ಬೆಂಗಳೂರು: ೨೭ರ ಹರೆಯದ ರಘು ಶಾಸ್ತ್ರಿ ಬಾಲಿವುಡ್ ನ ತಮ್ಮ ೧೨ ವರ್ಷದ ಸಿನೆಮಾ ಅನುಭವವನ್ನು ತಮ್ಮ ಚೊಚ್ಚಲ ನಿರ್ದೇಶನದ 'ರನ್ ಆಂಟನಿ'ಗೆ ತೊಡಗಿಸಿದ್ದಾರೆ. ವಿನಯ್ ರಾಜಕುಮಾರ್ ನಟಿಸಿರುವ ಈ ಸಿನೆಮಾವನ್ನು ವಜ್ರೇಶ್ವರಿ ಕಂಬೈನ್ಸ್ ಅಡಿ ನಿರ್ದೇಶಿಸುವ ಅವಕಾಶ ಸಿಕ್ಕಿರುವುದು ಭಾಗ್ಯ ಎನ್ನುತ್ತಾರೆ ರಘು. "ಹೌದು ಇದು ನನ್ನ ಅದೃಷ್ಟ. ಜೊತೆಗೆ ನಾನು ಹಲವಾರು ವರ್ಷ ದುಡಿದ ಅನುಭವವಿದೆ. ದೊಡ್ಡ ನಿರ್ಮಾಣ ಸಂಸ್ಥೆ ನನ್ನ ಸ್ಕ್ರಿಪ್ಟ್ ಒಪ್ಪಿಕೊಂಡಿರುವುದಕ್ಕೆ ಖುಷಿ" ಎನ್ನುತ್ತಾರೆ ರಘು.
ಸ್ಕ್ರಿಪ್ಟ್ ಬರೆಯುವುದರೊಂದಿಗೆ, ನಿರ್ದೇಶಕನ ಜವಾಬ್ದಾರಿ ಹೊತ್ತಿರುವುದರೊಂದಿಗೆ ವಿನಯ್ ಅವರ ಮೇಕ್ ಓವರ್ ಕಾರ್ಯಕ್ರಮದಲ್ಲೂ ರಘು ಭಾಗಿಯಾಗಿದ್ದಾರೆ. "ವಿನಯ್ ಮತ್ತು ಅವರ ತಂದೆ ಮೂರು ತಿಂಗಳ ಹಿಂದೆ ಸ್ಕ್ರಿಪ್ಟ್ ನಲ್ಲಿ ಆಸಕ್ತಿ ತೋರಿದ ದಿನದಿಂದಲೂ, ವಿನಯ್ ಅವರನ್ನು ಆಂಟನಿಯಾಗಿ ಬದಲಾಯಿಸಲು ಪ್ರಯತ್ನಿಸುತ್ತಿದ್ದೇನೆ. ಸಿನೆಮಾ ಬಿಡುಗಡೆಯಾಗುವವರೆಗೂ ಅವರು ಅದೇ ಲುಕ್ ನಲ್ಲಿ ಕಾಣಿಸಿಕೊಳ್ಳಬೇಕೆಂದು ನನ್ನ ಆಸೆ. ಶೈಲಿಯಿಂದ ಕಾಸ್ಟ್ಯೂಮ್ಸ್ ವರೆಗೆ ಎಲ್ಲವನ್ನು ಬದಲಾಯಿಸಲಾಗಿದೆ ಅವರನ್ನು ಅಸಾಮಾನ್ಯರಂತೆ ತೋರಿಸಲು ಪ್ರಯತ್ನಿಸಲಾಗಿದೆ" ಎನ್ನುತ್ತಾರೆ ರಘು.
ಮುಂಬೈನಲ್ಲಿ ನಟನಾ ಶಿಬಿರದಲ್ಲಿ ವಿನಯ್ ಪಾಲ್ಗೊಂಡಿದ್ದು ಬಹಳ ಸಹಾಯವಾಗಿದೆ ಎನ್ನುವ ರಘು "ಯಾವುದೇ ಕಲಿಕೆ ಉಪಯುಕ್ತ ಅನುಭವ ಮತ್ತದು ಅವರನ್ನು ಮುಂದಕ್ಕೆ ಕರೆದೊಯ್ಯಲಿದೆ. ನಾವು ಕೂಡ ಸಿನೆಮಾಗಾಗಿ ಶಿಬಿರವೊಂದನ್ನು ಏರ್ಪಡಿಸಿದ್ದೆವು. ಡಿಸೆಂಬರ್ ೧೫ ರಂದು ಚಿತ್ರೀಕರಣ ಪ್ರಾರಂಭವಾಗುವುದಕ್ಕೂ ಮುಂಚಿತವಾಗಿ ಇನ್ನೆರಡು ತರಗತಿಗಳಿವೆ" ಎನ್ನುತ್ತಾರೆ.
ನಿರ್ದೇಶನಕ್ಕೆ ಇಳಿಯಲು ಇಷ್ಟು ತಡವಾದದ್ದೇಕೆ ಎಂದು ಕೇಳಿದರೆ "ಒಬ್ಬ ನಿರ್ದೇಶಕ ಸಿನೆಮಾ ಮಾಡಲು ೨೦ ವರ್ಷ ತೆಗೆದುಕೊಳ್ಳಬಹುದು ಆದರೆ ಎಲ್ಲ ಅನುಭವವು ಮುಖ್ಯವಾಗುತ್ತದೆ. ನಾನು ಜಾಹೀರಾತು, ಸ್ಕ್ರಿಪ್ಟ್ ಬರೆಯುವುದು, ಗೀತರಚನೆ ಹಾಗೆಯೇ ಪತ್ರಿಕೋದ್ಯಮದಲ್ಲೂ ಇದ್ದೆ. ಈಗ ೫ ವರ್ಷದಿಂದ ಈ ಸ್ಕ್ರಿಪ್ಟ್ ಮೇಲೆ ಕೆಲಸ ಮಾಡಿ ನಿರ್ದೇಶನಕ್ಕೆ ಕೈ ಹಾಕಿದ್ದೇನೆ" ಎನ್ನುತ್ತಾರೆ ರಘು.
ಮನೋಹರ್ ಜೋಷಿ ಅವರ ಸಿನೆಮ್ಯಾಟೋಗ್ರಫಿ ಮತ್ತು ಮಣಿಕಾಂತ್ ಕದ್ರಿ ಅವರ ಸಂಗೀತ ಸಿನೆಮಾಗಿದ್ದು, ಇಬ್ಬರು ನಟಿಯರು ಅಭಿನಯಿಸಲಿದ್ದಾರೆ. ಅದರ ಘೋಷಣೆ ಇಂದು ಮುಹೂರ್ತದಲ್ಲಿ ಆಗಲಿದೆಯಂತೆ.