ಬೆಂಗಳೂರು: ಶೂಟಿಂಗ್ ಸೆಟ್ ನಲ್ಲಿ ಸಹ ಕಲಾವಿದನ ಮೇಲೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.
ನೈಸ್ ರಸ್ತೆಯಲ್ಲಿ ಯಜಮಾನ ಚಿತ್ರದ ಸಾಂಗ್ ಚಿತ್ರೀಕರಣದ ವೇಳೆಯಲ್ಲಿ ಸಹ ಕಲಾವಿದ ಶಿವು ಮೇಲೆ ದರ್ಶನ್ ಹಲ್ಲೆ ನಡೆಸಿದ್ದು, ಶಿವು ತಾವರಕೆರೆ ಠಾಣೆಗೆ ತೆರಳಿ ದೂರು ನೀಡಲು ಮುಂದಾಗಿದ್ದರು ಎಂಬಂತಹ ಮಾಹಿತಿಗಳು ತಿಳಿದುಬಂದಿದೆ.
ಸೆಲ್ಪಿ ತೆಗೆದುಕೊಂಡಿದ್ದಕ್ಕೆ ದರ್ಶನ್ ಹಲ್ಲೆ ನಡೆಸಿದ್ದಾರೆ ಎಂಬುದು ಶಿವು ಅವರ ಆರೋಪವಾಗಿದೆ.15 ದಿನಗಳ ಹಿಂದೆಯೂ ದರ್ಶನ್ ಶೂಟಿಂಗ್ ಸೆಟ್ ನಲ್ಲಿ ಸಹ ಕಲಾವಿದ ಉಮೇಶ್ ಎಂಬವರ ಮೇಲೆ ಹಲ್ಲೆ ನಡೆಸಿದ್ದರು ಎಂಬಂತಹ ಆರೋಪ ಕೂಡಾ ಕೇಳಿಬಂದಿತ್ತು.
ಈ ಕುರಿತಂತೆ ಮಾತನಾಡಿರುವ ಯಜಮಾನ ಚಿತ್ರದ ನಿರ್ಮಾಪಕರಾದ ಬಿ. ಸುರೇಶ್ ಹಾಗೂ ಶೈಲಾಜ ನಾಗ್ ಹಲ್ಲೆ ಆರೋಪವನ್ನು ನಿರಾಕರಿಸಿದ್ದಾರೆ. ದರ್ಶನ್ ಯಾವುದೇ ಹಲ್ಲೆ ನಡೆಸಿಲ್ಲ ಎಂದು ತಿಳಿಸಿದ್ದಾರೆ.
ಚಿತ್ರೀಕರಣದ ಸ್ಥಳದಲ್ಲಿ ಶಿವು ವಿಡಿಯೋ ಚಿತ್ರೀಕರಣ ಮಾಡುತ್ತಿದ್ದರು. ಅದಕ್ಕೆ ದರ್ಶನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಅಷ್ಟೇ ಯಾವುದೇ ರೀತಿಯ ಹಲ್ಲೆ ನಡೆದಿಲ್ಲ ಎಂದು ಚಿತ್ರ ನಿರ್ಮಾಪಕ ಬಿ. ಸುರೇಶ್ ಹೇಳಿದ್ದು, ತಾವೂ ಕೂಡಾ ಶಿವು ವಿರುದ್ಧ ದೂರು ನೀಡುವ ಚಿಂತನೆ ನಡೆಸುವುದಾಗಿ ಹೇಳಿದರು.
ಶಿವ ಚಿತ್ರೀಕರಣ ಮಾಡಿದ್ದಕ್ಕೆ ನಮ್ಮಲ್ಲಿ ಸಾಕ್ಷ್ಯಧಾರವಿದ್ದು, ಚಿತ್ರೀಕರಣ ಮಾಡದಂತೆ ತಿಳುವಳಿಕೆ ನೀಡಲಾಗಿದೆ. ಆದರೆ, ಯಾವುದೇ ರೀತಿಯ ಹಲ್ಲೆ ನಡೆದಿಲ್ಲ ಎಂದು ನಿರ್ಮಾಪಕಿ ಶೈಲಾಜ ನಾಗ್ ತಿಳಿಸಿದ್ದಾರೆ.