ಚ್ಯಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಏಳು ವರ್ಷದ ಮಗನಿಗೆ ಈಗಲೇ ಸಿನಿರಂಗ ಪ್ರವೇಶಕ್ಕೆ ವೇದಿಕೆ ಸಿದ್ಧಪಡಿಸುತ್ತಿದ್ದಾರೆ. ದರ್ಶನ್ ಪುತ್ರ ವಿನೀಶ್ 'ಐರಾವತ' ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದು, ಅಪ್ಪ ಮತ್ತು ಮಗ ಪೊಲೀಸ್ ಅಧಿಕಾರಿಯ ಕಾಸ್ಟೂಮ್ ನಲ್ಲಿರುವ ಫೋಟೋವೊಂದು ಸಾಮಾಜಿಕ ಜಾಲ ತಾಣಗಳಲ್ಲಿ ಸಖತ್ ಸುದ್ದಿ ಮಾಡುತ್ತಿದೆ.
ನಿರ್ದೇಶಕ ಎಪಿ ಅರ್ಜುನ್, ಪ್ರಕಾರ, 'ವಿನೀಶ್ ಒಂದು ಟೇಕ್ ಕಲಾವಿದ. ದರ್ಶನ್ ಸ್ವತಃ ತನ್ನ ಮಗನ ಸ್ವಾಭಾವಿಕ ನಟನೆಯ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ನಾನಿರುವುದೇ ಅಭಿಮಾನಿಗಳಿಗಾಗಿ, ಆ ಅಭಿಮಾನಿಗಳನ್ನು ಅಭಿನಂದಿಸಲು ಈಗ ನನ್ನ ಮಗ ಕೈಜೋಡಿಸಿದ್ದಾನೆ ಎಂದು ದರ್ಶನ್ ಹೇಳಿದ್ದಾರೆ.
ವಿನೀಶ್ ಮೊದಲು ತನ್ನ ಓದು ಮುಗಿಸಲಿ ಅಂತ ನಾನು ಮತ್ತು ನನ್ನ ಪತ್ನಿ ಬಯಸಿದ್ದೇವೆ. ಈಗಲೇ ಆತನ ಸಿನಿಮಾ ಭವಿಷ್ಯದ ಬಗ್ಗೆ ಹೇಳಲು ಆಗುವುದಿಲ್ಲ. ಅವನು ಈಗ ಬಹಳ ಚಿಕ್ಕವನ್ನು. ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಅವನಿಗಿಲ್ಲ ಎಂದಿದ್ದಾರೆ. ಅಲ್ಲದೆ ವಿನೀಶ್ ಗೆ ಇದು ಮೊದಲ ಚಿತ್ರವಾಗಿದ್ದು, ಮುಂದೆ ಮತ್ತೆ ನಟಿಸುತ್ತಾನೋ, ಇಲ್ಲವೋ ಗೊತ್ತಿಲ್ಲ ಎಂದು ದರ್ಶನ್ ಹೇಳಿದ್ದಾರೆ.
ವಿನೀಶ್ ತುಂಬಾ ಸಂಕೋಚದ ಸ್ವಭಾವದವ ವ್ಯಕ್ತಿ. ಆದರೆ 'ಐರಾವತ' ಚಿತ್ರದ ಚಿತ್ರೀಕರಣದ ವೇಳೆ ಆತ ಎಲ್ಲರೊಂದಿಗೆ ಬೆರೆತಿದ್ದ. ಈ ವೇಳೆ ಹಿರಿಯ ನಟ ಅಶೋಕ್ ಅವರೊಂದಿಗೆ ಚೆನ್ನಾಗಿ ಮತನಾಡಿದ್ದ ಎಂದು ದರ್ಶನ್ ತಿಳಿಸಿದ್ದಾರೆ.
'ಐರಾವತ'ದಲ್ಲಿ ವಿನೀಶ್ ಅಭಿನಯದ ದೃಶ್ಯ ಚಿತ್ರೀಕರಣ ಮುಕ್ತಾಯವಾಗಿದ್ದು, ಪೊಲೀಸ್ ಅಧಿಕಾರಿಯ ಕಾಸ್ಟೂಮ್ ನಲ್ಲಿ ಕಂಗೊಳಿಸಿದ್ದಾನೆ. ಅಪ್ಪನ ಕಾಂಬಿನೇಷನ್‌ನಲ್ಲಿ ಚಿತ್ರೀಕರಣಗೊಂಡಿರುವ ದೃಶ್ಯದಲ್ಲಿ ದರ್ಶನ್ ಕೂಡ ಪೊಲೀಸ್ ಅಧಿಕಾರಿ ಗೆಟಪ್‌ನಲ್ಲಿಯೇ ಕಾಣಿಸಿಕೊಂಡಿದ್ದಾರೆ. ಅಲ್ಲಿಗೆ ವಿನೀಶ್ ಅಭಿನಯಿಸುವ ಮೂಲಕ ತೂಗುದೀಪ ಶ್ರೀನಿವಾಸ ಕುಟುಂಬದ ಮೂರನೇ ತಲೆಮಾರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಂತಾಗಿದೆ.