ಬೆಂಗಳೂರು: ಸ್ಯಾಂಡಲ್ ವುಡ್ ನಟ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ನಡುವಿನ ದಾಂಪತ್ಯ ಕಲಹ ಸತತ 3ನೇ ದಿನಕ್ಕೆ ಕಾಲಿಟ್ಟಿದ್ದು, ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ನಟ ದರ್ಶನ್ ಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಪತ್ನಿ ವಿಜಯಲಕ್ಷ್ಮಿ ದೂರಿನ ಹಿನ್ನಲೆಯಲ್ಲಿ ನಟ ದರ್ಶನ್ ಗೆ ಚೆನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶದ ಪೊಲೀಸ್ ಠಾಣೆಯಿಂದ ಈಗಾಗಲೇ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದ್ದರೂ, ನಟ ದರ್ಶನ್ ಮಾತ್ರ ತಮ್ಮ ತಾಯಿಯ ಆರೋಗ್ಯ ಸರಿಇಲ್ಲ ಎಂದು ಹೇಳಿ ಮೈಸೂರಿಗೆ ತೆರಳಿದ್ದಾರೆ. ದರ್ಶನ್ ಮೈಸೂರಿಗೆ ತೆರಳಿ ಇಂದಿಗೆ ಎರಡು ದಿನಗಳು ಕಳೆದಿದ್ದರೂ ಈ ವರೆಗೂ ಬೆಂಗಳೂರಿಗೆ ವಾಪಸಾಗಿಲ್ಲ. ಈ ಹಿಂದೆ ಪ್ರಕರಣ ಸಂಬಂಧ ದೂರು ದಾಖಲಾಗಿದ್ದಾಗ ಶುಕ್ರವಾರವೇ ವಿಚಾರಣೆಗೆ ಹಾಜಗಾರುವುದಾಗಿ ಹೇಳಿದ್ದ ದರ್ಶನ್ ಈ ವರೆಗೂ ಮಹಿಳಾ ಆಯೋಗದ ವಿಚಾರಣೆಗಾಗಲಿ ಅಥವಾ ಪೊಲೀಸರ ವಿಚಾರಣೆಗಾಗಲಿ ಹಾಜರಾಗಿಲ್ಲ. ಹೀಗಾಗಿ ಪೊಲೀಸರು ನಟ ದರ್ಶನ್ ಗೆ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಏತನ್ಮಧ್ಯೆ ದರ್ಶನ್ ಕೌಟುಂಬಿಕ ಕಲಹವನ್ನು ಸರಿಪಡಿಸುವ ನಿಟ್ಟಿನಲ್ಲಿ ನಟ ಮತ್ತು ವಸತಿ ಸಚಿವ ಅಂಬರೀಶ್ ಸೇರಿದಂತೆ ಚಿತ್ರರಂಗದ ಗಣ್ಯರು ತೆರೆಮರೆಯಲ್ಲಿ ನಡೆಸುತ್ತಿರುವ ಪ್ರಯತ್ನಗಳು ಮುಂದುವರೆದಿವೆ. ಅಂಬರೀಶ್ ನೇತೃತ್ವದಲ್ಲಿ ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿ ಅವರೊಂದಿಗೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆದಿದ್ದು, ಅದರಿಂದ ಯಾವುದೇ ಪ್ರಯೋಜನಗಳು ಆಗಿಲ್ಲ. ಹೀಗಿದ್ದೂ ಚಿತ್ರರಂಗದ ಹಿರಿಯರು ರಾಜಿ ಸಂಧಾನ ಪ್ರಕ್ರಿಯೆ ಮುಂದುವರೆಸಿದ್ದಾರೆ ಎಂದು ತಿಳಿದುಬಂದಿದೆ.
"ಪ್ರಕರಣ ಸಂಬಂಧ ನಟ ದರ್ಶನ್ ಶುಕ್ರವಾರವೇ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದರು. ಆದರೆ ಈ ವರೆಗೂ ಅವರು ವಿಚಾರಣೆಗೆ ಹಾಜರಾಗಿಲ್ಲ. ವಿಚಾರಣೆಗೆ ಹಾಜರಾಗುತ್ತೇನೆ ಅಥವಾ ಬರುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿಲ್ಲ. ಹೀಗಾಗಿ ಅವರನ್ನು ನಮ್ಮ ಸಿಬ್ಬಂದಿ ನಿರಂತರ ಸಂಪರ್ಕಿಸುವ ಪ್ರಯತ್ನದಲ್ಲಿದ್ದಾರೆ. ಒಂದು ವೇಳೆ ದರ್ಶನ್ ವಿಚಾರಣೆಗೆ ಬರಲು ನಿರಾಕರಿಸಿದರೆ ಆಗ ಅವರ ವಿರುದ್ಧ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಒಳಪಡಿಸಲಾಗುವುದು ಎಂದು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಕುಮಾರ್ ಅವರು ಹೇಳಿದ್ದಾರೆ.