ನಾಲ್ಕೂವರೆ ವರ್ಷ ಕನ್ನಡ ಚಿತ್ರಗಳಿಗೆ ಕಣ್ಗಾವಲಾಗಿದ್ದ ಸೆನ್ಸಾರ್ ಮಂಡಳಿಯ ಅಧ್ಯಕ್ಷ ನಾಗರಾಜ್ ತಮ್ಮ ಅವಧಿ ಪೂರೈಸಿದ್ದಾರೆ. ಕನ್ನಡ ಸಿನಿಮಾಗಳೊಂದಿಗಿನ ಅವರ ಅಫಿಶಿಯಲ್ ಸಂಬಂಧ 'ಕಟ್' ಆಗಿದೆ. ಈಗವರು ಸೆನ್ಸಾರ್ ಮಂಡಳಿಯ ಅಫಿಷಿಯಲ್ ಅಲ್ಲ. ಹಾಗಾಗಿ, ಬೆಂಗಳೂರಿನ ಸಿನಿಮಾ ನಂಟು ಮುಗಿಸಿ ಅವರು ಇದೀಗ ದೆಹಲಿಗೆ ಎನ್ನುತ್ತಿದ್ದಾರೆ. ಈ ನಾಲ್ಕು ಚಿಲ್ಲರೆ ವರ್ಷದಲ್ಲಿ ನಾಗರಾಜ್ ಅವರಿಗೆ ಸಿಕ್ಕ ಹೊಗಳಿಕೆಯೇ ಹೆಚ್ಚು. ಅವರು ಅಲ್ಪ ಸ್ವಲ್ಪ ತೆಗಳಿಕೆ ಗಳಿಸಿದ್ದೂ ಕೂಡ ನಿಯಮಗಳನ್ನು ಅತಿ ಶಿಸ್ತಿನಿಂದ ಪಾಲಿಸುತ್ತಾರೆ ಎಂಬ ಪಾಸಿಟಿವ್ ಕಾರಣಕ್ಕಾಗಿ. 6ನೇ ಕ್ಲಾಸ್ನಲ್ಲಿರುವಾಗಲೇ ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು ಪುಸ್ತಕಗಳನ್ನು ಓದಿದ್ದೆ ಎನ್ನುವ ನಾಗರಾಜ್ ಸಿನಿಮಾ ಸೆನ್ಸ್ ಕೂಡ ಇಟ್ಟುಕೊಂಡವರು. ತಮ್ಮ ಅಧಿಕಾರಾವಧಿಯಲ್ಲಿ ಪ್ರೇಕ್ಷಕ ಮತ್ತು ನಿರ್ಮಾಪಕ ಇಬ್ಬರ ಹಿತವನ್ನೂ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿದ್ದೇನೆ ಎಂಬ ತೃಪ್ತಿ ಇದೆ ಎನ್ನುವ ನಾಗರಾಜ್ ಅವರ ಜತೆಗೊಂದು ಮಾತುಕತೆ.
ನೀವು ಸಿನಿಮಾ ಸೆನ್ಸಾರ್ ಮಂಡಳಿಯಲ್ಲಿ ಕೆಲಸ ಮಾಡಿದ್ದು ಇದೇ ಮೊದಲಾ?
ಹೌದು. ಕಮರ್ಷಿಯಲ್ ಕನ್ನಡ ಚಿತ್ರಗಳ ಸೆನ್ಸಾರ್ ಮಂಡಳಿಯಲ್ಲಿ ಕೆಲಸ ಮಾಡಿದ್ದು ಇದೇ ಮೊದಲು. ಆದರೆ, ಅದಕ್ಕೂ ಮುಂಚೆ ಕಿರುಚಿತ್ರ, ಸಾಕ್ಷ್ಯಚಿತ್ರಗಳನ್ನು ನೋಡಿ ವರದಿ ಕೊಟ್ಟ ಅನುಭವ ಇತ್ತು.
ನಿಮಗೆ ಸಿನಿಮಾದಲ್ಲಿ ಆಸಕ್ತಿ ಇತ್ತಾ?
ಸಿನಿಮಾಗಿಂತ ನನಗೆ ಸಾಹಿತ್ಯದಲ್ಲಿ ಹೆಚ್ಚು ಆಸಕ್ತಿ. ಓದಿದ್ದು ಕನ್ನಡ ಮೀಡಿಯಂನಲ್ಲಿ. ಹಾಗಾಗಿ ಕನ್ನಡದ ಬಗ್ಗೆ ಪ್ರೀತಿ. ಸಣ್ಣ ವಯಸ್ಸಿನಲ್ಲೇ ರಾಮಾಯಣ ಓದಿದ್ದೆ. 6ನೇ ಕ್ಲಾಸ್ನಲ್ಲಿರುವಾಗಲೇ ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು ಪುಸ್ತಕಗಳನ್ನು ಓದಿದ್ದೆ. ಆ ನಂತರ ವಿಕ್ರಮಾರ್ಜುನ ವಿಜಯ ಓದಿದ್ದೆ. ಅದರ ಜೊತೆಗೆ ಸಿನಿಮಾ ಕೂಡ ಇಷ್ಟವೇ. ನಾನು ಎಂಜಿನಿಯರಿಂಗ್ ಪದವೀಧರ, ಆಮೇಲೆ ಕಾನೂನು ಅಧ್ಯಯನ, ನಂತರ ಎಂ.ಎ ಪದವಿ ಗಳಿಸಿದೆ. ಆದರೆ ಮೊದಲಿನಿಂದಲೂ ಸಾಹಿತ್ಯ ಪ್ರೀತಿ ಹೆಚ್ಚು.
ಹೇಗಿತ್ತು, ನಾಲ್ಕು ವರ್ಷಗಳ ಸಿನಿಮಾ ಅನುಭವ?
ತುಂಬ ತೃಪ್ತಿಕರವಾಗಿತ್ತು. ಮೊದಮೊದಲು ನಾನು ಈ ಕೆಲಸಕ್ಕೆ ಸೇರಿದಾಗ ಕೆಲವರು 'ಅಯ್ಯೋ, ಎಷ್ಟೂಂತ ಸಿನಿಮಾ ನೋಡ್ತೀರಾ, ಬೋರಾಗುತ್ತೆ' ಅಂದ್ರು. ಆದರೆ ನನಗೆ ಕನ್ನಡ ಭಾಷೆಗೆ ಸಂಬಂಧಿಸಿದ ಯಾವುದೇ ವಿಷಯ ಆದರೂ ಅಲ್ಲಿ ಕೆಲಸ ಮಾಡೋದು ಖುಷಿ. ಹಾಗಾಗಿ ನನಗೆ ಬೋರ್ ಅನಿಸಲಿಲ್ಲ. ಆದರೆ ಕೆಲಸದ ಒತ್ತಡ ಇತ್ತು. ನಿಗದಿತ ಸಮಯದೊಳಗೆ ನಮ್ಮ ಕೆಲಸ ಮುಗಿಸಬೇಕಾದ ಅನಿವಾರ್ಯ ಇತ್ತು. ಅದನ್ನು ಎಂಜಾಯ್ ಮಾಡಿದೆ.
ನಿಮ್ಮ ಜಾಗಕ್ಕೆ ಈಗ ಹೊಸ ಅಧಿಕಾರಿ ಬಂದಿದ್ದಾರಾ? ಒಂದಷ್ಟು ಸಿನಿಮಾಗಳು ಸೆನ್ಸಾರ್ಗಾಗಿ ಕಾಯ್ತಾ ಇವೆ. ಹೊಸ ಅಧಿಕಾರಿ ಬರೋವರೆಗೂ ಅವು ಕ್ಯೂನಲ್ಲೇ ಕಾಯಬೇಕು ಅಂತಾರೆ. ನಿಜಾನಾ? ಎಷ್ಟು ದಿನ ಆಗಬಹುದು?
ಹೊಸಬರು ಇನ್ನೂ ಬಂದಿಲ್ಲ. ನನ್ನನ್ನು ಕರ್ತವ್ಯದಿಂದ ಮುಕ್ತಗೊಳಿಸುವ ಮುನ್ನವೇ ನನ್ನ ಜಾಗಕ್ಕೆ ಬರುವವರ ಆಯ್ಕೆ ನಡೆಯಬೇಕಿತ್ತು. ಆದರೆ ಅದು ಆಗಿಲ್ಲ. ಒಬ್ಬ ಪರ್ಮನೆಂಟ್ ಅಧಿಕಾರಿಯನ್ನು ನೇಮಿಸಲು ಇನ್ನೂ ಸುಮಾರು 5 ತಿಂಗಳಾದರೂ ಆಗುತ್ತದೆ. ಸದ್ಯಕ್ಕೆ ಹೆಚ್ಚುವರಿ ನಿರ್ವಹಣೆ ಎಂಬಂತೆ ಸಂಬಂಧಪಟ್ಟ ಯಾರನ್ನಾದರೂ ಸರ್ಕಾರ ನಿಯೋಜಿಸುತ್ತದೆ. ಅಲ್ಲದೆ ನಾನು ಅಧಿಕಾರ ಬಿಡುವ ಮುಂಚೆ ಸಾಧ್ಯವಾದಷ್ಟೂ ಸಿನಿಮಾಗಳನ್ನು ನೋಡಿದ್ದೇನೆ. ಕಳೆದ ತಿಂಗಳು ಸುಮಾರು 50 ಚಿತ್ರಗಳು ಮತ್ತು ಕೊನೆಯ 9 ದಿನಗಳಲ್ಲಿ 28 ಚಿತ್ರಗಳನ್ನು ನೋಡಿ ಮುಗಿಸಿದ್ದೇನೆ. ಈಗ ಹೆಚ್ಚೆಂದರೆ ಆರೇಳು ಚಿತ್ರಗಳು ಕ್ಯೂನಲ್ಲಿರಬಹುದು ಅಷ್ಟೆ. ಹಾಗಾಗಿ ಯಾವ ಚಿತ್ರಗಳೂ ಹೆಚ್ಚು ಸಮಯ ಕ್ಯೂನಲ್ಲಿ ಕಾಯಬೇಕಾಗಿಲ್ಲ.
ಇಷ್ಟು ವರ್ಷದಲ್ಲಿ ನಿಮ್ಮ ಬಗ್ಗೆ ಒಳ್ಳೆ ಮಾತು ಕೇಳಿದ್ದೇ ಹೆಚ್ಚು. ಆದರೂ ಕೆಲವೊಂದು ವಿಷಯಗಳಲ್ಲಿ ತೀರಾ ಕಟ್ಟುನಿಟ್ಟು, ಪ್ರಾಣಿ, ಪಕ್ಷಿಗಳನ್ನೂ ತೋರಿಸೋಕೆ ಬಿಡಲಿಲ್ಲ, ಅದರಿಂದ ಕ್ರಿಯೇಟಿವ್ ಆಗಿ ಸಿನಿಮಾ ಮಾಡೋವ್ರಿಗೆ ತೊಂದರೆ ಆಯ್ತು ಅನ್ನೋ ಮಾತುಗಳು ಕೇಳಿಬಂದವು. ನಿಮಗೇನನ್ನಿಸುತ್ತೆ?
ಸಿನಿಮಾ ಒಂದು ಅಬಿವ್ಯಕ್ತಿ ಮಾಧ್ಯಮ. ಎಲ್ಲರಿಗೂ ಸ್ವಾತಂತ್ರ್ಯ ಇದ್ದೇ ಇರುತ್ತದೆ. ಆದರೆ ನಾವು ಕೆಲವು ನಿಯಮಗಳಿಗೆ ಬದ್ಧವಾಗಿ ಕೆಲಸ ಮಾಡಬೇಕಾಗುತ್ತದೆ.
ನನ್ನ ಅನಿಸಿಕೆಯಂತೆ ನನ್ನ ಅವಧಿಯಲ್ಲಿ ಕೇವಲ ಸಿನಿಮಾಗಳನ್ನು ಈ ವಿಭಾಗಕ್ಕೆ ಸೇರಿದ್ದು ಎಂದು ಪ್ರತ್ಯೇಕಿಸುವ ಕೆಲಸ ಮಾಡಿ, ಕತ್ತರಿ ಕೆಲಸ ಕಡಿಮೆ ಮಾಡಿದ್ದೇನೆ. ಯಾರ ಮೇಲೂ ನಮ್ಮ ಧೋರಣೆಯನ್ನು ಹೇರಿಲ್ಲ. ಪ್ರೇಕ್ಷಕರು ಮತ್ತು ನಿರ್ಮಾಪಕರು ಇಬ್ಬರ ಹಿತವನ್ನೂ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿದ್ದೇನೆ. ಅವಶ್ಯಕತೆ ಇದ್ದಾಗ ಬೇಗ ಬೇಗ ಸಿನಿಮಾಗಳನ್ನು ನೋಡಿ ಮುಗಿಸಿದ್ದೇನೆ. ಎಂಥಾ ದೊಡ್ಡವರ ಚಿತ್ರವೇ ಇರಲಿ ಸರದಿಯನ್ನು ಮುರಿದಿಲ್ಲ. ಸಂಪೂರ್ಣ ಪ್ರಾಮಾಣಿಕತೆಯನ್ನು ಕಾಪಾಡಿಕೊಂಡಿದ್ದೇನೆ. ಈ ಪ್ರಾಣಿ, ಪಕ್ಷಿ, ಸಿಗರೇಟು, ಮದ್ಯಪಾನದ ವಿಷಯದಲ್ಲಿ ಕಾನೂನು ನಮ್ಮ ಕೈಯಲ್ಲಿಲ್ಲ. ಹಾಗಾಗಿ ನಮ್ಮ ಜವಾಬ್ದಾರಿ ನಿರ್ವಹಿಸಿದ್ದೇವೆ ಅಷ್ಟೆ.
ಇಷ್ಟು ವರ್ಷ ನೀವು ನೋಡಿದ ಅಷ್ಟು ಸಿನಿಮಾಗಳಲ್ಲಿ ನಿಮಗಿಷ್ಟವಾದ ಸಿನಿಮಾಗಳು?
ತುಂಬಾ ಸಿನಿಮಾಗಳು ಇಷ್ಟವಾದವು. ಆರಂಭದ ಸಿನಿಮಾಗಳು ನೆನಪಿಲ್ಲ. ಆದರೆ, ಈ ವರ್ಷ ತುಂಬಾ ಒಳ್ಳೆಯ ಮತ್ತು ಪ್ರಯೋಗಾತ್ಮಕ ಸಿನಿಮಾಗಳು ಬಂದವು. ಜಟ್ಟ, ಲೂಸಿಯಾ, ಕಾರಣಿಕ ಶಿಶು, ಕಳವು, ಮುನ್ಸೀಫ ಚಿತ್ರಗಳು ಇಷ್ಟವಾದವು. ಅದರ ಜೊತೆಗೆ ಅಗ್ನಿ ಶ್ರೀಧರ್ ಅವರ ತಮಸ್ಸು ನನಗೆ ತುಂಬಾ ಹಿಡಿಸಿದ ಚಿತ್ರ.
ಬಿಟ್ಟು ಹೋಗ್ತಾ ಇರೋ ಈ ಸಮಯದಲ್ಲಿ ಕನ್ನಡ ಸಿನಿಮಾ ಇಂಡಸ್ಟ್ರಿ ಬಗ್ಗೆ, ಕನ್ನಡ ಸಿನಿಮಾಗಳ ಬಗ್ಗೆ ಏನು ಹೇಳೋಕೆ ಇಷ್ಟಪಡ್ತೀರಾ?
ನಾನು ಕನ್ನಡಿಗ. ಸಾಹಿತ್ಯ ಓದಿಕೊಂಡಿರುವುದರಿಂದ, ಅಲ್ಲದೆ ಹೊರನಾಡಲ್ಲೇ ಹೆಚ್ಚು ಸಮಯ ಕಳೆಯುವುದರಿಂದ ಭಾಷಾಪ್ರೇಮ ಸ್ವಲ್ಪ ಜಾಸ್ತಿನೇ ಇದೆ. ನಮ್ಮದು ಭಾರತದಲ್ಲಿ ನಾಲ್ಕನೇ ಅತಿ ದೊಡ್ಡ ಚಿತ್ರರಂಗ. ಸಿನಿಮಾ ಅನ್ನೋದು ನಮ್ಮ ಸಂಸ್ಕೃತಿಯ ಒಂದು ಭಾಗ. ಕನ್ನಡ ಭಾಷೆ ಉಳೀಬೇಕು ಅಂದ್ರೆ ಕನ್ನಡ ಚಿತ್ರರಂಗ ಕೂಡ ಉಳೀಬೇಕು. ಸಿನಿಮಾ ಮಾಡುವವರು ಒಳ್ಳೆಯ ಸಿನಿಮಾ ಮಾಡೋದು ಎಷ್ಟು ಮುಖ್ಯನೋ, ನಮ್ಮ ಜನ ಕೂಡ ನಮ್ಮ ಭಾಷೆಯ ಸಿನಿಮಾಗಳ ಬಗ್ಗೆ ವಿಶೇಷವಾದ ಪ್ರೀತಿ ಇಟ್ಟುಕೊಳ್ಳಬೇಕಾದದ್ದೂ ಅಷ್ಟೇ ಮುಖ್ಯ.
-ಹರಿ