ತುಮಕೂರು: ಮೀಟೂ ಆರೋಪ ಹೊರಿಸಿದ್ದ ನಟಿ ಶೃತಿ ಹರಿಹರನ್ ವಿರುದ್ಧ ನಟ ಅರ್ಜುನ್ ಸರ್ಜಾ ಅವರ ತಾಯಿ ಲಕ್ಷ್ಮಿ ದೇವಮ್ಮ ತೀವ್ರ ಕಿಡಿಕಾರಿದ್ದಾರೆ.
ಈ ಬಗ್ಗೆ ಮಾಧ್ಯಮೊಂದಿಗೆ ಮಾತನಾಡಿರುವ ಲಕ್ಷ್ಮೀ ದೇವಮ್ಮ ಅವರು, ಅರ್ಜುನ್ ನಾನು ಹೆತ್ತ ಮಗ. ಹೆಣ್ಣುಮಕ್ಕಳೊಂದಿಗೆ ಆ ರೀತಿ ವರ್ತಿಸಲು ಸಾಧ್ಯವೇ ಇಲ್ಲ. ಅರ್ಜುನ್ ಏನು ಎಂದು ನನಗೆ ಗೊತ್ತಿದೆ. 14 ವರ್ಷದಿಂದ ಆತ ಚಿತ್ರರಂಗದಲ್ಲಿದ್ದಾನೆ. ಈಗ ಅವನಿಗೆ 40 ವರ್ಷ ಅವನ ಮಗಳೂ ಚಿತ್ರರಂಗದಲ್ಲಿದ್ದಾಳೆ. ಇಂತಹ ಆರೋಪ ಮಾಡುವಾಗ ಯಾರಾದರೂ ಸರಿ ಯೋಚಿಸಬೇಕು ಎಂದು ಅವರು ಕಿಡಿಕಾರಿದ್ದಾರೆ.
'ಅರ್ಜುನ್ 150 ಸಿನಿಮಾದಲ್ಲಿ ನಟನೆ ಮಾಡಿದ್ದಾನೆ. ಎಲ್ಲಿಯೂ ಇಂತಹ ಮೀಟೂ ಆರೋಪಗಳು ಕೇಳಿಬಂದಿಲ್ಲ. ಯಾರೂ ಕೂಡ ನನ್ನ ಮಗನ ಮೇಲೆ ಆರೋಪ ಮಾಡಲಿಕ್ಕೆ ಚಾನ್ಸೇ ಇಲ್ಲ. ನಾನು ಹೆತ್ತು ಹಾಲು ಕುಡಿಸಿ ಸಾಕಿರುವವಳು. ನಮ್ಮ ವಂಶದಲ್ಲಿ ಯಾರೂ ಈ ರೀತಿಯಿಲ್ಲ. ನನ್ನ ಮಗ ತಪ್ಪು ಮಾಡಲು ಸಾಧ್ಯವೇ ಇಲ್ಲ. ಏಕೆಂದರೆ ಎಲ್ಲ ಹೆಣ್ಣು ಮಕ್ಕಳನ್ನು ಯಾವ ಯಾವ ರೀತಿ ನೋಡಿಕೊಳ್ಳಬೇಕು, ಯಾವ ರೀತಿ ಮಾತನಾಡಬೇಕು ಎಂಬುದು ಅವನಿಗೆ ಚೆನ್ನಾಗಿ ಗೊತ್ತಿದೆ. ಇವತ್ತಿನವರೆಗೂ ಕೇರಳ, ತಮಿಳುನಾಡು, ಹೈದರಾಬಾದ್, ಕರ್ನಾಟಕ ಇಲ್ಲಿ ಯಾವುದಾದರೂ ಕೆಟ್ಟು ಹೆಸರು ಬಂದರೆ ಹೇಳಿ'.
ಮಗ 150ಕ್ಕೂ ಹೆಚ್ಚು ಸಿನಿಮಾವನ್ನು ಮಾಡಿದ್ದಾನೆ. 70-80 ಜನ ಹಿರೋಯಿನ್ ಗಳೊಂದಿಗೆ ಕೆಲಸ ಮಾಡಿದ್ದಾನೆ. ಬೇಕಿದ್ದರೆ ಇವರನ್ನು ಕೇಳಿ. ಯಾರೊಂದಿಗೆ ಇಂತಹ ಸಮಸ್ಯೆ ಎದುರಾಗಲಿಲ್ಲ. ಆಕೆ ತಪ್ಪು ಮಾಡುತ್ತಿದ್ದಾಳೆ. ಒಂದು ವೇಳೆ ಆಕೆಯನ್ನು ನನ್ನ ಮಗ ಬಿಟ್ಟರೂ ನಾನು ಆಕೆಯನ್ನು ಬಿಡುವುದಿಲ್ಲ. ಆಕೆಯದೇ ತಪ್ಪು ಎಂದಾದಲ್ಲಿ ಆಕೆಗೆ ಶಿಕ್ಷೆ ಆಗಲೇಬೇಕು ಎಂದು ಲಕ್ಷೀ ದೇವಮ್ಮ ಹೇಳಿದ್ದಾರೆ.
ಶೃತಿ ಪರ ನಿಂತ ಪ್ರಕಾಶ್ ರೈ ವಿರುದ್ಧವೂ ಕಿಡಿ
ಇದೇ ವೇಳೆ ನಟಿ ಶೃತಿ ಹರಿಹರನ್ ಪರ ಬೆಂಬಲಕ್ಕೆ ನಿಂತಿದ್ದ ನಟ ಪ್ರಕಾಶ್ ರೈ ವಿರುದ್ಧ ಕಿಡಿ ಕಾರಿದ ಲಕ್ಷ್ಮೀ ದೇವಮ್ಮ ಅವರು, ಆತನಿಗೆ ನಾಲ್ಕು ಜನ ಹೆಂಡತಿಯರು. ನಾವು ನೆಟ್ಟಗಿದ್ದರೆ ಮತ್ತೊಬ್ಬರಿಗೆ ಬುದ್ದಿ ಹೇಳಬೇಕು ಎಂದು ಹೇಳಿದರು.