ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ನಾಯಕನಾಗಿ ಅಭಿನಯಿಸುತ್ತಿರುವ `ಜಾಗ್ವಾರ್' ಚಿತ್ರಕ್ಕೆ ಭರ್ಜರಿಯಾಗಿ ಚಾಲನೆ ಸಿಕ್ಕಿದೆ.
ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿನ ಬುಧವಾರ ಆಯೋಜಿಸಿದ್ದ ಅದ್ದೂರಿ ಮುಹೂರ್ತದ ವೇದಿಕೆಯಲ್ಲಿ , ಕುಮಾರಸ್ವಾಮಿ ತಮ್ಮ 57ನೇ ಹುಟ್ಟು ಹಬ್ಬ ಆಚರಿಸಿಕೊಂಡ ಸಂದರ್ಭದಲ್ಲಿಯೇಅವರ ಪುತ್ರ ನಿಖಿಲ್ ಕುಮಾರ್ `ಜಾಗ್ವಾರ್' ಚಿತ್ರದ ಮೂಲಕ ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿಯಾಗಿದ್ದು ವಿಶೇಷವಾಗಿತ್ತು.
ಚಿತ್ರರಂಗದ ಹಲವು ಗಣ್ಯರು, ದಿಗ್ಗಜರು, ಜೆಡಿಎಸ್ ಪಕ್ಷದ ಶಾಸಕರು, ಸಂಸದರು, ಸಾವಿರಾರು ಮಂದಿ ಕಾರ್ಯಕರ್ತರು, ಅಭಿಮಾನಿಗಳು, ಬಂಧು-ಮಿತ್ರರು, ಹಿತೈಷಿಗಳು ಈ ಸಂಭ್ರಮಕ್ಕೆ ಸಾಕ್ಷಿಯಾದರು. `ಬಾಹು ಬಲಿ' ಚಿತ್ರದ ಖ್ಯಾತಿಯ ನಿರ್ದೇಶಕ ರಾಜ್ ಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ `ಜಾಗ್ವಾರ್'ಚಿತ್ರಕ್ಕೆ ಕಥೆ ಹಾಗೂ ಚಿತ್ರಕಥೆ ಬರೆದುಕೊಟ್ಟಿದ್ದಾರೆ. ರಾಜ್ ಮೌಳಿ ಅವರ ಶಿಷ್ಯರೇ ಆಗಿರುವ ಎ. ಮಹದೇವ್ `ಜಾಗ್ವಾರ್' ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಅನಿತಾ ಕುಮಾರ ಸ್ವಾಮಿ ಈ ಚಿತ್ರ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.
ಒಂದು ವರ್ಷದ ಹಿಂದೆಯೇ ಘೋಷಣೆಯಾಗಿದ್ದಂತೆ ಇಂದು `ಜಾಗ್ವಾರ್'ಗೆ ಅದ್ಧೂರಿಯಾಗಿಯೇ ಚಾಲನೆ ಸಿಕ್ಕಿತು. ಸಂಜೆ 6 ಗಂಟೆಗೆ ವೇದಿಕೆಯಲ್ಲೇ ಎಚ್.ಡಿ. ಕುಮಾರಸ್ವಾಮಿ ಅವರ ತಾಯಿ ಚೆನ್ನಮ್ಮ, ಕ್ಯಾಮೆರಾ ಚಾಲನೆ ಮಾಡಿದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕ್ಲಾಪ್ ಮಾಡುವ ಮೂಲಕ `ಜಾಗ್ವಾರ್' ಚಿತ್ರದ ಚಿತ್ರೀಕರಣಕ್ಕೆ ಹಸಿರು ನಿಶಾನೆ ತೋರಿದರು. ಹಿರಿಯ ನಟಿಯರಾದ ಬಿ. ಸರೋಜದೇವಿ, ಡಾ. ಭಾರತಿ ವಿಷ್ಣುವರ್ಧನ್, ಜಯಂತಿ, ಜಯಾ ಮಾಲ, ನಟರಾದ ಅಂಬ ರೀಷ್, ರವಿಚಂದ್ರನ್, ಶಿವರಾಜ್ ಕುಮಾರ್, ಜಗ್ಗೇಶ್, ಶ್ರೀನಾಥ್ ಮತ್ತಿತರರು ಆಗಮಿಸಿ, `ಜಾಗ್ವಾರ್' ನಾಯಕ ನಿಖಿಲ್ ಕುಮಾರ್, ತಂಡಕ್ಕೆ ಶುಭ ಕೋರಿದರು. ಇದಕ್ಕೂ ಮುನ್ನ ನಿಖಿಲ್ ಅಭಿನಯ ತರಬೇತಿಯ ಟೀಸರ್ ಬಿಡುಗಡೆ ಮಾಡಲಾಯಿತು.