ಬೆಂಗಳೂರು: ಪ್ರಶಾಂತ್ ನೀಲ್ ನಿರ್ದೇಶನದ ಯಶ್ ಅಭಿನಯದ 'ಕೆಜಿಎಫ್' ಚಿತ್ರಕ್ಕೆ ಗುರುವಾರ ಬೆಂಗಳೂರಿನ ದೇವಾಲಯವೊಂದರಲ್ಲಿ ಸರಳ ಪೂಜೆಯೊಂದಿಗೆ ಮುಹೂರ್ತ ನೆರವೇರಲಿದೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿ ನಿರ್ಮಾಣವಾಗುತ್ತಿರುವ ಈ ಸಿನೆಮಾಗೆ ಭುವನ್ ಗೌಡ ಸಿನೆಮ್ಯಾಟೋಗ್ರಾಫರ್ ಮತ್ತು ರವಿ ಬಸ್ರೂರ್ ಸಂಗೀತ ನಿರ್ದೇಶಕ.
ಪೂಜೆಯ ನಂತರ ಹೋರಾಗಣ ಚಿತ್ರೀಕರಣಕ್ಕಾಗಿ ಜಾಗದ ಹುಡುಕಾಟಕ್ಕೆ ತೆರಳಲಿದೆಯಂತೆ ಚಿತ್ರತಂಡ. ಇನ್ನೂ ನಿಖರ ದಿನಾಂಕ ನಿಗದಿಯಾಗಿಲ್ಲವಾದರೂ, ಈ ತಿಂಗಳ ಕೊನೆಯಿಂದ ಚಿತ್ರೀಕರಣ ಪ್ರಾರಂಭವಾಗಿ, ಮಗುವಾಗಿದ್ದಾಗಿನ ಯಶ್ ಪಾತ್ರದ ಚಿತ್ರೀಕರಣ ಪ್ರಾರಂಭವಾಗಲಿದೆಯಂತೆ.
ಹೀರೊ ಮತ್ತಿತರ ಕೆಲವು ಪಾತ್ರಗಳನ್ನು ಬಿಟ್ಟರೆ ಸಿನೆಮಾದಲ್ಲಿ ಸಾಕಷ್ಟು ಹೊಸಬರಿದ್ದಾರಂತೆ. ಕಳೆದ ಎರಡು ತಿಂಗಳುಗಳಿಂದ ಪ್ರಶಾಂತ್ ನೇತೃತ್ವದಲ್ಲಿ ತರಬೇತಿ ನಡೆಯುತ್ತಿದ್ದು, ನಾಯಕ ನಟಿಯ ಹುಡುಕಾಟ ಕೂಡ ನಡೆಯುತ್ತಿದೆ.
ಈಮಧ್ಯೆ ಯಶ್ ಅಭಿನಯದ 'ಸಂತು' ಚಿತ್ರೀಕರಣ ಭರದಿಂದ ಸಾಗಿದೆ. ಈಗಾಗಲೇ ೪೫ ದಿನಗಳ ಚಿತ್ರೀಕರಣ ಮುಗಿದಿದ್ದು, ಜೂನ್ ೯ ರಿಂದ ಎರಡನೆ ಹಂತದ ಚಿತ್ರೀಕರಣ ಪ್ರಾರಂಭವಾಗಲಿದೆಯಂತೆ. "ಎಲ್ಲವೂ ಸುಸೂತ್ರವಾಗಿ ಜರುಗಿದರೆ 'ಸಂತು' ಸಿನೆಮಾವನ್ನು ಸೆಪ್ಟಂಬರ್ ಅಥವಾ ಅಕ್ಟೋಬರ್ ಸಮಯಕ್ಕೆ ನೋಡಬಹುದು" ಎನ್ನುತ್ತವೆ ಮೂಲಗಳು.
ಕೆ ಮಂಜು ನಿರ್ಮಿಸುತ್ತಿರುವ ಈ ಸಿನೆಮಾವನ್ನು ಮಹೇಶ್ ರಾವ್ ನಿರ್ದೇಶಿಸುತ್ತಿದ್ದು, ರಾಧಿಕಾ ಪಂಡಿತ್ ನಾಯಕ ನಟಿ.