'ಬಾಹುಬಲಿ ೨' ಸಿನೆಮಾದ ಪೋಸ್ಟರ್
ಚೆನ್ನೈ: ಎಸ್ ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ ೨' ಸಿನೆಮಾದ ಟ್ರೇಲರ್ ಅಂತಿಮಗೊಳಿಸುವುದಕ್ಕೂ ಮುಂಚಿತವಾಗಿ ೨೫ ಆವೃತ್ತಿಗಳನ್ನು ಹೊರತಂದಿದ್ದಾಗಿ ತಿಳಿಸಿದ್ದಾರೆ ಟ್ರೇಲರ್ ನ ಸಂಕಲನಕಾರ ವಂಶಿ ಅತ್ಲುರಿ. ಈ ಟ್ರೇಲರ್ ಎಲ್ಲ ಭಾಷೆಗಳನ್ನು ಒಳಗೊಂಡಂತೆ ೨೪ ಘಂಟೆಗಳಲ್ಲಿ ೫ ಕೋಟಿ ಬಾರಿ ವೀಕ್ಷಿಸಲಾಗಿದೆ.
ಈ ಟ್ರೇಲರ್ ನ ಸಂಕಲನಕಾರ ಅಲ್ತುರಿ, ಬಂದಿರುವ ಪ್ರತಿಕ್ರಿಯೆಗಳಿಗೆ ಥ್ರಿಲ್ ಆಗಿರುವುದಾಗಿ ತಿಳಿಸುತ್ತಾರೆ.
"ಇಷ್ಟು ಅದ್ಭುತ ಪ್ರತಿಕ್ರಿಯೆ ಬರುತ್ತದೆಂದು ನಾನು ಎಣಿಸಿರಲಿಲ್ಲ. ಭಾರತದ ಅತಿ ದೊಡ್ಡ ಸಿನೆಮಾ ಆಗಲಿರುವ ಇದರ ಟ್ರೇಲರ್ ಮೇಲೆ ಕೆಲಸ ಮಾಡುವ ಒತ್ತಡಕ್ಕಿಂತಲೂ, ಪ್ರೇಕ್ಷಕರು ಅದನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದರ ಬಗ್ಗೆಯೇ ಉದ್ವೇಗಕ್ಕೆ ಒಳಗಾಗಿದ್ದೆ" ಎಂದು ಕೂಡ ತಿಳಿಸಿದ್ದಾರೆ.
"ನಾನು ಪ್ರಚಾರ ವಿಡಿಯೋಗಳನ್ನು ಸಂಕಲನ ಮಾಡುತ್ತಿದ್ದೆ. ಕಾರ್ತಿಕೇಯ (ರಾಜಮೌಳಿ ಪುತ್ರ) ಅವರ ಸಂಪರ್ಕಕ್ಕೆ ಬಂದು ಅವರಿಂದಲೇ ಟ್ರೇಲರ್ ಮೇಲೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು" ಎಂದಿರುವ ಅವರು ಈ ಟ್ರೇಲರ್ ಮಾಡುವುದಕ್ಕೆ ಎರಡು ತಿಂಗಳು ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ.
"ಸ್ಕ್ರಿಪ್ಟ್ ಅಂತಿಮಗೊಳಿಸುವಂತೆಯೇ ಟ್ರೇಲರ್ ನ ೨೫ ಆವೃತ್ತಿಗಳಿದ್ದವು. ವಿಶ್ವ ನೋಡಿದ್ದು ಆ ೨೫ ನೆಯ ಆವೃತ್ತಿ" ಎಂದು ಕೂಡ ಅವರು ಹೇಳಿದ್ದಾರೆ.
ಏಪ್ರಿಲ್ ೨೮ ರಂದು 'ಬಾಹುಬಲಿ:ಮುಕ್ತಾಯ' ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.