ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚಿತ್ರ
ಬೆಂಗಳೂರು: ಕನ್ನಡದ ಕಿರುತೆರೆ ನಟ ಕಿರಣ್ ರಾಜ್ ವಿರುದ್ಧ ಹಲ್ಲೆ, ಮದುವೆಯಾಗುವುದಾಗಿ ಹೇಳಿ ನಂಬಿಸಿ ಮೋಸ ಮಾಡಿದ ಆರೋಪ ಕೇಳಿ ಬಂದಿದ್ದು, ಮುಂಬೈ ಮೂಲದ ನಟಿಯೊಬ್ಬರು ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕನ್ನಡದ ಕಿರುತೆರೆಯ ಕಿನ್ನರಿ ಸೀರಿಯಲ್ ನ ನಾಯಕ ಕಿರಣ್ ರಾಜ್ ವಿರುದ್ಧ ಮುಂಬೈ ಮೂಲದ ನಟಿ ಯಾಸ್ಮಿನ್ ಪಠಾಣ್ ಅವರು ದೂರು ನೀಡಿದ್ದು, ದೂರಿನಲ್ಲಿ ನಟ ಕಿರಣ್ ರಾಜ್, ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ. ಕಳೆದ 5 ವರ್ಷಗಳಿಂದ ನಾವಿಬ್ಬರು ಲಿವಿಂಗ್ ಟು ಗೆದರ್ ಸಂಬಂಧ ಹೊಂದಿದ್ದು, ಇದೀಗ ಕಿರಣ್ ರಾಜ್ ತನ್ನ ಮದುವೆಯಾಗದೇ ಮೋಸ ಮಾಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ನನ್ನನ್ನು ತಮ್ಮ ಸ್ನೇಹಿತರೊಂದಿಗೆ ಸೇರಿ ಥಳಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಹಲ್ಲೆಯಿಂದ ಯಾಸ್ಮಿನ್ ಮುಖ, ಕೈ- ಕಾಲಿನ ಮೇಲೆ ಗಾಯದ ಗುರುತುಗಳಾಗಿವೆ ಎನ್ನಲಾಗಿದೆ.
ಈ ಸಂಬಂಧ ನಗರದ ರಾಜರಾಜೇಶ್ವರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ದೂರು ಸಲ್ಲಿಸುವ ವೇಳೆ ನಟಿ ತಾವಿಬ್ಬರೂ ಜೊತೆಗಿರುವ ಫೋಟೋಗಳನ್ನೂ ಕೂಡ ಸಾಕ್ಷ್ಯವಾಗಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರೇಯಸಿಯಿಂದಲೇ ದೂರು ದಾಖಲು..!
ಕಿನ್ನಕಿ ಧಾರಾವಾಹಿ ಸಕ್ಸಸ್ ಬೆನ್ನಲ್ಲೇ ನಟ ಕಿರಣ್ ರಾಜ್ ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡೋಕೆ ಸಿದ್ಧವಾಗುತ್ತಿದ್ದಾರೆ. ಕಿರುತೆರೆಯಲ್ಲಿ ಜನಪ್ರಿಯತೆ ಗಳಿಸಿದ್ದ ಕಿರಣ್ ರಾಜ್, 'ಅಸತೋಮ ಸದ್ಗಮಯ' ಎಂಬ ಸಿನಿಮಾದಿಂದ ನಾಯಕನಾಗಿ ಬಡ್ತಿ ಪಡೆದಿದ್ದರು. ಆದರೆ, ವಿಪರ್ಯಾಸವೆಂದರೆ, ಸಿನಿಮಾದಲ್ಲಿ ಹೀರೋ ಆಗ ಬೇಕಿದ್ದ ಕಿರಣ್ ವಿರುದ್ಧ ಆತನ ಪ್ರೇಯಸಿಯೇ ದೂರು ದಾಖಲಿಸಿದ್ದಾರೆ. ನಟಿ ಯಾಸ್ಮಿನ್ ಹೇಳುವಂತೆ ತಾವು ಮತ್ತು ಕಿರಣ್ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ಪರಸ್ಪರ ಒಪ್ಪಿಗೆ ಮೇರೆಗೆ ಲಿವಿಂಗ್ ಟು ಗೆದರ್ ರಿಲೇಷನ್ ಷಿಪ್ ಹೊಂದಿದ್ದೆವು. ಅಲ್ಲದೆ ನಮ್ಮ ನಡುವೆ ದೈಹಿಕ ಸಂಬಂಧ ಕೂಡ ಇತ್ತು. ಅಂತರ್ ಧರ್ಮೀಯರಾದರೂ ನಮ್ಮಿಬ್ಬರ ಪ್ರೇಮಕ್ಕೆ ನಮ್ಮ ಕುಟುಂಬಸ್ಥರು ಒಪ್ಪಿಗೆ ನೀಡಿದ್ದರು. ಆದರೆ, ಕೆಲ ದಿನಗಳಿಂದ ಕಿರಣ್ ವರ್ತನೆ ಬದಲಾಗಿದೆ. ಅಲ್ದೇ, ಸುಖಾಸುಮ್ಮನೆ ಕಿರುಕುಳ ನೀಡುತ್ತಿದ್ದಾನೆ. ಅಲ್ಲದೇ, ಸ್ನೇಹಿತರೊಟ್ಟಿಗೆ ಸೇರಿಕೊಂಡು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಯಾಸ್ಮಿನ್ ದೂರಿದ್ದಾರೆ. ಹಲ್ಲೆ ಸಂಬಂಧ ಯಾಸ್ಮಿನ್ ಈ ಹಿಂದೆ ಮುಂಬೈನ ಪೊಲೀಸ್ ಠಾಣೆಯೊಂದರಲ್ಲೂ ದೂರು ನೀಡಿದ್ದರು.