ಸಿನಿಮಾ ಸುದ್ದಿ

ಸ್ವರ್ಣಕಮಲ ಪ್ರಶಸ್ತಿ ಪುರಸ್ಕೃತ ‘ಬ್ಯಾರಿ’ ಸಿನಿಮಾ ಪ್ರದರ್ಶಿಸದಂತೆ ಕೋರ್ಟ್ ಆದೇಶ

Lingaraj Badiger
ಮಂಗಳೂರು: ‘ಸ್ವರ್ಣ ಕಮಲ’ ರಾಷ್ಟ್ರ ಪ್ರಶಸ್ತಿ ಪಡೆದ ಬ್ಯಾರಿ ಭಾಷೆಯ ಮೊತ್ತ ಮೊದಲ ‘ಬ್ಯಾರಿ’ ಚಿತ್ರವನ್ನು ಪ್ರದರ್ಶಿಸಬಾರದು ಎಂದ ಮಂಗಳೂರು ಕೋರ್ಟ್ ಸೋಮವಾರ ತೀರ್ಪು ನೀಡಿದೆ.
ಈ ಚಿತ್ರ ಸಾಹಿತಿ ಸಾರಾ ಅಬೂಬಕರ್ ಅವರ ಕಾದಂಬರಿ ‘ಚಂದ್ರಗಿರಿಯ ತೀರದಲ್ಲಿ’ ಕೃತಿಯ ಕತೆಯನ್ನು ಕೃತಿಚೌರ್ಯವೆಸಗಿ ನಿರ್ಮಿಸಿರುವುದಾಗಿ ಮಾಡಿದ್ದ ಆಪಾದನೆಯನ್ನು ಮೂರನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದಲ್ಲಿ ಎತ್ತಿ ಹಿಡಿದಿದ್ದು, ಬ್ಯಾರಿ ಚಿತ್ರವನ್ನು ಇನ್ನು ಮುಂದೆ ಎಲ್ಲೂ ಪ್ರದರ್ಶಿಸಬಾರದು ಎಂದು ಆದೇಶಿಸಿದೆ.
ಅಲ್ತಾಫ್ ಹುಸೇನ್ ಎಂಬವರು ಈ ಚಿತ್ರವನ್ನು ನಿರ್ಮಿಸಿ, ಸಿನಿಮಾದ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರವನ್ನು ಸುವೀರನ್ ಎಂಬುವರು ನಿರ್ದೇಶಿಸಿದ್ದರು. 
59ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಯಲ್ಲಿ ‘ಬ್ಯಾರಿ’ ಚಿತ್ರ ಸ್ವರ್ಣಕಮಲ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು. ಈ ಸಿನಿಮಾ ತಮ್ಮ ಕಾದಂಬರಿ ‘ಚಂದ್ರಗಿರಿಯ ತೀರದಲ್ಲಿ’ ಕೃತಿಯನ್ನು ಆಧರಿಸಿ ಮಾಡಿರುವುದು ಗಮನಕ್ಕೆ ಬಂದ ನಂತರ, ಚಿತ್ರ ನಿರ್ಮಾಪಕರು, ನಿರ್ದೇಶಕರ ವಿರುದ್ಧ 2011ರಲ್ಲಿ ಸಾರಾ ಅಬೂಬಕರ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದೀಗ ಮೂರನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶರಾಗಿರುವ ಮುರಳೀಧರ ಪೈ ಬಿ. ತೀರ್ಪು ನೀಡಿದ್ದು, ಸಾರ್ವಜನಿಕವಾಗಿ ಸಿನಿಮಾವನ್ನು ಪ್ರದರ್ಶಿಸದಂತೆ ಆದೇಶಿಸಿದ್ದಾರೆ. 
ಕೃತಿಚೌರ್ಯಕ್ಕಾಗಿ ಲೇಖಕಿಗೆ ಎರಡು ಲಕ್ಷ ರೂಪಾಯಿ ಪರಿಹಾರವನ್ನು ನೀಡಬೇಕು. ಜೊತೆಗೆ ವಿಚಾರಣಾವಧಿಯ(ಎಂಟು ವರ್ಷ 12 ದಿನಗಳು) ಕಾಲದ ಬಡ್ಡಿಯನ್ನು, ನ್ಯಾಯಾಲಯದ ವೆಚ್ಚವನ್ನೂ ಪಾವತಿಸುವಂತೆಯೂ ನ್ಯಾಯಪೀಠ ಆದೇಶಿಸಿದೆ. 
‘ಚಂದ್ರಗಿರಿಯ ತೀರದಲ್ಲಿ’ ಕಾದಂಬರಿ ‘ಲಂಕೇಶ್ ಪತ್ರಿಕೆ’ಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿದ್ದು, ಸಾರ್ವಜನಿಕವಾಗಿ ತೀವ್ರ ಚರ್ಚೆಗೊಳಗಾಗಿರುವ ಕೃತಿಯಾಗಿತ್ತು. ಅಪಾರ ಓದುಗರನ್ನು ಸೆಳೆದುಕೊಂಡ ಹೆಮ್ಮೆ ಈ ಕಾದಂಬರಿಯದ್ದು. ಈ ಕಾದಂಬರಿಯ ಕತೆಯನ್ನು, ನನ್ನ ಯಾವುದೇ ಅನುಮತಿಯಿಲ್ಲದೆ ಕದ್ದು ಸಿನಿಮಾ ಮಾಡಿರುವುದರಿಂದ ನ್ಯಾಯಾಲಯದ ಮೆಟ್ಟಿಲೇರುವುದು ನನಗೆ ಅನಿವಾರ್ಯವಾಗಿತ್ತು ಎಂದು ಸಾರಾ ಅಬೂಬಕರ್ ಹೇಳಿದ್ದಾರೆ.
ನನ್ನ ಪರವಾಗಿ ಹಿರಿಯ ನ್ಯಾಯವಾದಿ ದಿವಂಗತ ಗೌರಿಶಂಕರ್ ವಾದಿಸಿದ್ದರು. ಬಳಿಕ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ಇನ್ನೋರ್ವ ಹಿರಿಯ ನ್ಯಾಯವಾದಿ ಶ್ಯಾಮರಾವ್ ಅವರಿಗೆ ಹಸ್ತಾಂತರಿಸಿದರು. ನನ್ನ ಪರವಾಗಿ ವಾದಿಸಿ ಈ ಮೊಕದ್ದಮೆಯನ್ನು ಗೆಲ್ಲಿಸಿಕೊಟ್ಟ ವಕೀಲರಿಗೆ ಕೃತಜ್ಞತೆಗಳು. ಈ ಸಂದರ್ಭದಲ್ಲಿ ನನಗೆ ನ್ಯಾಯ ದೊರಕುವುದಕ್ಕೆ ನೆರವಾಗಿರುವ ಸರ್ವರಿಗೂ ಕೃತಜ್ಞಳಾಗಿದ್ದೇನೆ ಎಂದು ಸಾರ ಅಬೂಬಕರ್ ಅವರು ಹೇಳಿದ್ದಾರೆ.
SCROLL FOR NEXT