ಸಿನಿಮಾ ಸುದ್ದಿ

ವಿದೇಶದಲ್ಲಿ ಕನ್ನಡ ಸಿನೆಮಾಗಳ ಕಲರವ

Guruprasad Narayana

ಬೆಂಗಳೂರು: ಥ್ರಿಲ್ಲರ್ ಸಿನೆಮಾ ರಂಗಿತರಂಗ ದೇಶದಾದ್ಯಂತ ಈ ವಾರ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದ್ದು, ಕನ್ನಡ ಚಿತ್ರರಂಗಕ್ಕೆ ಇದು ಸುಗ್ಗಿ ಕಾಲ ಎನ್ನಲಾಗುತ್ತಿದೆ. ಸಾಮಾನ್ಯವಾಗಿ ಕರ್ನಾಟಕದಲ್ಲಿ ಅನ್ಯಭಾಷೆಗಳ ಸಿನೆಮಾಗಳು ಗಲ್ಲಾಪೆಟ್ಟಿಯಲ್ಲಿ ಕೊಳ್ಳೆಹೊಡೆಯುವುದು ಸಾಮಾನ್ಯ. ಇತ್ತೀಚೆಗೆ ಕನ್ನಡ ಸಿನೆಮಾಗಳು ಕೂಡ ಅನ್ಯ ರಾಜ್ಯಗಳಲ್ಲಿ ಅನ್ಯ ದೇಶಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವುದು ಕನ್ನಡ ಚಿತ್ರೋದ್ಯಮಕ್ಕೆ ವಸಂತ ಕಾಲ ಎನ್ನಬೇಕೆ?

ರಂಗಿತರಂಗ ಸಿನೆಮಾ ಗುರಗಾಂವ್, ಕೋಲ್ಕತ್ತಾ, ಪುಣೆ, ಮುಂಬೈ, ಕೊಚಿ, ಹೈದರಾಬಾದ್, ಚೆನ್ನೈ, ಅಮೆರಿಕಾದ ಮತ್ತು ಯುರೋಪಿನ ಪ್ರಮುಖ ನಗರಗಳಲ್ಲಿ ಉತ್ತಮ ಪ್ರದರ್ಶನ ಕಂಡಿದೆ.

ಚೈತನ್ಯ ನಿರ್ದೇಶನದ ಆಟಗಾರ ದೇಶದಾದ್ಯಂತ ಪಿವಿರ್ ಸಿನೆಮಾಮಂದಿರಗಳಲ್ಲಿ ಬಿಡುಗಡೆ ಕಾಣಲಿದೆ ಎನ್ನಲಾಗಿದೆ. ದ್ವಾರಕೀಶ್ ನಿರ್ಮಾಣ ಸಂಸ್ಥೆಯಿಂದ ನಿರ್ಮಾಣವಾಗಿರುವ ಈ ಸಿನೆಮಾದ ನಿರ್ಮಾಪಕ ಹೇಳುವಂತೆ ಮುಂಬೈನಲ್ಲಿ ಈಗಾಗಲೇ ಆಟಗಾರ ಒಂದು ವಾರ ಮುಗಿಸಿದೆಯಂತೆ. ಮುಂದಿನ ವಾರ ಚನ್ನೈ, ದೆಹಲಿ, ಕೋಲ್ಕತ್ತಾ, ಹೈದರಾಬಾದ್ ಮತ್ತು ಪುಣೆ ನಗರಗಳಲ್ಲಿ ಬಿಡುಗಡೆ ಕಾಣಲಿದೆಯಂತೆ.

ಚೆನ್ನೈನಲ್ಲಿ ರಂಗಿತರಂಗ ಎರಡನೇ ವಾರ ಓಡುತ್ತಿದ್ದು, ನಿರ್ದೇಶಕ ಅನೂಪ್ ಭಂಢಾರಿ ಅವರಿಗೆ ಎಲ್ಲಿಲ್ಲದ ಸಂತಸ. "ನನ್ನ ಕನಸು ಏನೆಂದರೆ ಕನ್ನಡ ಸಿನೆಮಾಗಳನ್ನು ಆಂಧ್ರ, ತಮಿಳುನಾಡು ಮತ್ತು ಇನ್ನಿತರ ರಾಜ್ಯಗಳಲ್ಲಿ ಕನಿಷ್ಠ ೧೦೦ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಬೇಕೆಂಬುದು" ಎನ್ನುತ್ತಾರೆ ಅನೂಪ್.

ಈ ಮಧ್ಯೆ ಉಪೇಂದ್ರ ನಿರ್ದೇಶನದ ಉಪ್ಪಿ೨ ಸಿನೆಮಾ ಕೂಡ ಅಮೆರಿಕಾದಾದ್ಯಂತ ಸುಮಾರು ೫೦-೬೦ ಸಿನೆಮಾಮಂದಿರಗಳಲ್ಲಿ ಬಿಡುಗಡೆ ಕಾಣಲಿದೆಯಂತೆ. ಆಟಗಾರ ಸೆಪ್ಟಂಬರ್ ೧೮ ರಂದು ಸುಮಾರು ೧೦ ದೇಶಗಳಲ್ಲಿ ೧೦೦ ಕಡೆ ಪ್ರದರ್ಶನ ಕಾಣಲಿದೆಯಂತೆ. "ನಾವು ಅಮೇರಿಕಾದಲ್ಲಿ ೨೦ ಪ್ರದರ್ಶನ, ಯೂರೋಪಿನಲ್ಲಿ ೧೬ ಶೋಗಳು ಆಸ್ಟ್ರೇಲಿಯಾದಲ್ಲಿ ೧೦ ಮತ್ತು ಕೆನಡಾದಲ್ಲಿ ೬ ಪ್ರದರ್ಶನಗಳನ್ನು ಹಮ್ಮಿಕೊಂಡಿದ್ದೇವೆ" ಎನ್ನುತ್ತಾರೆ ನಿರ್ಮಾಪಕ ಯೋಗಿಶ್.

SCROLL FOR NEXT