖುಷಿಯ ಸಂಗತಿ.
  • ಹಾಡುಗಳು ಕಿವಿಗಷ್ಟೇ ಅಲ್ಲ, ಕಣ್ಣಿಗೂ ಹಿತ ನೀಡುತ್ತವೆ. ಮಲೇಶಿಯಾದ ಹೀರೋ ಇಂಟ್ರಡಕ್ಷನ್ ಹಾಡು, ಗೋಕರ್ಣ, ಕುಡ್ಲ, ಕುಮಟಾದಿಂದ ಹಿಡಿದು ಕುಲು, ಮನಾಲಿಯವರೆಗಿನ ಪ್ರಕೃತಿ ಸೌಂದರ್ಯ, ಯಾಣ, ಅಂಕೋಲಾದ ಪ್ರಯಾಣ, ಇನ್ನೋವೇಟಿವ್ ಫಿಲ್ಮ್ ಸಿಟಿಯ ಲಕ್ಸುರಿ, ಎಲ್ಲವೂ ನಮ್ಮ ಹಾಡುಗಳಲ್ಲಿದೆ.
  • ನಾಯಕನ ಆ್ಯಕ್ಷನ್ ನಾಯಕಿ ಜೊತೆಗಿನ ರೊಮ್ಯಾನ್ಸ್ ಮತ್ತು ಬುಲೆಟ್ ಪ್ರಕಾಶ್, ಟೆನ್ನಿಸ್ ಕೃಷ್ಣ, ಉಮೇಶ್, ಬಿರಾದಾರ್, ಶಕೀಲಾರ ಕಾಮಿಡಿ, ಎಲ್ಲವೂ ಇರುವ ಅಲೆ ಒಂದು ಕಮರ್ಷಿಯಲ್ ಫೀಸ್ಟ್.
  • ಫಸ್ಟ್ ಹಾಫ್‌ನಲ್ಲಿ ಎರಡು, ಸೆಕೆಂಡ್ ಹಾಫ್‌ನಲ್ಲಿ ಎರಡು ಫೈಟ್, ಧರ್ಮಸ್ಥಳದಲ್ಲಿ ಚಿತ್ರೀಕರಣ ಮಾಡಿದ ಚೇಸಿಂಗ್, ಫೈಟ್ ಇರುವ ಕ್ಲೈಮ್ಯಾಕ್ಸ್ ಎಲ್ಲವೂ ಇರುವ ಟೋಟಲ್ ಎಂಟರ್‌ಟೈನರ್ ಅಲೆ.
  • ಮೊದಲ ಚಿತ್ರ ಮಾಡುವ ನಿರ್ಮಾಪಕರು ಯಾವಾಗಲೂ ಕಡಿಮೆ ದುಡ್ಡು ಹಾಕಿ ಹೆಚ್ಚು ಲಾಭ ಮಾಡುವ ಉದ್ದೇಶ ಇಟ್ಟುಕೊಂಡಿರುತ್ತಾರೆ. ಆದರೆ ನಮ್ಮ ನಿರ್ಮಾಪಕ ಕಿರಣ್‌ಕುಮಾರ್ ರೆಡ್ಡಿ, ಚಿತ್ರದ ಕಲಾವಿದರೂ, ತಂತ್ರಜ್ಞರು ಮತ್ತು ಅವಶ್ಯಕತೆಯಿದ್ದ ಯಾವುದೇ ಸಲಕರಣೆಗಳ ವಿಷಯದಲ್ಲೂ ಅದ್ಯಾಕೆ ಬೇಕು ಇದ್ಯಾಕೆ ಬೇಕು ಎಂದು ಕೇಳಲಿಲ್ಲ. ನಿಜವಾದ ಸಿನಿಮಾ ಪ್ಯಾಷನ್ ಇರುವ ನಿರ್ಮಾಪಕ ಅವರು.
  • ಹರ್ಷಿಕಾ ಪೂಣಚ್ಛ ಚಿತ್ರದ ಪ್ರಚಾರಕ್ಕೆ ಬರ್ತಾ ಇಲ್ಲ ಎಂಬುದು ನಿಜ. ಸಿನಿಮಾ ಬಿಡುಗಡೆಯ ಸಮಯದಲ್ಲಿ ಬರದವರು ನಂತರ ಬಂದರೆ ಏನು ಉಪಯೋಗ?. ಪೋನ್ ಮಾಡಿದ್ರೆ ಉತ್ತರ ಇಲ್ಲ. ಬೇಜಾರಾಗುತ್ತೆ. ಸಿಕ್ಕರೂ, ಶೂಟಿಂಗ್‌ನಲ್ಲಿದ್ದೀನಿ ಅಂತಾರೆ. ಬರೋ ಮನಸ್ಸಿದ್ದರೆ ಪ್ಲ್ಯಾನ್ ಮಾಡಿಕೊಂಡು ಬರಬಹುದು. ನಮ್ಮ ಚಿತ್ರದ ಶೂಟಿಂಗ್ ಸಮಯದಲ್ಲಿ ಬೇರೆ ಚಿತ್ರಗಳ ಪ್ರಚಾರಕ್ಕೆ ಅವರನ್ನ ನಾವು ಕಳಿಸ್ತಿರಲಿಲ್ವೇ? ನಾವೆಲ್ಲ ಹೊಸಮುಖಗಳು, ಅವರದು ಪರಿಚಿತ ಮುಖ ಅಂತ ಕರೀತೀವಿ. ಆದರೆ ನಮಗೋಸ್ಕರ ಅಲ್ಲದಿದ್ದರೂ, ಅವರಿಗೋಸ್ಕರವಾದರೂ ಅವರು ಬರಬೇಕಿತ್ತು.
  • ಬಾರದೇ ಇರೋ ನಾಯಕಿಯ ವಿಷಯ ಬಿಟ್ಟು, ಬಂದಿರೋ ನಾಯಕನ ಬಗ್ಗೆ ಮಾತಾಡೋದಾದ್ರೆ, ತನುಷ್‌ಗೆ ತುಂಬಾ ಒಳ್ಳೆಯ ಭವಿಷ್ಯವಿದೆ. ಅವರು ರೋಷನ್ ತನೇಜಾ ಇನ್ಸ್‌ಟಿಟ್ಯೂಟ್‌ನಲ್ಲಿ ಅಭಿನಯ ಕಲಿತು ಬಂದಿದ್ದಾರೆ ನಿಜ. ಆದರೆ ಥಿಯರಿಗೂ ಪ್ರಾಕ್ಟಿಕಲ್‌ಗೂ ತುಂಬಾ ವ್ಯತ್ಯಾಸ ಇರುತ್ತೆ. ಹಾಗಾಗಿ ಕೆಲವು ದಿನ ನರ್ವಸ್ ಆಗಿದ್ದರು. ಆದರೆ ಆತನಿಗೆ ಒಳ್ಳೆಯ ಕಮಿಟ್‌ಮೆಂಟ್ ಇದೆ. ಎಷ್ಟೇ ಟೇಕ್ ಆದರೂ ಸರಿಯಾಗಿ ಬರೋವರೆಗೆ ಪ್ರಯತ್ನಿಸುವ ತಾಳ್ಮೆ, ಉತ್ಸಾಹ ಇದೆ. ಜೊತೆಗೆ ಪ್ರತಿಭೆಯೂ ಇದೆ. ಫೈಟ್, ಡ್ಯಾನ್ಸ್, ಅಭಿನಯ ಎಲ್ಲದರಲ್ಲೂ ತನುಷ್ ಫುಲ್ ಮಾರ್ಕ್ಸ್ ಗಳಿಸುತ್ತಾರೆ.
- ಹರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ವಿವಾದ: ಚುನಾವಣಾ ಆಯೋಗ, ಜ್ಞಾನೇಶ್ ಕುಮಾರ್​ಗೆ ಸುಪ್ರೀಂ ಕೋರ್ಟ್ ನೋಟಿಸ್; ರಾಹುಲ್ ಗಾಂಧಿಗೂ ತರಾಟೆ

'ಮೋದಿ ವಿರೋಧಿ ಪ್ರತಿಭಟನೆಗಳಿಗೆ ಅಮೆರಿಕನ್ನರ ಆರ್ಥಿಕ ನೆರವು?'; Mary Millben ಸ್ಫೋಟಕ ಆರೋಪ!

‘ಮೋದಿಗೆ ಅಮೆರಿಕ ಬೇಕಿಲ್ಲ, ಆದರೆ ಅಮೆರಿಕಕ್ಕೆ ಮೋದಿ ಬೇಕು'.. 'ನಿಮ್ಮನ್ನು ಬಳಸಿಕೊಂಡು ಕೈ ಬಿಡುತ್ತಾರೆ': ಅಭಿಜಿತ್ ದೀಪ್ಕೆಗೆ ಹಾಲಿವುಡ್ ಗಾಯಕಿ ಎಚ್ಚರಿಕೆ

CJP ಪ್ರತಿಭಟನೆಯಲ್ಲಿ ಭಾಗಿ: ನಟ Imran Khanಗೆ ಮುಂಬೈ ಪೊಲೀಸರಿಂದ 'Leave India' ನೋಟಿಸ್, ಅ.28ರೊಳಗೆ ಭಾರತ ತೊರೆಯುವಂತೆ ಗಡುವು..!

ಜಿಯೋ - ಸ್ಟಾರ್‌ಲಿಂಕ್‌, ಸ್ಟಾರ್ ವಾರ್ ಹಿಂದಿನ ಆರ್ಥಿಕತೆ! (ಹಣಕ್ಲಾಸು)