ನಿರ್ದೇಶಕ ಶಶಾಂಕ್ ರಾಜ್ ಗಾಂಧಿನಗದಲ್ಲಿ 'ಉಡ' ಬಿಟ್ಟು ಮೇಲೆ 'ಗೂಳಿಹಟ್ಟಿ' ಸೇರಿಕೊಂಡು ತುಂಬಾ ದಿನಗಳಾದವು. ಹಾಗಂತ ಶಶಾಂಕ್ ರಾಜ್ ಗೂಳಿಹಟ್ಟಿ ಶೇಖರ್ ಜೊತೆ ಪಾಲಿಟಿಕ್ಸ್ ಸೇರಿದ್ದಾರೆ ಅಂತ 'ನ್ಯೂಸ್ ರೀಲ್' ಬಿಡಲು ಸಿದ್ದತೆ ಮಾಡಿಕೊಳ್ಳಬೇಡಿ. 'ಉಡ' ಹೆಸರಿನ ಚಿತ್ರದ ನಂತರ 'ಗೂಳಿಹಟ್ಟಿ' ಹೆಸರಿನಲ್ಲಿ ಸಿನಿಮಾ ಮಾಡಲು ಹೊರಟಿದ್ದು, ಅದರ ಚಿತ್ರೀಕರಣ ಮುಗಿದು ಈಗ ಆಡಿಯೋ ಬಿಡುಗಡೆ ಆಗಿದೆ ಎಂದು ಹೇಳುವುದಕ್ಕೆ ಈ ಪೀಠಿಕೆ ಅಷ್ಟೇ. ಕಲರ್‌ಫುಲ್ ಸಿನಿಮಾ ತಂಡದೊಟ್ಟಿಗೆ ಖಾವಿಯೂ ಸೇರಿಕೊಂಡಿತ್ತು. ಅವರೇ ಎನರ್ಜಿಟಿಕ್ ಕಂ ಐಟಂ ಸ್ವಾಮಿ ಋಷಿಕುಮಾರ ಸ್ವಾಮಿ, ಪವನ್ ಸೂರ್ಯ, ಅಪ್ಪು, ಮಹೇಶ್, ರಾಘವ್ ಚಿತ್ರದ ಮುಖ್ಯ ಪಾತ್ರಧಾರಿಗಳು. ಇವರಿಗೆ ನಾಯಕಿಯಾಗಿ ತೇಜಸ್ವಿನಿ ಗೌಡ ಇದ್ದಾರೆ. ಮೊದಲ ಬಾರಿಗೆ ಶ್ರೀಮಂಜು ಸಂಗೀತ ಮಾಡಿದ್ದಾರೆ. ಋಷಿಕುಮಾರ ಸ್ವಾಮಿ ಇದ್ದ ಮೇಲೆ ಅಲ್ಲೊಂದು ಟಪ್ಪಾಂಗುಚ್ಚಿ ಹಾಡು, ಆ ಹಾಡಿಗೆ ಸ್ವಾಮಿಗಳ ಸ್ಟೆಪ್ಸ್ ಇದ್ದೇ ಇರುತ್ತದೆ. 'ಭಟ್ಟನ ಮನೆಯ...' ಎನ್ನುವ ಹಾಡಿಗೆ ಋಷಿ ಕುಮಾರ ಸ್ವಾಮಿ ಖಾವಿ ಕಳಚಿ ಕುಣಿದಿರುವುದು 'ಗೂಳಿಹಟ್ಟಿ' ಚಿತ್ರದ ಹೈಲೈಟ್ ಅಂತೆ.
'ನಾವು ಅಂದುಕೊಂಡತೆ ಚಿತ್ರೀಕರಣ ಮುಗಿಸಿದ್ದೇವೆ. ನಿರೀಕ್ಷೆಯಂತೆ ಚಿತ್ರ ಮೂಡಿಬಂದಿದ್ದು, ಬಿಡುಗಡೆಗೂ ಮುನ್ನ ಚಿತ್ರವನ್ನು ಜನರಿಗೆ ತಲುಪಿಸಲು ವಿಶೇಷವಾದ ಪ್ರಚಾರ ಆರಂಭಿಸಿದ್ದೇವೆ. ಮೊದಲಿಗೆ ಚಿತ್ರದ ಸಮಗ್ರ ಮಾಹಿತಿಯನ್ನು ಒಳಗೊಂಡಿರುವ ಬುಕ್‌ಲೆಟ್ ಹಂಚಲಾಗುವುದು. ನಂತರ ಜಿಲ್ಲಾ ಕೇಂದ್ರಗಳಿಗೆ ಹೋಗಿ ಚಿತ್ರದ ಬಗ್ಗೆ ಮಾತನಾಡುವುದು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಚಿತ್ರದ ಕಥೆ ಮತ್ತು ಪಾತ್ರಧಾರಿಗಳ ಅಭಿನಯ ತುಂಬಾ ಚೆನ್ನಾಗಿದೆ' ಎಂದರು ನಿರ್ದೇಶಕ ಶಶಾಂಕ್ ರಾಜ್. ಅಂದಹಾಗೆ ಶಶಾಂಕ್ ರಾಜ್ ಹಾಗೂ 'ಭಟ್ಟನ ಮನೆಯ....' ಗೀತೆಯನ್ನು ಹಾಡಿದ ಸರ್ಗೋವಿ ಇಬ್ಬರು ಋಷಿಕುಮಾರ ಸ್ವಾಮಿಗಳ ಶಿಷ್ಯರಂತೆ. ತಮ್ಮ ಹಲವು ವರ್ಷಗಳ ಶಿಷ್ಯರ ಚಿತ್ರದ ಹಾಡಿನಲ್ಲಿ ಕುಣಿದಿದ್ದಕ್ಕೆ ಸ್ವಾಮಿಗಳು ಫುಲ್ ಖುಷಿಯಾಗಿದ್ದರು. 'ಶಶಾಂಕ್ ರಾಜ್' ನನ್ನ ಬಳಿ ಬಂದು ಒಂದು ಹಾಡಿಗೆ ಡ್ಯಾನ್ಸ್ ಮಾಡುವಂತೆ ಕೇಳಿಕೊಂಡರು. ಆದರೆ, ನಾನು ಆಗಲ್ಲ ಅಂದೆ. ಒಮ್ಮೆ ಚಿತ್ರದುರ್ಗಕ್ಕೆ ಹೋಗಿ ಬರಬೇಕಾದರೆ ಚಿತ್ರೀಕರಣ ನಡೆಯುತ್ತಿದ್ದ ಜಾಗಕ್ಕೆ ಹೋಗಿದ್ದೆ. ಆಗ ಭಟ್ಟನ ಮನೆಯ ಹಾಡು ಕೇಳಿದೆ. ಕೂಡಲೇ ಮೇಕಪ್ ಹಚ್ಚಿಕೊಂಡು ಕುಣಿದೆ. ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ. ಅದ್ಭುತ ಸಾಹಿತ್ಯ. ಉತ್ತಮ ಕಂಠ' ಎಂದು ಋಷಿಕುಮಾರ ಸ್ವಾಮಿ ಚಿತ್ರತಂಡವನ್ನು ಹೊಗಳಿದರು.
ಕಿರುತೆರೆ ರಿಯಾಲಿಟಿ ಶೋ ಮೂಲಕ ಬಣ್ಣದ ಜಗತ್ತಿಗೆ ಬಂದ ಮಹೇಶ್ ಗೋರಿಲ್ಲ ರೀತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ನಾಯಕಿ ತೇಜಸ್ವಿನಿ 'ಈಗ ನಮ್ಮ ಕೆಲಸ ಮುಗಿಸಿದ್ದೇವೆ. ಇನ್ನೇನಿದ್ದರು ಗೂಳಿಹಟ್ಟಿ ನಿಮ್ಮದೇ ಸಿನಿಮಾ, ಹೀಗಾಗಿ ನೀವೇ ದೇವರು ನಮಗೆ' ಎಂದು ನಟಿ ತೇಜಸ್ವಿನಿ ಚಿತ್ರದ ಮುಂದಿನ ಭಾರವನ್ನು ಪತ್ರಕರ್ತರ ಮೇಲೆ ಹಾಕಿದರು. ಗಾಯಕ ಅವಿನಾಶ್ ಚಬ್ಬಿ ಚಿತ್ರದಲ್ಲಿ ಡ್ಯೂಯೆಟ್ ಹಾಡಿಗೆ ದನಿಯಾಗಿದ್ದಾರೆ. ಮೈಕೋ ನಾಗರಾಜ್ ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ 7 ಹಾಡುಗಳಿದ್ದು, ಈ ಟ್ರೆಂಡ್‌ಗೆ ತಕ್ಕಂತೆ ಹಾಡುಗಳನ್ನು ಮಾಡಿರುವುದಾಗಿ ಶ್ರೀಮಂಜು ಹೇಳಿಕೊಂಡರು. ಚಿತ್ರದ ನಿರ್ಮಾಪಕರು ಭಾರ್ಗವ. ಇವರು ಕೂಡ ಚಿತ್ರದಲ್ಲಿ ನಟಿಸಿದ್ದಾರೆ..
- ಕೇಶವ