ಹೈದರಬಾದ್: ತನ್ನ ಮೇಕಿಂಗ್ ನಿಂದಲೇ ಭಾರಿ ನಿರೀಕ್ಷೆ ಹುಟ್ಟಿಸಿರುವ ಬಾಹುಬಲಿ 2 ಚಿತ್ರದ ಮೇಕಿಂಗ್ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿದ್ದು, ಚಿತ್ರದ ಚಿತ್ರೀಕರಣದ ಫೋಟೋಗಳು ಇದೀಗ ವೈರಲ್ ಆಗಿದೆ.
ಆಂಧ್ರ ಪ್ರದೇಶದ ರಾಯಲಸೀಮೆ ಪ್ರದೇಶದ ಕಲ್ಲಿನ ಗುಡ್ಡಗಳ ನಡುವೆ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು, ಕಲ್ಲು ಕ್ವಾರಿಯೊಂದರಲ್ಲಿ ಚಿತ್ರದ ಫೈಟಿಂಗ್ ಸೀಕ್ವೆಲ್ ಚಿತ್ರೀಕರಣ ನಡೆಸಲಾಗುತ್ತಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಗಿದೆ. ಈ ಫೋಟೋಗಳೇ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಈ ಹಿಂದೆಯೂ ಕೂಡ ಬಾಹುಬಲಿಯ ಸಾಕಷ್ಟು ಚಿತ್ರಗಳು ಲೀಕ್ ಆಗಿತ್ತಾದರೂ, ಈಗ ಲೀಕ್ ಆಗಿರುವ ಚಿತ್ರ ಯಾರು ತೆಗೆದಿದ್ದು ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಚಿತ್ರಕರಣದ ಘಟಕಕ್ಕೆ ನಿರ್ದೇಶಕ ರಾಜಮೌಳಿ ಸೇರಿದಂತೆ ಯಾವುದೇ ಸಿಬ್ಬಂದಿ ಮೊಬೈಲ್ ಫೋನ್ ತರುವ ಹಾಗಿಲ್ಲ ಎಂಬ ಕಟ್ಟಪ್ಪಣೆ ಮಾಡಲಾಗಿದೆ. ಹೀಗಿದ್ದೂ, ಚಿತ್ರದ ಚಿತ್ರೀಕರಣದ ಚಿತ್ರಗಳು ಇಂಟರ್ ನೆಂಟ್ ನಲ್ಲಿ ಲೀಕ್ ಆಗಿರುವ ಕುರಿತು ಚಿತ್ರತಂಡ ತಲೆಕೆಡಿಸಿಕೊಂಡಿದೆ.