ಚೆನ್ನೈ: ತಮ್ಮ ಮುಂಬರುವ ಚಿತ್ರ ಸಿಂಗಂ 3ಯ ಪ್ರಚಾರಕ್ಕಾಗಿ ಜಲ್ಲಿಕಟ್ಟು ಕ್ರೀಡೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದು ಪ್ರಾಣಿದಯಾ ಸಂಘ ಪೇಟಾ ಮಾಡಿರುವ ಆರೋಪಕ್ಕೆ ಸಂಬಂಧಪಟ್ಟಂತೆ ತಮಿಳು ಚಿತ್ರ ನಟ ಸೂರ್ಯ ಸಂಘಟನೆಗೆ ನೊಟೀಸ್ ಜಾರಿ ಮಾಡಿದ್ದಾರೆ.
ಸಂಘಟನೆಯ ಆರೋಪದಿಂದ ತಮಗೆ ಮಾನಸಿಕವಾಗಿ ತೀವ್ರ ಒತ್ತಡವಾಗಿದ್ದು ಒಂದೋ ಕ್ಷಮೆ ಕೇಳಬೇಕು ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಬೇಕೆಂದು ಅವರು ಪೇಟಾ ಸಂಘಟನೆಗೆ ಹೇಳಿದ್ದಾರೆ.
ನಿನ್ನೆಯ ದಿನಾಂಕದಲ್ಲಿ ಕಳುಹಿಸಿದ ನೊಟೀಸ್ ನಲ್ಲಿ ನಟ ಸೂರ್ಯ ಅವರ ವಕೀಲ ಆರ್ ವಿಜಯ್ ಆನಂದ್, ಸೂರ್ಯ ಅವರು ಜಲ್ಲಿಕಟ್ಟು ಪರ ತಮ್ಮ ಬೆಂಬಲವನ್ನು ಅನೇಕ ಸಮಯಗಳಿಂದ ನೀಡುತ್ತಾ ಬಂದಿದ್ದಾರೆ. ಅವರಿಗೆ ಅಗ್ಗದ ಪ್ರಚಾರ ಪಡೆಯುವ ಅಗತ್ಯವಿಲ್ಲ. ಅವರ ಮೇಲೆ ವೃಥಾ ಆರೋಪ ಮಾಡಿ ಮಾನಸಿಕ ಹಿಂಸೆ ನೀಡಿದ್ದಕ್ಕಾಗಿ ಭಾರತದ ಪೇಟಾ ಸಂಘಟನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ವ ಜೋಶಿಪುರ ಮತ್ತು ಮತ್ತಿಬ್ಬರು ಅಧಿಕಾರಿಗಳಿಗೆ ನೊಟೀಸ್ ಜಾರಿ ಮಾಡಲಾಗಿದೆ ಎಂದರು.
ಇಂತಹ ಕೀಳು ಮಟ್ಟದ ಆರೋಪ ನಮ್ಮ ಕಕ್ಷಿದಾರರ ಗೌರವಕ್ಕೆ ಚ್ಯುತಿಯನ್ನುಂಟುಮಾಡಿದೆ. ಇದರ ಹಿಂದೆ ದುರುದ್ದೇಶವಿದ್ದು ಸತ್ಯಕ್ಕೆ ದೂರವಾಗಿದೆ. ನಟನಿಗೆ ಇದರಿಂದ ಆಘಾತ ಮತ್ತು ಮಾನಸಿಕ ಹಿಂಸೆಯುಂಟಾಗಿದೆ. ನಟ ಸೂರ್ಯ ಅವರು 300 ವರ್ಷಗಳ ಇತಿಹಾಸವಿರುವ ತಮಿಳುನಾಡಿನ ಸಂಸ್ಕೃತಿ, ಹೆಮ್ಮೆ ಮತ್ತು ಸಂಪ್ರದಾಯದ ಪ್ರತೀಕವಾದ ಜಲ್ಲಿಕಟ್ಟಿನ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹೇಳಿದ್ದಾರೆ ಎಂದು ಆನಂದ್ ತಿಳಿಸಿದ್ದಾರೆ.
ಪೇಟಾ ಸಂಘಟನೆಯ ಅಧಿಕಾರಿಗಳು ಇನ್ನು ಏಳು ದಿನಗಳೊಳಗೆ ಬರಹದ ಮೂಲಕ ಷರತ್ತುರಹಿತ ಕ್ಷಮೆ ಕೇಳಬೇಕು.ಮತ್ತು ಆ ಹೇಳಿಕೆಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಬೇಕು. ಅದಕ್ಕೆ ವಿಫಲವಾದಲ್ಲಿ ನಮ್ಮ ಕಕ್ಷಿದಾರರು ಕಾನೂನು ಕ್ರಮಕ್ಕೆ ಇಳಿಯುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಹಿಂದೆ ನಟ ಸೂರ್ಯ ಅವರು ಜಲ್ಲಿಕಟ್ಟಿಗೆ ವಿರೋಧ ವ್ಯಕ್ತಪಡಿಸುವುದಕ್ಕೆ ಪೇಟಾ ಸಂಘಟನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos