ಬೆಂಗಳೂರು: ಸಾಕಷ್ಟು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕನ್ನಡ ಚಿತ್ರ ನಟ ದಿ.ಡಾ. ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಕೊನೆಗೂ ಭೂಮಿ ಮಂಜೂರು ಮಾಡಿದೆ.
ಸಾಹಸಸಿಂಹ ಡಾ.ವಿಷ್ಣ ವರ್ಧನ್ ಅವರ ಅಭಿಮಾನಿಗಳ ಬಹುದಿನಗಳ ಕನಸನ್ನು ಅವರ ಹುಟ್ಟಹಬ್ಬದ ದಿನದಂದೇ ರಾಜ್ಯ ಸರ್ಕಾರ ಈಡೇರಿಸಿದ್ದು, ವಿಷ್ಣು ಸ್ಮಾರಕ ನಿರ್ಮಾಣಕ್ಕೆ 2 ಎಕರೆ ಭೂಮಿ ಮಂಜೂರು ಮಾಡಿ ಆದೇಶ ಹೊರಡಿಸಿದೆ. ಈ ಹಿಂದೆ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಆಯ್ಕೆ ಮಾಡಿದ್ದ ಎರಡೂ ಜಾಗಗಳು ವಿವಾದಕ್ಕೀಡಾಗಿ ಸರ್ಕಾರ ಸಾಕಷ್ಟು ಮುಜುಗರಕ್ಕೊಳಗಾಗಿತ್ತು. ಅಲ್ಲದೆ ವಿಷ್ಣು ವರ್ಧನ್ ಅಭಿಮಾನಿಗಳ ಕೆಂಗಣ್ಣಿಗೂ ಗುರಿಯಾಗಿತ್ತು. ಇದೀಗ ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಂಡಿರುವ ಸರ್ಕಾರ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಯಾವುದೇ ವಿವಾದಗಳಿಲ್ಲದ ಜಾಗವನ್ನು ಆರಿಸಿ ಮಂಜೂರು ಮಾಡಿದಿ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಮೈಲ ಸಂದ್ರದ ಹಳಿ ಸರ್ಕಾರದ 10 ಎಕರೆ ಭೂಮಿ ಪೈಕಿ 2 ಎಕರೆ ಭೂಮಿಯನ್ನು ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಮಂಜೂರು ಮಾಡಿ ಕಂದಾಯ ಇಲಾಖೆ ಶುಕ್ರವಾರ ಅಧಿಕೃತ ಆದೇಶ ಪ್ರಕಟಿಸಿದೆ ಎಂದು ತಿಳಿದುಬಂದಿದೆ. ಮೈಲಸಂದ್ರದ ಸರ್ವೆ ನಂಬರ್ 26ರಲ್ಲಿನ 2 ಎಕರೆ ಭೂಮಿಯಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣವಾಗಲಿದೆ ಎಂದು ಹೇಳಲಾಗುತ್ತಿದೆ.
ಈ ಹಿಂದೆ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸರ್ಕಾರ ಆಯ್ಕೆ ಮಾಡಿದ್ದ ಎರಡು ಜಾಗಗಳಲ್ಲಿ ಕಾನೂನು ತೊಡಕು ಉಂಟಾಗಿತ್ತು. ಈ ನಡುವೆ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ಜಾಗ ನೀಡುವಂತೆ ಭಾರತಿವಿಷ್ಣುವರ್ಧನ್ ಅವರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ ಅಭಿಮಾನಿಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಬೆಂಗಳೂರಿನಲ್ಲಿಯೇ ವಿಷ್ಣು ಸ್ಮಾರಕ ನಿರ್ಮಾಣವಾಗಬೇಕು ಎಂಬ ಅಭಿಮಾನಿಗಳ ಒತ್ತಡದಿಂದ ಆ ನಿರ್ಧಾರವನ್ನು ಭಾರತಿ ವಿಷ್ಣುವರ್ಧನ್ ಅವರು ಕೈಬಿಟ್ಟಿದ್ದರು.