ಬೆಂಗಳೂರು: ದಕ್ಷಿಣ ಭಾರತದ ಖ್ಯಾತ ನಟಿಯ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಖ್ಯಾತ ನಟ ಕಿಚ್ಚಾ ಸುದೀಪ್ , ಕಾಮುಕರನ್ನು ಗುಂಡಿಟ್ಟು ಕೊಲ್ಲ ಬೇಕು ಎಂದು ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಸುದೀಪ್, ನಾನು ಕೇಳಿದ ಸುದ್ದಿ ನಿಜವೇ ಆಗಿದ್ದರೆ ಖಂಡಿತಾ ಆ ಕಾಮುಕರನ್ನು ಗುಂಡಿಟ್ಟು ಕೊಲ್ಲಬೇಕು ಎಂದು ಹೇಳಿದ್ದಾರೆ. "ತನಗಾದ ನೋವು ಏನು ಎಂದು ಆ ಮಹಿಳೆಗೆ ಮಾತ್ರ ತಿಳಿದಿರುತ್ತದೆ. ನಾನು ಕೇಳಿದ ಸುದ್ದಿ ಸತ್ಯವೇ ಆಗಿದ್ದರೆ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯವಾಗಿರುವುದು ಸಾಬೀತಾಗಿದ್ದರೆ ಖಂಡಿತಾ ಆ ಕಾಮುಕನನ್ನು ಗುಂಡಿಟ್ಟು ಕೊಲ್ಲಬೇಕು. ಪರ ಸ್ತ್ರೀಯರನ್ನು ಗೌರವದಿಂದ ಕಾಣದವನು ತನ್ನ ತಾಯಿಗೂ ಗೌರವ ಕೊಡುವುದಿಲ್ಲ. ಇದು ಕೇವಲ ಓರ್ವ ನಟಿ ಎಂದಷ್ಟೇ ಅಲ್ಲ ಓರ್ವ ಮಹಿಳೆಗೆ ಆದ ನೋವಿಗಾಗಿ ನಾನ ಪ್ರತಿಕ್ರಿಯಿಸುತ್ತಿದ್ದೇನೆ. ಆದರೂ ಆ ನೋವು ಅನುಭವಿಸಿದ ಮಹಿಳೆಗಷ್ಟೇ ತಾನು ಎಂತಹ ಪರಿಸ್ಥಿತಿಯಲ್ಲಿದ್ದೇನೆ ಎಂದು ತಿಳಿಯುತ್ತದೆ ಎಂದು ಹೇಳಿದ್ದಾರೆ.
ಚಿತ್ರೀಕರಣ ಮುಗಿಸಿಕೊಂಡು ರಾತ್ರಿ ಮನೆಗೆ ವಾಪಸಾಗುತ್ತಿದ್ದ ನಟಿ ಭಾವನಾ ಅವರನ್ನು ಮಾರ್ಗ ಮಧ್ಯೆ ಅಪಹರಣ ಮಾಡಿದ ಹಾಲಿ ಮತ್ತು ಮಾಜಿ ಚಾಲಕರು ದುಷ್ಕರ್ಮಿಗಳ ನೆರವಿನಿಂದ ಆಕೆಯ ಮೇಲೆ ಕಾರಿನಲ್ಲೇ ಲೈಂಗಿಕ ದೌರ್ಜನ್ಯವೆಸಗಿ ಪರಾರಿಯಾಗಿದ್ದರು. ಸ್ಥಳೀಯ ಓರ್ವ ನಿರ್ದೇಶಕನ ನೆರವಿನಿಂದ ನಟಿ ಭಾವನಾ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದು, ಪ್ರಕರಣ ಸಂಬಂಧ ಹಾಲಿ ಚಾಲಕ ಮಾರ್ಟಿನ್ ಮತ್ತು ಮಾಜಿ ಚಾಲಕ ಮತ್ತು ಪ್ರಕರಣದ ಮಾಸ್ಚರ್ ಮೈಂಡ್ ಪಲ್ಸರ್ ಸುನಿ ಎಂಬುವರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ತಲೆ ಮರೆಸಿಕೊಂಡಿರುವ ಇತರೆ ನಾಲ್ಕು ಮಂದಿಯ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.