ಒಂದು ಕ್ಷಣದ ನಿರ್ಲಕ್ಷ್ಯ, ವಿಚಿತ್ರ ರನೌಟ್‌ಗೆ ತಿಲಕ್ ವರ್ಮಾ ಬಲಿ; ಗಂಭೀರ್ ಫುಲ್ ಗರಂ! ಆಗಿದ್ದೇನು? Video

ಚೆಂಡು ಬೌಂಡರಿ ದಾಟಿದೆ ಎಂದು ಭಾವಿಸಿ ತಿಲಕ್ ವರ್ಮಾ ಮತ್ತು ಅಕ್ಷರ್ ಪಟೇಲ್ ಓಡುವುದನ್ನು ನಿಲ್ಲಿಸಿದ್ದೇ ಪ್ರಮಾದಕ್ಕೆ ಕಾರಣವಾಯಿತು. ಆದರೆ, ಚೆಂಡು ಬೌಂಡರಿ ಗೆರೆ ದಾಟಿರಲಿಲ್ಲ ಎಂಬುದನ್ನು ಅರಿತ ವೆಸ್ಟ್ ಇಂಡೀಸ್ ಆಟಗಾರರು..
Tilak Varma Run Out After Mistaking Ball For Boundary In 3rd T20I
ತಿಲಕ್ ವರ್ಮಾ ಮತ್ತು ಅಕ್ಸರ್ ಪಟೇಲ್
Updated on: 

ಇಂದೋರ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟರ್ ತಿಲಕ್ ವರ್ಮಾ ವಿಚಿತ್ರ ರೀತಿಯಲ್ಲಿ ರನೌಟ್ ಆಗಿದ್ದು ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 3ನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗಧಿತ 20 ಓವರ್ ನಲ್ಲಿ 223 ರನ್ ಗಳಿಸಿ ಆಲೌಟ್ ಆಯಿತು.

ಈ ಪಂದ್ಯದಲ್ಲಿ ಭಾರತದ ಇನ್ನಿಂಗ್ಸ್ ನ ಅಂತಿಮ ಹಂತದಲ್ಲಿ ತಿಲಕ್ ವರ್ಮಾ ಮತ್ತು ಅಕ್ಸರ್ ಪಟೇಲ್ ಮಾಡಿಕೊಂಡ ಒಂದೇ ಒಂದು ಎಡವಟ್ಟು ಭಾರತಕ್ಕೆ ದುಬಾರಿಯಾಗಿ ಪರಿಣಮಿಸಿತು.

ಚೆಂಡು ಬೌಂಡರಿ ದಾಟಿದೆ ಎಂದು ಭಾವಿಸಿ ತಿಲಕ್ ವರ್ಮಾ ಮತ್ತು ಅಕ್ಷರ್ ಪಟೇಲ್ ಓಡುವುದನ್ನು ನಿಲ್ಲಿಸಿದ್ದೇ ಪ್ರಮಾದಕ್ಕೆ ಕಾರಣವಾಯಿತು. ಆದರೆ, ಚೆಂಡು ಬೌಂಡರಿ ಗೆರೆ ದಾಟಿರಲಿಲ್ಲ ಎಂಬುದನ್ನು ಅರಿತ ವೆಸ್ಟ್ ಇಂಡೀಸ್ ಆಟಗಾರರು ಚುರುಕಾಗಿ ಕಾರ್ಯಪ್ರವೃತ್ತರಾಗಿ ತಿಲಕ್ ಅವರನ್ನು ರನೌಟ್ ಮಾಡಿದರು.

Tilak Varma Run Out After Mistaking Ball For Boundary In 3rd T20I
3rd T20I: ಆಲೌಟ್ ನಲ್ಲೂ ವಿಚಿತ್ರ ದಾಖಲೆ ಬರೆದ ಟೀಂ ಇಂಡಿಯಾ!

ಓಡುವುದನ್ನೇ ನಿಲ್ಲಿಸಿದ ತಿಲಕ್ ವರ್ಮಾ!

ವೆಸ್ಟ್ ಇಂಡೀಸ್‌ನ ಗುದಕೇಶ್ ಮೋತಿ ಎಸೆದ 17ನೇ ಓವರ್‌ನಲ್ಲಿ ಈ ಘಟನೆ ನಡೆದಿದ್ದು, ಲೆಗ್ ಸೈಡ್‌ನಿಂದ ಹೊರಹೋದ ಫುಲ್ ಟಾಸ್ ಎಸೆತವನ್ನು ಅಕ್ಷರ್ ಪಟೇಲ್ ಬಲವಾಗಿ ಫ್ಲಿಕ್ ಮಾಡಿದರು. ಬಳಿಕ ಇಬ್ಬರೂ ಬ್ಯಾಟರ್‌ಗಳು ಒಂದು ರನ್ ಪೂರ್ಣಗೊಳಿಸಿದರು. ಆದರೆ, ಚೆಂಡು ಬೌಂಡರಿ ದಾಟಿದೆ ಎಂದು ಭಾವಿಸಿದ ಅವರು ಎರಡನೇ ರನ್‌ಗಾಗಿ ಮುಂದುವರಿಯುವ ಬದಲು ಪಿಚ್‌ನ ಮಧ್ಯಭಾಗದಲ್ಲಿ ನಿಂತು ಮಾತುಕತೆ ಆರಂಭಿಸಿದರು.

ಅಷ್ಟೇ ಅಲ್ಲದೆ, ಇಬ್ಬರೂ ಪರಸ್ಪರ ಫಿಸ್ಟ್‌ಬಂಪ್ ಮಾಡಿಕೊಂಡರು. ಅಕ್ಷರ್ ಪಟೇಲ್ ತಮ್ಮ ಸ್ಟ್ರೈಕರ್ ತುದಿಗೆ ಮರಳುತ್ತಿದ್ದಾಗ, ಚೆಂಡು ಇನ್ನೂ ಆಟದಲ್ಲಿರುವುದನ್ನು ಅರಿತ ವೆಸ್ಟ್ ಇಂಡೀಸ್ ಆಟಗಾರರು ಕ್ಷಿಪ್ರವಾಗಿ ಪ್ರತಿಕ್ರಿಯಿಸಿ, ಚೆಂಡನ್ನು ಎಸೆದರು. ವಿಕೆಟ್ ಕೀಪರ್ ಶಾಯ್ ಹೋಪ್ ತಮ್ಮ ತುದಿಯಲ್ಲಿ ರನೌಟ್ ಮಾಡಲು ಪ್ರಯತ್ನಿಸಿದ ಬಳಿಕ ಚೆಂಡನ್ನು ಮೋತಿಗೆ ಎಸೆದರು.

ಮೋತಿ ಚೆಂಡನ್ನು ಹಿಡಿದು ತಿಲಕ್ ವರ್ಮಾ ಇದ್ದ ತುದಿಯ ವಿಕೆಟ್‌ನ ಬೇಲ್ಸ್‌ಗಳನ್ನು ಎಗರಿಸಿದರು. ಮೂರನೇ ಅಂಪೈರ್ ಪರಿಶೀಲಿಸಿದಾಗ ಅಕ್ಷರ್ ಪಟೇಲ್ ತಮ್ಮ ಕ್ರೀಸ್ ತಲುಪಿದ್ದರೂ, ತಿಲಕ್ ವರ್ಮಾ ಮಾತ್ರ ಕ್ರೀಸ್‌ನಿಂದ ಬಹಳ ದೂರದಲ್ಲಿರುವುದು ಸ್ಪಷ್ಟವಾಯಿತು. ಹೀಗಾಗಿ ತಿಲಕ್ ರನೌಟ್ ಎಂದು ತೀರ್ಪು ನೀಡಲಾಯಿತು.

ಗಂಭೀರ್ ಫುಲ್ ಗರಂ

ಇನ್ನು ಅಕ್ಷರ್ ಪಟೇಲ್ ಈ ನಿರ್ಧಾರ ಪ್ರಕಟವಾದಾಗ ಅಸಹಾಯಕ ನಗುವಿನೊಂದಿಗೆ ಪ್ರತಿಕ್ರಿಯಿಸಿದರೆ, ಡಗೌಟ್‌ನಲ್ಲಿದ್ದ ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಮಾತ್ರ ತೀವ್ರ ಅಸಮಾಧಾನ ವ್ಯಕ್ತಪಡಿಸಿದಂತೆ ಕಂಡುಬಂದರು.

ಇದೇ ಮೊದಲಲ್ಲ!

ಕ್ರಿಕೆಟ್‌ನಲ್ಲಿ ಬೌಂಡರಿ ಎಂದು ತಪ್ಪಾಗಿ ಭಾವಿಸಿ ಬ್ಯಾಟರ್‌ಗಳು ವಿಕೆಟ್ ಕಳೆದುಕೊಂಡಿರುವುದು ಇದೇ ಮೊದಲಲ್ಲ. 2011ರಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟ್ರೆಂಟ್ ಬ್ರಿಡ್ಜ್ ಟೆಸ್ಟ್ ಪಂದ್ಯದಲ್ಲೂ ಇದೇ ರೀತಿಯ ಘಟನೆ ನಡೆದಿತ್ತು.

ಇಂಗ್ಲೆಂಡ್ ಬ್ಯಾಟರ್ ಇಯಾನ್ ಬೆಲ್, ತಮ್ಮ ಸಹ ಆಟಗಾರ ಇಯಾನ್ ಮಾರ್ಗನ್ ಹೊಡೆದ ಚೆಂಡು ಬೌಂಡರಿ ದಾಟಿದೆ ಎಂದು ಭಾವಿಸಿ ಕ್ರೀಸ್ ಬಿಟ್ಟು ಹೊರಬಂದಿದ್ದರು. ಆದರೆ ಚೆಂಡು ಆಟದಲ್ಲೇ ಇತ್ತು. ಭಾರತದ ಫೀಲ್ಡರ್‌ಗಳು ಚೆಂಡನ್ನು ಮರಳಿ ತಂದು ವಿಕೆಟ್ ಕೆಡವಿದಾಗ ಬೆಲ್ ರನೌಟ್ ಆದರು.

ನಿಯಮದ ಪ್ರಕಾರ ಔಟ್ ನೀಡಿದ್ದು ಸರಿಯಾಗಿದ್ದರೂ, ಅಂದಿನ ಭಾರತ ತಂಡದ ನಾಯಕ ಎಂ.ಎಸ್. ಧೋನಿ ಟೀ ವಿರಾಮದ ವೇಳೆ ಮನವಿಯನ್ನು ಹಿಂಪಡೆದು ಬೆಲ್‌ಗೆ ಮತ್ತೆ ಬ್ಯಾಟಿಂಗ್ ಮುಂದುವರಿಸಲು ಅವಕಾಶ ನೀಡಿದ್ದರು. ಈ ನಡೆ ಕ್ರಿಕೆಟ್ ಜಗತ್ತಿನಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.

Tilak Varma Run Out After Mistaking Ball For Boundary In 3rd T20I
3rd T20I: ಅಭಿಷೇಕ್ ಶರ್ಮಾ ಭರ್ಜರಿ ಬ್ಯಾಟಿಂಗ್, ವಿಂಡೀಸ್ ಗೆ ಗೆಲ್ಲಲು 224 ರನ್ ಗುರಿ ನೀಡಿದ ಭಾರತ

ಅಜರ್ ಅಲಿಗೂ ಎದುರಾಗಿತ್ತು ಇದೇ ಸಂಕಷ್ಟ!

2018ರಲ್ಲಿ ಅಬುಧಾಬಿಯಲ್ಲಿ ನಡೆದ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಪಂದ್ಯದಲ್ಲೂ ಇಂತಹದ್ದೇ ಘಟನೆ ನಡೆದಿತ್ತು. ಪಾಕಿಸ್ತಾನದ ಬ್ಯಾಟರ್ ಅಜರ್ ಅಲಿ ಚೆಂಡನ್ನು ಎಡ್ಜ್ ಮಾಡಿದ ಬಳಿಕ ಅದು ಬೌಂಡರಿ ತಲುಪಿದೆ ಎಂದು ಭಾವಿಸಿ ಸಹ ಆಟಗಾರ ಅಸದ್ ಶಫೀಕ್ ಜೊತೆ ಪಿಚ್‌ನ ಮಧ್ಯದಲ್ಲಿ ಮಾತುಕತೆ ನಡೆಸಲು ತೆರಳಿದ್ದರು.

ಆದರೆ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಚೆಂಡು ಬೌಂಡರಿ ಗೆರೆ ದಾಟುವ ಮೊದಲೇ ಅದನ್ನು ತಡೆದಿದ್ದರು. ಬಳಿಕ ವಿಕೆಟ್ ಕೀಪರ್ ಟಿಮ್ ಪೇನ್‌ಗೆ ಚೆಂಡನ್ನು ಎಸೆದರು. ಪೇನ್ ವಿಕೆಟ್‌ನ ಬೇಲ್ಸ್ ಎಗರಿಸಿದಾಗ ಅಜರ್ ಅಲಿ ರನೌಟ್ ಆದರು. ಚೆಂಡು ಆಟದಲ್ಲಿದ್ದ ಕಾರಣ ಅಜರ್‌ಗೆ ಔಟ್ ನೀಡಿದ್ದು ನಿಯಮಬದ್ಧವಾಗಿತ್ತು.

ಈಗ ತಿಲಕ್ ವರ್ಮಾ ಕೂಡ ಇದೇ ರೀತಿಯ ನಿರ್ಲಕ್ಷ್ಯದಿಂದ ವಿಕೆಟ್ ಕಳೆದುಕೊಂಡಿದ್ದು, ಕ್ರಿಕೆಟ್‌ನಲ್ಲಿ ಕ್ಷಣಮಾತ್ರದ ಅಜಾಗರೂಕತೆ ಎಷ್ಟು ದುಬಾರಿಯಾಗಬಹುದು ಎಂಬುದಕ್ಕೆ ಮತ್ತೊಂದು ಉದಾಹರಣೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com