ಹಲವು ವಿಘ್ನಗಳ ನಂತರ ಲೇಡಿಸ್ ಟೇಲರ್ ಚಿತ್ರಕ್ಕೆ ಮತ್ತೆ ರೆಕ್ಕೆ ಪುಕ್ಕಾ ಮೂಡತೊಡಗಿದೆ. ಹೌದು ಸ್ಯಾಂಡಲ್ವುಡ್ ನಟಿ ಶೃತಿ ಹರಿಹರನ್ ಚಿತ್ರಕ್ಕೆ ನಾಯಕಿಯಾಗಲು ಸೈ ಅಂದಿದ್ದು ಚಿತ್ರ ಸೆಟ್ಟೇರಲು ಸಜ್ಜಾಗಿದೆ.
ನೀರ್ ದೋಸೆ ಚಿತ್ರದ ನಿರ್ದೇಶಕ ವಿಜಯ್ ಪ್ರಸಾದ್ ಅವರು ತಮ್ಮ ಕಥೆಗೆ ಪೂರಕ ಸ್ಪಂದನೆ ಸಿಗದಿದ್ದರೆ ಅಂತಹ ಯೋಜನೆಗಳನ್ನೇ ಕೈಬಿಟ್ಟಿದ್ದಾರೆ ವಿನಃ ಚಿತ್ರಕಥೆಯನ್ನು ಬದಲಾಯಿಸಲ್ಲ. ಆದರೆ ಇದೇ ಮೊದಲ ಬಾರಿಗೆ ವಿಜಯ್ ಪ್ರಸಾದ್ ಅವರು ತಮ್ಮ ಲೇಡಿಸ್ ಟೇಲರ್ ಚಿತ್ರದ ಕಥೆಯಲ್ಲಿ ಕೊಂಚ ಬದಲಾವಣೆಯನ್ನು ಮಾಡಿಕೊಂಡಿದ್ದರ ಪರಿಣಾಮ ಯೋಜನೆಗೆ ಮತ್ತೆ ಜೀವ ಬಂದಿದೆ.
ಹಲವು ತಿಂಗಳ ಹಿಂದೆಯೇ ರವಿಶಂಕರ್ ಗೌಡ ಅವರನ್ನು ನಾಯಕ ಎಂದು ಹೇಳಿ ಲೇಡಿಸ್ ಟೇಲರ್ ಚಿತ್ರವನ್ನು ಘೋಷಿಸಿದ್ದರು. ಆದರೆ ಚಿತ್ರದಲ್ಲಿನ ನಾಯಕಿ ಬರೋಬ್ಬರಿ 120 ಕೆಜಿ ತೂಕ ಇರಬೇಕು ಎಂಬ ಷರತ್ತು ಇದ್ದಿದ್ದರಿಂದ ಹಲವು ನಟಿಯರು ಚಿತ್ರದಲ್ಲಿ ನಟಿಸಲು ಹಿಂದೇಟು ಹಾಕಿದ್ದರು. ಚಿತ್ರಕ್ಕೆ ಯಾವ ನಾಯಕಿಯೂ ಸಿಗದೇ ಕೊನೆಗೆ ಯೋಜನೆ ನಿಲ್ಲುವಂತಾ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಹಂತದಲ್ಲೇ ಶೃತಿ ಹರಿಹರನ್ ಚಿತ್ರಕ್ಕೆ ನಾಯಕಿಯಾಗಲು ಒಪ್ಪಿಕೊಂಡಿದ್ದರಿಂದ ವಿಜಯ್ ಪ್ರಸಾದ್ ನಿರ್ದೇಶನದ ಮೂರನೇ ಚಿತ್ರಕ್ಕೆ ಕಾಲ ಕೂಡಿಬಂದಿದೆ.
ಇನ್ನು ಚಿತ್ರಕ್ಕೆ ಶೃತಿ ಹರಿಹರನ್ ಅವರು ಗ್ರೀನ್ ಸಿಗ್ನಲ್ ನೀಡಿರುವುದರಿಂದ ಅವರು ತಮ್ಮ ತೂಕವನ್ನು ಸ್ವಲ್ಪ ಹೆಚ್ಚಿಸಿಕೊಳ್ಳಬೇಕಿದೆ. ಇನ್ನು ನೀರ್ ದೋಸೆ ಚಿತ್ರದ ನಿರ್ಮಾಪಕ ಪ್ರಸನ್ನ ಅವರೇ ಲೇಡಿಸ್ ಟೇಲರ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಪ್ರಸನ್ನ ಅವರ ಬ್ಯೂಟಿಫೂಲ್ ಮನಸುಗಳು ಚಿತ್ರದಲ್ಲಿ ಶೃತಿ ಹರಿಹರನ್ ನಟಿಸಿದ್ದು ಇದು ಅವರ ಎರಡನೇ ಚಿತ್ರವಾಗಿದೆ. ನವೆಂಬರ್ ತಿಂಗಳ ಎರಡನೇ ವಾರದಲ್ಲಿ ಚಿತ್ರದ ಮುರ್ಹೂತ ನಡೆಯಲಿದೆ.