ಬೆಂಗಳೂರು: ಕನ್ನಡ ಕಿರುಗೂರಿನ ಗಯ್ಯಾಳಿಗಳು ಚಲನ ಚಿತ್ರದ ಎರಡು ದೃಶ್ಯಗಳು ಮತ್ತು ಕೆಲವು ಸಂಭಾಷಣೆಗಳಿಗೆ ಸೆನ್ಸಾರ್ ಮಂಡಳಿ ತಡೆ ಹಾಕಿರುವುದನ್ನು ಪ್ರಶ್ನಿಸಿ ಚಿತ್ರದ ನಿರ್ಮಾಪಕರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಚಿತ್ರದ ನಿರ್ಮಾಪಕರಾದ ಮೆಸರ್ಸ್ ಮೇಘಾ ಮೂವಿಸ್ ಈ ಸಂಬಂಧ ಹೈಕೋರ್ಟ್ ನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು. ನ್ಯಾಯಾಮೂರ್ತಿ ಎಸ್ ಅಬ್ದುಲ್ ನಜೀರ್ ಅವರಿದ್ದ ಏಕಸದಸ್ಯ ಪೀಠವು ಸೋಮವಾರ ವಿಚಾರಣೆ ನಡೆಸಿ, ಈ ಕುರಿತು ಪ್ರತಿಕ್ರಯಿಸುವಂತೆ ಸೆನ್ಸಾರ್ ಮಂಡಳಿಗೆ ನೋಟೀಸ್ ಜಾರಿ ಮಾಡಿದೆ.
ಈ ಸಿನಿಮಾ ಕನ್ನಡ ಜನಪ್ರಿಯ ಸಾಹಿತಿ ಕೆಪಿ ಪೂರ್ಣಚಂದ್ರ ತೇಜಸ್ವಿ ಅವರ ಕೃತಿ ಆಧಾರಿತವಾಗಿದೆ. ಸೆನ್ಸಾರ್ ಮಂಡಳಿ ಯಾವ ಪದಗಳು ಆಕ್ಷೇಪಾರ್ಹ ಎಂದು ಹೇಳಿದೆಯೋ ಆ ಪದಗಳೆಲ್ಲಾ ಪುಸ್ತಕದಲ್ಲಿ ಇವೆ ಮತ್ತು ಅವನ್ನು ಈಗಾಗಲೇ ಸ್ವೀಕರಿಸಲಾಗಿದೆ. ಆದರೆ ಸಿನಿಮಾದಲ್ಲಿ ಮಾತ್ರ ಯಾಕೆ ಅವುಗಳಿಗೆ ನಿರ್ಬಂಧ ಹಾಕಬೇಕು ಎಂದು ಅರ್ಜಿದಾರರ ಪರ ವಕೀಲ ಜಿಆರ್ ಮೋಹನ್ ವಾದಿಸಿದ್ದಾರೆ.
ಟಿವಿ ಸಿರಿಯಲ್ ಗಳಿಗೆ ಯಾವುದೇ ಸೆನ್ಸಾರ್ ಮಂಡಳಿ ಇಲ್ಲ. ಚಲನಚಿತ್ರಗಳು ಮಾತ್ರ ಸೆನ್ಸಾರ್ ವ್ಯಾಪ್ತಿಗೆ ತರಲಾಗುತ್ತದೆ. ಈ ಮೂಲಕ ಚಲನಚಿತ್ರಗಳ ಸೃಜನಶೀಲತೆಯನ್ನು ಮೊಟಕುಗೊಳಿಸಲಾಗುತ್ತಿದೆ. ಇದು ಸಂವಿಧಾನದ 19(1)ಜಿ ವಿಧಿಯ ಉಲ್ಲಂಘನೆ ಎಂದು ಅವರು ತಿಳಿಸಿದ್ದಾರೆ.