ಪಣಜಿ: ಅಸಹಿಷ್ಣುತೆಯ ಬಗ್ಗೆ ಭಾರತದಲ್ಲಿ ನಡೆಯುತ್ತಿರುವ ಚರ್ಚೆಯ ಬಗ್ಗೆ ನಿರ್ದೇಶಕ ಅನುರಾಗ್ ಕಶ್ಯಪ್ ಪ್ರತಿಕ್ರಿಯಿಸಿ "ದೇಶದಲ್ಲಿ ಯಾವಾಗಲೂ ಅಸಹಿಷ್ಣುತೆ ಇತ್ತು" ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದು ಮರೀಚಿಕೆ ಎಂದಿದ್ದಾರೆ.
"ಅಸಹಿಷ್ಣುತೆ ಎಂದಿಗೂ ಇತ್ತು. ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲ. ಇದರ ಜೊತೆ ಬದುಕಬೇಕು, ಮತ್ತು ಇದರ ವಿರುದ್ಧ ನಮ್ಮ ಕೈಲಾದಷ್ಟು ಹೋರಾಡಬೇಕು. ಇದು ಕಡಿಮೆಯಾಗುತ್ತದೆ ಎಂದು ನಂಬಿದ್ದೇನೆ" ಎಂದು ಗೋವಾದ ಫಿಲ್ಮ್ ಬಾಜಾರಿನಲ್ಲಿ ಪಾಲ್ಗೊಂಡ ವೇಳೆಯಲ್ಲಿ ತಿಳಿಸಿದ್ದಾರೆ.
ಈ ಸಮಯದಲ್ಲಿ ನಡೆಯುತ್ತಿರುವ ಘಟನೆಗಳು ದೇಶದಲ್ಲಿ ಯಾವತ್ತಿಗೂ ನಡೆಯುತ್ತಿದ್ದವು ಎಂದು ಅನುರಾಗ್ ಕಶ್ಯಪ್ ಹೇಳಿದ್ದಾರೆ.
ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ವಿರೋಧಿಸಿ ಹಲವಾರು ಸಾಹಿತಿಗಳು, ನಿರ್ದೇಶಕರು ವಿಜ್ಞಾನಿಗಳು ಪ್ರಶಸ್ತಿಗಳನ್ನು ಹಿಂದಿರುಗಿಸಿದ್ದರು. ಇದಕ್ಕೆ ಸಿನೆಮಾ ನಟರಾದ ಶಾರುಕ್ ಖಾನ್ ಮತ್ತು ಅಮೀರ್ ಖಾನ್ ಕೂಡ ಬೆಂಬಲಿಸಿದ್ದರು.