ತಮಿಳು ಸೂಪರ್ ಸ್ಟಾರ್ ನಟ ರಜನಿಕಾಂತ್ ಅವರು ದಿವಂಗತ ಮಾಜಿ ರಾಷ್ಟ್ರಪತಿ, ವಿಜ್ಞಾನಿ ಡಾ. ಎ ಪಿ ಜೆ ಅಬ್ದುಲ್ ಕಲಾಮ್ ಅವರಿಗೆ ಟ್ವಿಟ್ಟರ್ ನಲ್ಲಿ ಗೌರವ ಸಪರ್ಪಿಸಿದ್ದಾರೆ.
"ನನಗೆ ಮಹಾತ್ಮ ಗಾಂಧಿ, ಕಾಮರಾಜ್ ಅಥವಾ ಭಾರತಿಯಾರ್ ಅವರನ್ನು ನೋಡುವ ಅವಕಾಶ ಸಿಗಲೇ ಇಲ್ಲ ಆದರೆ ಮಹಾತ್ಮ ಕಲಾಮ್ ಅವರ ನಡುವೆ ಬದುಕುವ ಸೌಭಾಗ್ಯ ದೊರೆಯಿತು" ಎಂದು ಅವರು ಟ್ವೀಟ್ ಮಾಡಿದ್ದಾರೆ.
ಹಾಗೆಯೇ ಜನರ ರಾಷ್ಟ್ರಪತಿಯನ್ನು ಮನಸಾರೆ ಕೊಂಡಾಡಿರುವ ರಜನಿ "ಸಾಧಾರಣ ಪ್ರಾರಂಭದಿಂದ ಅತ್ಯುನ್ನತ ಎತ್ತರಕ್ಕೆ ಬೆಳೆದರೂ, ಸರಳ ಮತ್ತು ವಿನಯಪೂರ್ವ ಜೀವನ ನಡೆಸುತ್ತಿದ್ದರು. ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಲು ಅವರು ಬದುಕಿದ್ದರು. ವಿದ್ಯಾರ್ಥಿ ಸಮುದಾಯಕ್ಕೆ ಉತ್ತೇಜನ ನೀಡುತ್ತ ಅವರ ಮಧ್ಯೆ ಪ್ರೀತಿಪಾತ್ರರಾಗಿದ್ದರು. ಪ್ರೀತಿಯಿಂದ ದೇವರು ಅವರನ್ನು ತಬ್ಬಿಕೊಂಡಿದ್ದಾನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಕೂಡ ಟ್ವೀಟ್ ಮಾಡಿದ್ದಾರೆ.