ಬೆಂಗಳೂರು: 'ಮಾಸ್ತಿ ಗುಡಿ' ಸಿನೆಮಾದ ಬಿಡುಗಡೆಗೆ ಕಾಯುತ್ತಿರುವ ನಿರ್ದೇಶಕ ನಾಗಶೇಖರ್, ಸದ್ದಿಲ್ಲದೇ ಮತ್ತೊಂದು ಐತಿಹಾಸಿಕ ಡ್ರಾಮಾ ಸ್ಕ್ರಿಪ್ಟ್ ಮೇಲೆ ಕೆಲಸ ಮಾಡುತ್ತಿದ್ದಾರೆ. 'ಶಾಂತಲಾ ವಿಷ್ಣುವರ್ಧನ' ಎಂಬ ಶೀರ್ಷಿಕೆಯನ್ನು ನೊಂದಾಯಿಸಿರುವ ನಾಗಶೇಖರ್ ಕಳೆದ ಆರು ತಿಂಗಳುಗಳಿಂದ ಇದರ ಮೇಲೆ ಕೆಲಸ ಮಾಡುತ್ತಿದ್ದಾರಂತೆ. ಇದನ್ನು ಅಂತಿಮಗೊಳಿಸಲು ಇನ್ನು ಆರು ತಿಂಗಳು ಹಿಡಿಯುತ್ತದಂತೆ.
೧೧೦೮-೧೧೫೨ ನೇ ಇಸವಿಯಲ್ಲಿ ನಡೆಯುವ ಐತಿಹಾಸಿಕ ಕಥೆ ಇದಾಗಿದ್ದು, ರಾಜ ವಿಷ್ಣುವರ್ಧನ ಮತ್ತು ನಾಟ್ಯರಾಣಿ ಶಾಂತಲಾ ಅವರ ಪ್ರೇಮ ಕಥೆಯನ್ನು ಅನ್ವೇಷಿಸಲಿದೆಯಂತೆ. "ಇದು ನಿಜ ಕಥೆಯನ್ನು ಆಧರಿಸಿದ್ದು" ಎನ್ನುವ ನಾಗಶೇಖರ್ "ಇದಕ್ಕೆ ಜೀವ ಕೊಡಲು ನನ್ನ ಕಲ್ಪನೆಯು ಸೇರಿಕೊಳ್ಳಲಿದೆ. ಇಂತಹ ಸಿನೆಮಾಗೆ ಅತಿ ಹೆಚ್ಚು ಸಂಶೋಧನೆಯ ಅಗತ್ಯ ಇದೆ ಮತ್ತು ನನ್ನ ತಂಡ ಇದಕ್ಕಾಗಿ ಕೆಲಸ ಮಾಡುತ್ತಿದೆ. ಈಮಧ್ಯೆ ನಾನು ಸಾಕಷ್ಟು ಪುಸ್ತಕಗಳನ್ನು ಓದುತ್ತಿದ್ದೇನೆ ಮತ್ತು ಶಾಂತಲಾ ವಿಷ್ಣುವರ್ಧನ ಮೇಲೆ ಮಂಡಿಸಿರುವ ಪ್ರಬಂಧವನ್ನು ಕೂಡ ಓದುತ್ತಿದ್ದೇನೆ" ಎನ್ನುತ್ತಾರೆ.
ಸ್ಕ್ರಿಪ್ಟ್ ರಚನೆಯ ಕೆಲಸ ಕೂಡ ಪ್ರಾರಂಭಿಸಿರುವುದಾಗಿ ಹೇಳುವ ನಿರ್ದೇಶಕ, ಸುದೀಪ್ ಮುಖ್ಯ ಪಾತ್ರಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತಾರೆ ಎನ್ನುತ್ತಾರೆ. "ಈ ಪಾತ್ರಕ್ಕೆ ಅವರು ಸರಿಯಾಗಿ ಹೊಂದಿಕೊಳ್ಳುತ್ತಾರೆ. ಆದರೆ ಅವರಿಗೆ ಇದರಲ್ಲಿ ಆಸಕ್ತಿಯಿದೆಯೇ ಎಂದು ನಾನಿನ್ನು ಕೇಳಬೇಕಿದೆ. ಸ್ಕ್ರಿಪ್ಟ್ ಅಂತಿಮಗೊಂಡ ಮೇಲಷ್ಟೇ ಅವರನ್ನು ಕೇಳಲಿದ್ದೇನೆ. ಇದು ಅದ್ದೂರಿಯಾಗಿ ನಿರ್ಮಾಣವಾಗಲಿದೆ. ಸುಮಾರು ೬೦ ಕೋಟಿ ಬಜೆಟ್ ಹೊಂದಿರುವ ನಿರ್ಮಾಪಕ ಬೇಕಾಗಿದೆ" ಎನ್ನುತ್ತಾರೆ ನಿರ್ದೇಶಕ.
ಎಲ್ಲಾ ನಾಲ್ಕು ದಕ್ಷಿಣ ಭಾರತೀಯ ಭಾಷೆಗಳು ಮತ್ತು ಹಿಂದಿಯಲ್ಲಿ ಕೂಡ ಇದನ್ನು ಹೊರತರಲು ಚಿಂತಿಸುತ್ತಿದ್ದೇನೆ. ಆದರೆ ಇವೆಲ್ಲವೂ ನಿರ್ಮಾಪಕರ ಮೇಲೆ ಅವಲಂಬಿತವಾಗಿದೆ. ಸದ್ಯಕ್ಕೆ ನಾನು ಶೀರ್ಷಿಕೆ ನೋಂದಾಯಿಸಿದ್ದೇನೆ ಮತ್ತು ಸ್ಕ್ರಿಪ್ಟ್ ನ ಮೊದಲ ಹಂತದ ಕೆಲಸ ಮುಗಿದಿದೆ ಎನ್ನುತ್ತಾರೆ ನಾಗಶೇಖರ್. "'ಮಾಸ್ತಿ ಗುಡಿ' ಬಿಡುಗಡೆಗಾಗಿ ಕಾಯುತ್ತಿದ್ದೇನೆ. ನಂತರ ಸ್ವಲ್ಪ ಸಮಯದ ಕಾಲ ವಿರಮಿಸಿಕೊಳ್ಳಲಿದ್ದೇನೆ. 'ಮೈನಾ' ನಂತರ 'ಮಾಸ್ತಿ ಗುಡಿ' ಸಿನೆಮಾದ ಮೇಲೆ ಮೂರು ವರ್ಷಗಳ ಕಾಲ ಕೆಲಸ ಮಾಡಿದ್ದೇನೆ" ಎನ್ನುತ್ತಾರೆ ನಾಗಶೇಖರ್.