ಬೆಂಗಳೂರು: ಭಾರತೀಯ ಚಿತ್ರರಂಗ ಕಂಡ ಮೇರು ನಟ ಕನ್ನಡದ ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ 88ನೇ ಜನ್ಮ ದಿನಾಚರಣೆ ನಿಮಿತ್ತ ಖ್ಯಾತ ಸರ್ಚ್ ಎಂಜಿನ್ ಗೂಗಲ್ ಡೂಡಲ್ ಬಿಡಿಸುವ ಮೂಲಕ ಗೌರವ ಸೂಚಿಸಿದೆ.
ಏಪ್ರಿಲ್ 24 1929ರಲ್ಲಿ ಜನಿಸಿದ್ದ ಡಾ.ರಾಜ್ ಕುಮಾರ್ ಅವರು ತಮ್ಮ ಅಮೋಘ ಅಭಿನಯದ ಮೂಲಕ ಇಡೀ ಭಾರತೀಯ ಚಿತ್ರರಂಗವನ್ನು ಸೆಳೆದಿದ್ದರು. ಇಂತಹ ಮೇರು ನಟನಿಗೆ ಗೂಗಲ್ ಡೂಡಲ್ ಮೂಲಕ ಗೌರವ ಸಲ್ಲಿಕೆ ಮಾಡಿದ್ದು, ತೈಲವರ್ಣದಲ್ಲಿ ರಚಿಸಿರುವಂತೆ ಕಾಣುವ ಡಾ. ರಾಜ್ ಕುಮಾರ್ ಅವರ ಭಾವಚಿತ್ರವನ್ನು ಡೂಡಲ್ ನಲ್ಲಿ ಉಪಯೋಗಿಸಲಾಗಿದೆ. ಚಿತ್ರ ಮಂದಿರದ ತೆರೆಯ ಮೇಲೆ ಡಾ. ರಾಜ್ ಕುಮಾರ್ ಅವರ ನಗುಮೊಗ ಕಂಗೊಳಿಸುತ್ತಿರುವಂತೆ ಡೂಡಲ್ ರಚಿಸಲಾಗಿದ್ದು, ಅದನ್ನು ನೂರಾರು ಪ್ರೇಕ್ಷಕರು ನೋಡುತ್ತಿರುವಂತೆ ಬಿಂಬಿಸಲಾಗಿದೆ. ಡೂಡಲ್ ಹಿಂಭಾಗದಲ್ಲಿ ಕಂಡೂ ಕಾಣಿಸದಂತೆ ಗೂಗಲ್ ರಚನೆ ಮಾಡಲಾಗಿದೆ.
ಈ ಡೂಡಲ್ ಅನ್ನು ಕ್ಲಿಕ್ ಮಾಡಿದರೆ, ಡಾ. ರಾಜ್ ಕುಮಾರ್ ಅವರಿಗೆ ಹಾಗೂ ಅವರಿಗೆ ಸಂಬಂಧಿಸಿದ ಮಾಹಿತಿಗಳನ್ನು ನೀಡಬಹುದಾದ ಲಿಂಕ್ ಗಳ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ಮೊದಲ ಲಿಂಕ್ ಡಾ. ರಾಜ್ ಕುಮಾರ್ ಬಗೆಗಿನ ವಿಕಿಪೀಡಿಯಾ ಲಿಂಕ್ ಇದ್ದು, ಅವರ ಬಗೆಗಿಗನ ಇತರೆ ಲಿಂಕ್ ಗಳು ಕೂಡ ತೆರೆದುಕೊಳ್ಳುತ್ತವೆ.
ಏಪ್ರಿಲ್ 24ರಂದು ವರನಟ ಡಾ. ರಾಜ್ ಕುಮಾರ್ ಅವರ 88ನೇ ಹುಟ್ಟುಹಬ್ಬವನ್ನು ನಾಡಿನಾದ್ಯಂತ ಹಾಗೂ ವಿಶ್ವದೆಲ್ಲೆಡೆ ಇರುವ ಡಾ. ರಾಜ್ ಅಭಿಮಾನಿಗಳು ಆಚರಿಸುತ್ತಾರೆ.