ಸಿನಿಮಾ ಸುದ್ದಿ

ಜನರ ಪ್ರೀತಿಯೇ ನನಗೆ ರಾಷ್ಟ್ರೀಯ ಪ್ರಶಸ್ತಿ: ಸಲ್ಮಾನ್ ಖಾನ್

Srinivas Rao BV

ಮುಂಬೈ: ಬಾಲಿವುಡ್ ನಲ್ಲಿ ದಾಖಲೆ ನಿರ್ಮಿಸಿರುವ ಭಜರಂಗಿ ಭಾಯಿ ಜಾನ್ ಚಿತ್ರದ ನಟನೆಗೆ ಜನರಿಂದ ವ್ಯಕ್ತವಾದ ಪ್ರೀತಿಯೇ ನನಗೆ ರಾಷ್ಟ್ರೀಯ ಪ್ರಶಸ್ತಿ ಎಂದು ನಟ ಸಲ್ಮಾನ್ ಖಾನ್ ಹೇಳಿದ್ದಾರೆ.
ಭಜರಂಗಿ ಭಾಯಿ ಜಾನ್ ಚಿತ್ರದ ಬಗ್ಗೆ ಮಾತನಾಡಿದ್ದ ಕರೀನಾ ಕಪೂರ್, ಸಲ್ಮಾನ್ ಖಾನ್ ಮನೋಜ್ಞ ನಟನೆಗೆ ಪ್ರತಿಷ್ಠಿತ ಪ್ರಶಸ್ತಿ ದೊರೆಯುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಸಲ್ಮಾನ್ ಖಾನ್ ಜನರ ಪ್ರೀತಿಯೇ ನನಗೆ ರಾಷ್ಟ್ರೀಯ ಪ್ರಶಸ್ತಿ, ಈ ಪ್ರಶಸ್ತಿಯನ್ನು ಪಡೆಯಲು ನನಗಿಂಟಲೂ ಸಾಕಷ್ಟು ಅರ್ಹರಿದ್ದಾರೆ ಎಂದಿದ್ದಾರೆ. ಭಜರಂಗಿ ಭಾಯಿ ಜಾನ್ ಚಿತ್ರವನ್ನು ಜನರು ಇಷ್ಟಪಟ್ಟಿದ್ದಾರೆ. ಅನೇಕರು ಮೂರು- ನಾಲ್ಕು ಬಾರಿ ಚಿತ್ರವನ್ನು ವೀಕ್ಷಿಸಿದ್ದಾರೆ, ಇದಕ್ಕಿಂತಲೂ ಮಿಗಿಲಾದ ರಾಷ್ಟ್ರೀಯ ಪ್ರಶಸ್ತಿ ಇಲ್ಲ ಎಂದು ಸಲ್ಮಾನ್ ಖಾನ್ ಸಂತಸ ವ್ಯಕ್ತಪಡಿಸಿದ್ದಾರೆ.

ಚಿತ್ರಕ್ಕೆ ಈ ರೀತಿ ಜನಪ್ರಿಯಗೊಳ್ಳುವ ನಿರೀಕ್ಷೆ ಇತ್ತು, ಭಾರತ- ಪಾಕಿಸ್ತಾನದ ಬಗ್ಗೆ ತೆರೆಕಂಡಿರುವ ಸಿನಿಮಾಗಳಲ್ಲಿ ಭಯೋತ್ಪಾದನೆ ಇಲ್ಲವೇ, ಸೇನೆಯ ಅಂಶಗಳಿರುತ್ತವೆ. ಉಭಯ ದೇಶಗಳ ಸಾಮಾನ್ಯ ಜನರ ಸ್ಥಿತಿಯನ್ನು ಈವರೆಗೂ ತೋರಿಸಿರಲಿಲ್ಲ, ಈ ಸಿನಿಮಾದಲ್ಲಿ ಆ ಅಂಶವನ್ನು ತೋರಿಸಿದ್ದೇವೆ ಎಂದಿದ್ದಾರೆ ಸಲ್ಮಾನ್ ಖಾನ್. ಎಲ್ಲರೂ ಇಷ್ಟಪಡುವ ಮಾನವೀಯತೆಯನ್ನು ಭಜರಂಗಿ ಭಾಯಿ ಜಾನ್ ಚಿತ್ರದಲ್ಲಿ ತೋರಿಸಲಾಗಿದೆ, ಆದ್ದರಿಂದ ಚಿತ್ರಕ್ಕೆ ಅತ್ಯುತ್ತಮ ಸ್ಪಂದನೆ ದೊರೆತಿದೆ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.

SCROLL FOR NEXT