ಬೆಂಗಳೂರು: ತಾವು ನಟಿಸಿದ ಕಡಿಮೆ ಅವಧಿಯಲ್ಲಿಯೇ ಕನ್ನಡ ಚಿತ್ರರಂಗದ ಗಮನ ಸೆಳೆದವರು ನಟಿ ಶಾನ್ವಿ ಶ್ರೀವಾಸ್ತವ. ಈಗ ಕನ್ನಡದ ಹಿರಿಯ ನಟ-ನಿರ್ದೇಶಕ ರಮೇಶ್ ನಿರ್ದೇಶಿಸಿರುವ 'ಸುಂದರಾಂಗ ಜಾಣ' ಸಿನೆಮಾದಲ್ಲಿ ನಟಿಸಿರುವ ಅವರು ಬಿಡುಗಡೆಗೆ ಉತ್ಸುಕರಾಗಿ ಕಾಯುತ್ತಿದ್ದಾರೆ. ಇದು ತೆಲುಗು ಸಿನೆಮಾ 'ಭಲೇ ಭಲೇ ಮಾಗಾಡಿವೋಯ್'ನ ರಿಮೇಕ್ ಆಗಿದ್ದರು, ರಮೇಶ್ ಅರವಿಂದ್ ಅವರ ರಿಮೇಕ್, ಮೂಲಕ್ಕೂ ಬಹಳ ವಿಭಿನ್ನವಾಗಿದೆ ಎಂದಿದ್ದಾರೆ ನಟಿ ಶಾನ್ವಿ.
"ಇಡೀ ಸಿನೆಮಾದ ಚಿತ್ರೀಕರಣದಲ್ಲಿ ನನಗೆ ಇದು ರಿಮೇಕ್ ಸಿನೆಮಾ ಎಂದೆನಿಸಲೇ ಇಲ್ಲ" ಎಂದು ವಿವರಿಸುವ ನಟಿ "ಸಿನೆಮಾ ಸೆಟ್ ಗಳಲ್ಲಿ ತಾಳ್ಮೆ ಕಳೆದುಕೊಳ್ಳುವ ನಿರ್ದೇಶಕರನ್ನು ನಾನು ನೋಡಿದ್ದೇನೆ. ಇದು ಇಡೀ ವಾತಾವರಣವನ್ನು ಹಾಳುಗೆಡವುತ್ತದೆ. ಆದರೆ ರಮೇಶ್ ಇಡೀ ಚಿತ್ರೀಕರಣದ ವೇಳೆ ಎಷ್ಟೇ ಒತ್ತಡವಿದ್ದರೂ ಒಮ್ಮೆಯೂ ತಾಳ್ಮೆ ಕಳೆದುಕೊಳ್ಳಲಿಲ್ಲ ಮತ್ತು ಅದಕ್ಕಾಗಿ ಎಲ್ಲರು ಅವರನ್ನು ಗೌರವಿಸುತ್ತಿದ್ದರು" ಎನ್ನುತ್ತಾರೆ ಶಾನ್ವಿ.
'ಸುಂದರಾಂಗ ಜಾಣ' ಸಿನೆಮಾದ ಮೂಲಕ ನಿರ್ಮಾಪಕ ಅಲ್ಲು ಅರವಿಂದ್ ಕನ್ನಡ ಚಿತ್ರರಂಗ ಪ್ರವೇಶಿಸಿದ್ದಾರೆ. ಜೊತೆಗೆ ರಾಕಲೈನ್ ವೆಂಕಟೇಶ್ ನಿರ್ಮಾಣ ಸಂಸ್ಥೆ ಕೂಡ ಕೈಜೋಡಿಸಿದೆ. "ಎಲ್ಲರು ವೃತ್ತಿಪರತೆ ಮೆರೆದರು. ಇಂತಹ ಅದ್ಭುತ ತಂಡದೊಂದಿಗೆ ಕೆಲಸ ಮಾಡಲು ಸಿಕ್ಕಿದ್ದು ನನ್ನ ಅದೃಷ್ಟ" ಎನ್ನುತ್ತಾರೆ ಶಾನ್ವಿ.
ಗಣೇಶ್ ಎದುರು ಮೊದಲ ಬಾರಿಗೆ ತಿಳಿ ಹಾಸ್ಯದ ಸಿನೆಮಾದಲ್ಲಿ ನಟಿಸುತ್ತಿರುವ ಶಾನ್ವಿ "ಕೆಲವೇ ದೃಶ್ಯಗಳು ಮತ್ತು ಎರಡು ಹಾಡುಗಳಷ್ಟೇ ಇದ್ದರು ನಾನು ಒಂದೆರಡು ಕಮರ್ಷಿಯಲ್ ಸಿನೆಮಾಗಳಲ್ಲಿ ನಟಿಸಿದ್ದೇನೆ. .. ಈ ಸಿನೆಮಾ ಸಂಭಾಷಣೆಯ ಮೇಲೆ ನಿಂತಿದೆ. ಕಥೆಯಲ್ಲಿ ನನ್ನ ಪಾತ್ರವು ವಿಶೇಷ ಮತ್ತು ಎಲ್ಲರು ಇಷ್ಟಪಡುವಂತದ್ದು" ಎನ್ನುತ್ತಾರೆ.