೨೦೧೬ ರ ಮಿಸ್ಟರ್ ವರ್ಲ್ಡ್ ರಾಹುಲ್ ಖಾಂಡೇಲ್ವಾಲ್
ಮುಂಬೈ: ಭಾರತೀಯ ನಟ ಮತ್ತು ಮಾಡೆಲ್, ೨೦೧೬ ರ ಮಿಸ್ಟರ್ ವರ್ಲ್ಡ್ ರಾಹುಲ್ ಖಾಂಡೇಲ್ವಾಲ್ ತಮ್ಮ ಮುಂದಿನ ಅಮೆರಿಕ ಭೇಟಿಯಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡುವ ಭರವಸೆ ವ್ಯಕ್ತಪಡಿಸಿದ್ದಾರೆ.
"ಮಿಸ್ಟರ್ ವರ್ಲ್ಡ್ ಗೆದ್ದ ಮೇಲೆ ನಾನು ವಿಶ್ವದಾದ್ಯಂತ ಪರ್ಯಟನೆ ಮಾಡಿ ಹೊಸ ಹೊಸ ಜನರನ್ನು ಭೇಟಿ ಮಾಡುತ್ತಿದ್ದೇನೆ. ಅಮೆರಿಕಾದಲ್ಲಿಯೂ ಬಹಳಷ್ಟು ಜನರನ್ನು ಭೇಟಿಮಾಡಲು ಎದುರುನೋಡುತ್ತಿದ್ದೇನೆ. ಹಾಗೆಯೇ ಅಧ್ಯಕ್ಷರನ್ನು ಕೂಡ ಭೇಟಿ ಮಾಡಬಹುದು ಎಂದು ನಂಬಿದ್ದೇನೆ" ಎಂದು ಟ್ರಂಪ್ ಪ್ರಮಾಣವಚನ ಸ್ವೀಕಾರದ ವೇಳೆ ಅಮೆರಿಕಾ ರಾಯಭಾರ ಕಚೇರಿಯಲ್ಲಿ ನಡೆದ ಔತಣಕೂಟದಲ್ಲಿ ಭಾಗವಹಿಸಿದ್ದ ರೋಹಿತ್ ಹೇಳಿದ್ದಾರೆ.
ಎರಡು ದೇಶಗಳ ನಡುವೆ ಶಕ್ತಿಯುತ ಸಂಬಂಧ ಮುಂದುವರೆಯುವ ಭರವಸೆಯನ್ನು ಕೂಡ ಅವರು ವ್ಯಕ್ತಪಡಿಸಿದ್ದಾರೆ.
"ನಾನು ಡೊನಾಲ್ಡ್ ಟ್ರಂಪ್ ಅವರ ಸಂದರ್ಶನಗಳನ್ನು ನೋಡಿದ್ದೇನೆ. ಅವರಿಗೆ ಹಿಂದೂಗಳ ಮತ್ತು ಹಿಂದೂ ಧರ್ಮದ ಮೇಲೆ ಬಹಳ ಗೌರವ ಇದೆ. ಆದುದರಿಂದ ಸಂಬಂಧ ಬಹಳ ಶಕ್ತಿಯುತವಾಗಿ ದೀರ್ಘಕಾಲದವರೆಗೆ ಉಳಿಯಲಿದೆ. ಆ ಸಂಬಂಧ ಅದ್ಭುತವಾಗಿರುತ್ತದೆ" ಎಂದು ಅವರು ಹೇಳಿದ್ದಾರೆ.
ರೋಹಿತ್ ಸದ್ಯಕ್ಕೆ ಬಾಲಿವುಡ್ ಚಿತ್ರವೊಂದರಲ್ಲಿ ನಟಿಸಲಿದ್ದಾರೆ. "ನಾವು ಬಹುಷಃ ಏಪ್ರಿಲ್ ನಲ್ಲಿ ಚಿತ್ರೀಕರಣ ಪ್ರಾರಂಭಿಸಲಿದ್ದೇವೆ" ಎಂದು ಕೂಡ ಹೆಚ್ಚು ವಿವರಗಳನ್ನು ತಿಳಿಸದೆ ಹೇಳಿದ್ದಾರೆ.