ಬೆಂಗಳೂರು: 'ಕ್ರೇಜಿ ಬಾಯ್' ನಂತರ ಇದೀಗ ನಿರ್ದೇಶಕ ಮಹೇಶ್ ಬಾಬು, 'ಆ ದಿನಗಳು' ಖ್ಯಾತಿಯ ಚೇತನ್ ಅವರೊಂದಿಗೆ ಹೊಸ ಯೋಜನೆಗೆ ಕೈಹಾಕಿದ್ದು ಭರದ ಸಿದ್ಧತೆ ನಡೆಸಿದ್ದಾರೆ.
ಹಾಗೆಯೇ ಬಾಲಿವುಡ್ ಸಿನೆಮಾ 'ರಾಸ್ ರೀಬೂಟ್' ನಲ್ಲಿ ನಟಿಸಿರುವ ಕನ್ನಡ ಬೆಡಗಿ ಕೃತಿ ಕರಬಂಧ ಅವರೊಂದಿಗೂ ಮತ್ತೊಂದು ಯೋಜನೆ ಸಿದ್ಧಪಡಿಸುತ್ತಿದ್ದಾರೆ. ಮಹೇಶ್ ಅವರೇ ಕೃತಿ ಅವರನ್ನು ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದು, ನಂತರ ಅವರು ಪ್ರೇಮ್ ಜೊತೆಗೆ 'ಪ್ರೇಮ್ ಅಡ್ಡ'ದಲ್ಲಿ ನಟಿಸಿದ್ದರು. ಈಗ ಎಲ್ಲವು ಸುಸೂತ್ರವಾಗಿ ನಡೆದರೆ ಮಹೇಶ್ ಬಾಬು ಅವರೊಂದಿಗೆ ಕೃತಿ ಅವರ ಮೂರನೇ ಚಿತ್ರ ಇದಾಗಲಿದೆ.
ಇದನ್ನು ಧೃಢೀಕರಿಸಿದ ಮಹೇಶ್ ಬಾಬು " ಹೌದು, ಸಿನೆಮಾವೊಂದಕ್ಕೆ ಕೃತಿ ಜೊತೆಗೆ ಕೆಲಸ ಮಾಡಲಿದ್ದೇನೆ. ನಮ್ಮ ಉಳಿದ ಕೆಲಸಗಳೆಲ್ಲವೂ ಮುಗಿದ ಮೇಲೆ ಜನವರಿ 2017 ರಿಂದ ಈ ಸಿನೆಮಾದ ಚಿತ್ರೀಕರಣ ಪ್ರಾರಂಭಿಸುವ ಇರಾದೆ ಇದೆ" ಎನ್ನುತ್ತಾರೆ.
ಇನ್ನು ಹೆಸರಿದ ಈ ಚಿತ್ರ ಹೀರೋಯಿನ್ ಕೇಂದ್ರಿತ ಹಾರರ್-ಥ್ರಿಲ್ಲರ್ ಎನ್ನುತ್ತಾರೆ ಮಹೇಶ್.
"ನಾನು ಈಗಾಗಲೇ ಕೃತಿ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ನಮ್ಮ ಯೋಜನೆ ಪ್ರಕಾರ ಎಲ್ಲವು ನಡೆದರೆ, ನಟಿ ಮೊದಲ ಬಾರಿಗೆ ತನಿಖಾಧಿಕಾರಿಯಾಗಿ ನಟಿಸಲಿದ್ದಾರೆ" ಎನ್ನುತ್ತಾರೆ ಮಹೇಶ್.
ಬಾಲಿವುಡ್ ಏಣಿ ಏರಿದ್ದರು, ಮೂಲದ ಬಗ್ಗೆ ಇನ್ನು ಗೌರವ ಹೊಂದಿರುವ ಕೃತಿ ಅವರ ಬಗ್ಗೆ ಮಹೇಶ್ ಅವರಿಗೆ ಅಪಾರ ಅಭಿಮಾನ. "ಅವರು ನಮ್ಮನ್ನು ಇಂದಿಗೂ ನೆನಪಿಸಿಕೊಳ್ಳುತ್ತಾರೆ ಮತ್ತು ಅವರ ಜೊತೆ ಸುಧೀರ್ಘ ಸಿನೆಮಾ ಪಯಣ ಬೆಳೆಸುವ ಆಸೆ ಇದೆ. ಶೀಘ್ರದಲ್ಲೇ ಈ ಸಿನೆಮಾದ ನಿರ್ಮಾಪಕರನ್ನು ಅಂತಿಮಗೊಳಿಸಬೇಕಿದೆ ನಂತರ ಕೃತಿಗೆ ಕಥೆ ಹೇಳಲಿದ್ದೇನೆ" ಎನ್ನುತ್ತಾರೆ ನಿರ್ದೇಶಕ.