ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಸ್ಟೈಲ್ ಕಿಂಗ್ ಶೀಘ್ರವೇ ಬಿಡುಗಡೆಯಾಗಲಿದೆ ಎಂಬುದು ಕಳೆದ ಆರು ತಿಂಗಳಿನಿಂದ ಕೇಳಿಬರುತ್ತಿರುವ ಸುದ್ದಿಯಾಗಿದೆ. ಆದರೆ ಇನ್ನೂ ಬಿಡುಗಡೆ ದಿನಾಂಕ ನಿಗದಿಯಾಗಿಲ್ಲ.
ಸ್ಟೈಲ್ ಕಿಂಗ್ ಬಿಡುಗಡೆ ವಿಳಂಬವಾಗುತ್ತಿರುವುದಕ್ಕೆ ಚಿತ್ರ ನಿರ್ದೇಶಕ ಪಿಸಿ ಶೇಖರ್ ಬಗ್ಗೆ ಗಣೇಶ್ ಅಸಮಾಧಾನಗೊಂಡಿದ್ದಾರೆ ಎಂಬುದು ಹೊಸ ಸುದ್ದಿ. ಗಣೇಶ್ ಹಾಗೂ ಪಿಸಿ ಶೇಖರ್ ಇಬ್ಬರೂ ರೋಮಿಯೋ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಸಾಮಾನ್ಯವಾಗಿ ತಮ್ಮ ಚಿತ್ರಗಳ ಬಿಡುಗಡೆ ದಿನಾಂಕ ನಿರ್ಧರಿಸುವ ವಿಷಯದಲ್ಲಿ ಹೆಚ್ಚಾಗಿ ಮಧ್ಯಪ್ರವೇಶ ಮಾಡದ ಗಣೇಶ್, ಸ್ಟೈಲ್ ಕಿಂಗ್ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡುತ್ತಿರುವುದಕ್ಕೆ ಪಿಸಿ ಶೇಖರ್ ವಿರುದ್ಧ ಅಸಮಾಧನಗೊಂದಿದ್ದಾರೆ ಎಂದು ಹೇಳಲಾಗಿದೆ.
ಗಣೇಶ್ ಅವರ 25 ನೇ ಚಿತ್ರ ಬುಗುರಿ ಬಿಡುಗಡೆ ದಿನಾಂಕ(ಆಗಸ್ಟ್ 15 )ರ ಆಸುಪಾಸಿನಲ್ಲೇ ಸ್ಟೈಲ್ ಕಿಂಗ್ ಚಿತ್ರವನ್ನೂ ಬಿಡುಗಡೆ ಮಾಡುವುದಕ್ಕೆ ಪಿಸಿ ಶೇಖರ್ ನಿರ್ಧರಿಸಿದ್ದರು. ಆ.15 ರಂದು ಬಿಡುಗಡೆ ಮಾಡಲು ಸಾಧ್ಯವಾಗದ ಕಾರಣ ಪಿಸಿ ಶೇಖರ್ ಡಿ.25 ರಂದು ಸ್ಟೈಲ್ ಕಿಂಗ್ ಬಿಡುಗಡೆ ಮಾಡುವುದಕ್ಕೆ ಮುಂದಾಗಿದ್ದರು. ಆದರೆ ಎಲ್ಲವೂ ಅಂದುಕೊಂಡಂತೆ ಆಗಲಿಲ್ಲವಾದ ಕಾರಣ ಆ ದಿನಾಂಕವನ್ನು ಕಳೆದುಕೊಳ್ಳಬೇಕಾಯಿತು.
ಬಿಡುಗಡೆ ದಿನಾಂಕ ಮುಂದಕ್ಕೆ ಹೋಗುತ್ತಿರುವುದರ ಬಗ್ಗೆ ಗಣೇಶ್ ಆತಂಕಗೊಂಡಿದ್ದು, ಮುಂಬರುವ ಚಿತ್ರಗಳ ಮೇಲೆ ಪರಿಣಾಮ ಬೀರಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಿತ್ರದ ನಿರ್ದೇಶಕ ಪಿಸಿ ಶೇಖರ್ ಪೋಸ್ಟ್ ಪ್ರೊಡೆಕ್ಷನ್ ಕೆಲಸದಲ್ಲಿ ನಿರತವಾಗಿದ್ದು ತಾಂತ್ರಿಕ ಕಾರಣ, ನಿರ್ಮಾಪಕರು ಅನಾರೋಗ್ಯಕ್ಕೀಡಾದ ಕಾರಣ ಚಿತ್ರದ ಬಿಡುಗಡೆ ವಿಳಂಬವಾಗುತ್ತಿದೆ ಎಂದು ಹೇಳಲಾಗುತ್ತಿದೆ.