ಬೆಂಗಳೂರು: ತಮ್ಮ ಚೊಚ್ಚಲ ಚಿತ್ರದಲ್ಲೇ ಗಮನ ಸೆಳೆದ ಸಂತೋಶ್ ಆನಂದರಾಮ್, ಮಿ&ಮಿಸೆಸ್ ರಾಮಾಚಾರಿಯ ನಂತರ ಪುನೀತ್ ರಾಜ್ ಕುಮಾರ ಅವರನ್ನು ನಿರ್ದೇಶಿಸಲು ಸಜ್ಜಾಗಿದ್ದಾರೆ, ಪುನೀತ್ ಅವರ ನಿನ್ನಿಂದಲೇ ಚಿತ್ರವನ್ನು ನಿರ್ಮಿಸಿದ್ದ ಹೊಂಬಾಳೆ ಫಿಲಂಸ್ ನ ವಿಜಯ್ ಈ ಚಿತ್ರದ ನಿರ್ಮಾಪಕರು.
ಈ ಸುದ್ದಿಯನ್ನು ದೃಢೀಕರಿಸಿದ ಸಂತೋಶ್ "ಪುನೀತ್ ಅವರು ಸೂರಿ ಮತ್ತು ಸರವಣನ್ ಅವರ ಜೊತೆ ಸಿನೆಮಾಗಳನ್ನು ಮುಗಿಸಿದ ಕೂಡಲೆ ನನ್ನ ಚಿತ್ರ ಪ್ರಾರಂಭವಾಗುತ್ತದ್ದೆ. ಎಲ್ಲವೂ ಸುಸೂತ್ರವಾಗಿ ನಡೆದರೆ ಸೆಪ್ಟಂಬರ್ ನಲ್ಲಿ ಚಿತ್ರೀಕರಣ ಪ್ರಾರಂಭ. ಪುನೀತ್ ಅವರಿಗೆ ಸ್ಕ್ರಿಪ್ಟ್ ಇಷ್ಟವಾಗಿದೆ. ಅವರ ಜೊತೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ" ಎಂದಿದ್ದಾರೆ.
ತಮ್ಮ ಹಿಂದಿನ ಚಿತ್ರದಲ್ಲಿ ಕೆಲಸ ಮಾಡಿರುವ ತಂತ್ರಜ್ಞರನ್ನೇ ಈ ಚಿಕ್ರಕ್ಕೂ ತೊಡಗಿಸಿಕೊಳ್ಳಲು ಸಂತೋಷ್ ಪ್ರಯತ್ನಿಸುತ್ತಿದ್ದಾರೆ. "ನಮ್ಮದು ಅತ್ಯುತ್ತಮ ತಂಡವಾಗಿತ್ತು. ಸಿನೆಮಾ ಗೆದ್ದದ್ದು ಅದಕ್ಕೆ. ಈ ಚಿತ್ರದಲ್ಲಿ ಅತಿ ದೊಡ್ಡ ತಾರಾಗಣವನ್ನು ಯೋಜಿಸುತ್ತಿದ್ದೇವೆ ಹಾಗು ಹೊಸ ಪೋಷಕ ನಟರನ್ನು ತೊಡಗಿಸಿಕೊಳ್ಳಲಿದ್ದೇವೆ" ಎಂದಿದ್ದಾರೆ ಸಂತೋಶ್.
ಮಿ&ಮಿಸೆಸ್ ರಾಮಾಚಾರಿಯಿಂದ ಗೆಲುವು ಕಂಡಿರುವ ಸಂತೋಶ್ ಅವರಿಗೆ ತೆಲುಗು ಮತ್ತು ತಮಿಳು ಚಿತ್ರರಂಗದ ಹಲವಾರು ನಿರ್ಮಾಣ ಸಂಸ್ಥೆಗಳಿಂದ ನಿರ್ದೇಶನದ ಅವಕಾಶ ಬಂದಿದೆ.