ಜೋಧಪುರದ ಉಮೈದ್ ಭವನದಲ್ಲಿ ಪ್ರಿಯಾಂಕ-ನಿಕ್ ಜೋನಸ್ ವಿವಾಹ ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ನೆರವೇರಿದ್ದು, ವಿವಾಹವಾಗುತ್ತಿದ್ದಂತೆಯೇ ಸಂಭ್ರಮಾಚರಣೆಗಾಗಿ ಹಲವು ನಿಮಿಷಗಳ ಕಾಲ ಪಟಾಕಿ ಸಿಡಿಸಲಾಯಿತು. ಇತ್ತ ಪಟಾಕಿ ಸಿಡಿಯುತ್ತಿದ್ದಂತೆಯೇ ಅತ್ತ ಟ್ವಿಟಿಗರು ಪ್ರಿಯಾಂಕ ಚೋಪ್ರಾ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ
ವಿವಾಹವಾಗುತ್ತಿದ್ದಂತೆಯೇ ಪಟಾಕಿ ಸಿಡಿಸಿರುವುದಕ್ಕೆ ಟ್ವಿಟಿಗರು ಪ್ರಿಯಾಂಕ ಚೋಪ್ರಾ ವಿರುದ್ಧ ಕಿಡಿಕಾರಿರುವುದಕ್ಕೆ ಕಾರಣ ಸ್ವತಃ ಪ್ರಿಯಾಂಕ ಚೋಪ್ರಾ ಅವರೇ. ಹೇಗೆ ಅಂತೀರಾ? ಇತ್ತೀಚೆಗಷ್ಟೇ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸುವುದರ ವಿರುದ್ಧ ಪರಿಯಾಂಕ ಚೋಪ್ರಾ ಜಾಗೃತಿ ಮೂಡಿಸಿದ್ದರು. ವಿಡಿಯೋ ಮೂಲಕ ಜನತೆಗೆ ಕರೆ ನೀಡಿ, ಪಟಾಕಿ ಸಿಡಿಸುವುದರಿಂದ ಆಸ್ತಮಾ ಸಮಸ್ಯೆ ಎದುರಿಸುತ್ತಿರುವವರಿಗೆ ತೊಂದರೆಯಾಗುತ್ತದೆ ಎಂದು ಸ್ವತಃ ಆಸ್ತಮಾ ಸಮಸ್ಯೆ ಎದುರಿಸುತ್ತಿರುವ ಪ್ರಿಯಾಂಕ ಚೋಪ್ರಾ ಹೇಳಿದ್ದರು. ಆದರೆ ಈಗ ವಿವಾಹದ ಸಂದರ್ಭದಲ್ಲಿ ಹಲವು ನಿಮಿಷಗಳ ಕಾಲ ಪಟಾಕಿ ಸಿಡಿಸಿರುವುದಕ್ಕೆ ಪಿಗ್ಗಿ ವಿರುದ್ಧ ಟ್ವಿಟರ್ ನಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ.
ಇನ್ನು ಸುಪ್ರೀಂ ಕೋರ್ಟ್ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸುವುದಕ್ಕೆ ನೀಡಿದ್ದ ನಿರ್ದೇಶನಗಳನ್ನು ಉಲ್ಲೇಖಿಸಿರುವ ಕೆಲವರು, ಪಿಗ್ಗಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವೆ ಎಂದೂ ಪ್ರಶ್ನಿಸಿದ್ದಾರೆ.