ಬೆಂಗಳೂರು: ಡಿಎಸ್-ಮ್ಯಾಕ್ಸ್ ಕಲಾಶ್ರೀ ಸೌತ್ ಇಂಡಿಯಾ ಪ್ರಶಸ್ತಿಗೆ ಈ ಬಾರಿ ಹಿರಿಯ ಕಲಾವಿದರಾದ ಸಿ.ಎಚ್. ಲೋಕನಾಥ್, ಸಿಹಿ ಕಹಿ ಚಂದ್ರು ಸಹಿತ 16 ಮಂದಿ ಕಲಾವಿದರನ್ನು ಆಯ್ಕೆಯಾಗಿದ್ದು, ಇದೇ 19ರಂದು ಪ್ರಶಸ್ತಿ ಪ್ರದಾನ ಸಮಾರಂಭ ಚೌಡಯ್ಯ ಮೆಮೋರಿಯಲ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಪಿ. ದಯಾನಂದ ತಿಳಿಸಿದ್ದಾರೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಶಸ್ತಿ ಪ್ರದಾನ ಸಮಾರಂಭ ಸಂಜೆ 4 ಗಂಟೆಗೆ ನಡೆಯುವ ಸಮಾರಂಭದಲ್ಲಿ ಯೋಗ ಗುರು ವಚನಾನಂದ ಸ್ವಾಮೀಜಿ, ಸುಬ್ರಹ್ಮಣ್ಯಶಾಸ್ತ್ರಿ ಸಾನ್ನಿಧ್ಯ ವಹಿಸಲಿದ್ದಾರೆ. ವಾರ್ತಾ ಸಚಿವ ರೋಷನ್ ಬೇಗ್, ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ, ವಿಧಾನಸಭೆಯ ಮಾಜಿ ಅಧ್ಯಕ್ಷ ರಮೇಶ್ ಕುಮಾರ್, ಬಿಬಿಎಂಪಿ ಮಾಜಿ ಸದಸ್ಯ ಬಿ. ಗೋವಿಂದ ರಾಜು ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಕಳೆದ 9 ವರ್ಷಗಳಿಂದ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದವರನ್ನು ಗುರುತಿಸಿ ಡಿ.ಎಸ್. ಮ್ಯಾಕ್ಸ್ ಕಲಾಶ್ರೀ ಪ್ರಶಸ್ತಿ ನೀಡುತ್ತಾ ಬಂದಿದೆ. ಈ ಬಾರಿ ದಕ್ಷಿಣ ಭಾರತದ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ರಾಜ್ಯಗಳಲ್ಲಿರುವ ಕಲಾ ಸಾಧಕರನ್ನು ಆಯ್ಕೆ ಮಾಡಲಾಗಿದೆ. ಅದಕ್ಕಾಗಿ ಡಿ.ಎಸ್. ಮ್ಯಾಕ್ಸ್ ಕಲಾಶ್ರೀ ಸೌತ್ ಇಂಡಿಯಾ ಪ್ರಶಸ್ತಿ ಎಂದು ಹೆಸರು ಇಡಲಾಗಿದೆ ಎಂದು ತಿಳಿಸಿದರು.
ನಮ್ಮ ಸಂಸ್ಥೆ ಹಲವು ವರ್ಷಗಳಿಂದ ಸಮಾಜಮುಖಿ ಕಾರ್ಯ ನಿರ್ವಹಿಸುತ್ತಿದ್ದು, ಪ್ರತಿ ವರ್ಷ ಸಾವಿರಾರು ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿದೆ. ವಿಕಲಚೇತನರಿಗೆ, ಎಚ್ಐವಿ ಪೀಡಿತರಿಗೆ ಆರ್ಥಿಕ ಸಹಾಯವನ್ನು ನೀಡುತ್ತಿದೆ. ಪ್ರತಿವರ್ಷ ಸಂಸ್ಥೆಯ ವತಿಯಿಂದ ಮುರುಘಾಮಠದಲ್ಲಿ ನೂರಾರು ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಪ್ರಶಸ್ತಿ ನೀಡುವ ಚಿಂತನೆಯೂ ಇದೆ ಎಂದು ತಿಳಿಸಿದರು.
ಪ್ರಶಸ್ತಿಗೆ ಆಯ್ಕೆಯಾದವರು
ಸಿ.ಎಚ್. ಲೋಕನಾಥ್, ಡಾ. ರಾಜೇಶ್, ಪ್ರತಿಮಾ ದೇವಿ, ಸಂಗೀತ ನಿರ್ದೇಶಕ ರಾಜನ್ ನಾಗೇಂದ್ರ, ನಿರ್ದೇಶಕರಾದ ಎಸ್. ಕೆ. ಭಗವಾನ್, ಸಾಯಿ ಪ್ರಕಾಶ್, ಸಿಹಿ ಕಹಿ ಚಂದ್ರು, ಬೆಂಗಳೂರು ನಾಗೇಶ್, ನಟಿ ರೇಖಾ ರಾವ್, ತಮಿಳು ಚಿತ್ರರಂಗದ ರಾಧಾ ರವಿ , ಅಂಬಿಕಾ, ತೆಲುಗು ಚಿತ್ರರಂಗದ ಸುಮನ್ ತಲವರ್ ,ಜಯಪ್ರಕಾಶ್ ರೆಡ್ಡಿ, ಸುರೇಶ್ ಕೊಂಡೇಟಿ, ಮಲಯಾಳ ಚಿತ್ರರಂಗದ ಎ. ರಾಘವನ್, ಸೀಮಾ