ಸಿನಿಮಾ ಸುದ್ದಿ

ತೆಲುಗಿನ ಹಿರಿಯ ನಿರ್ದೇಶಕಿ ಹಾಗೂ ನಟಿ ಡಾ ಜಿ ವಿಜಯ ನಿರ್ಮಲಾ ನಿಧನ

Sumana Upadhyaya
ಹೈದರಾಬಾದ್: ಹಿರಿಯ ನಿರ್ದೇಶಕಿ ಹಾಗೂ ನಟಿ ಡಾ ಜಿ ವಿಜಯ ನಿರ್ಮಲಾ ಹೃದಯಾಘಾತದಿಂದ ಹೈದರಾಬಾದ್ ನ ಗಚಿಬೌಲಿ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಗುರುವಾರ ನಿಧನರಾಗಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು. 
ತೆಲುಗು ಚಿತ್ರೋದ್ಯಮದಲ್ಲಿ ನಟಿಯಾಗಿ, ನಿರ್ದೇಶಕಿ ಮತ್ತು ನಿರ್ಮಾಪಕಿಯಾಗಿ ವಿಜಯ ನಿರ್ಮಲಾ ಗುರುತಿಸಿಕೊಂಡಿದ್ದರು. 44ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಹೆಚ್ಚಿನ ಚಿತ್ರಗಳನ್ನು ನಿರ್ದೇಶಿಸಿದ ಜಗತ್ತಿನ ಏಕೈಕ ಮಹಿಳಾ ನಿರ್ದೇಶಕಿ ಎಂಬ ಹೆಗ್ಗಳಿಕೆಯಿರುವ ವಿಜಯ ನಿರ್ಮಲಾ 2002ರಲ್ಲಿ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು. 
2008ರಲ್ಲಿ ಅವರಿಗೆ ತೆಲುಗು ಚಿತ್ರೋದ್ಯಮಕ್ಕೆ ನೀಡಿರುವ ಕಾಣಿಕೆಗೆ ತೆಲುಗು ಚಿತ್ರರಂಗದ ಅತ್ಯುನ್ನತ ಗೌರವ ರಘುಪತಿ ವೆಂಕಯ್ಯ ಪ್ರಶಸ್ತಿ ಲಭಿಸಿತ್ತು. 
ಶಿವಾಜಿ ಗಣೇಶನ್ ನಂತಹ ಖ್ಯಾತ ಕಲಾವಿದರಿಗೆ ಚಿತ್ರ ನಿರ್ದೇಶನ ಮಾಡಿದ ಕೀರ್ತಿಯು ವಿಜಯ ನಿರ್ಮಲಾ ಅವರಿಗಿದೆ.
ತಮಿಳು ನಾಡಿನಲ್ಲಿ ಹುಟ್ಟಿದ ವಿಜಯ ನಿರ್ಮಲಾರ ತಂದೆ ಚಿತ್ರ ನಿರ್ಮಾಪಕರು. ಅವರ ಪುತ್ರ ನರೇಶ್ ಕೂಡ ನಟರಾಗಿದ್ದಾರೆ. ಮೊದಲ ಪತಿ ಕೃಷ್ಣ ಮೂರ್ತಿಯಾಗಿದ್ದು ಅವರಿಗೆ ವಿಚ್ಛೇದನ ನೀಡಿದ ಬಳಿಕ ನಟ ಕೃಷ್ಣ ಅವರನ್ನು ಎರಡನೆಯ ವಿವಾಹವಾದರು.
ತಮಿಳು ಚಿತ್ರ ಮಚ್ಚಾ ರೆಖೈ ಮೂಲಕ 1950ರಲ್ಲಿ ಬಾಲನಟಿಯಾಗಿ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ವಿಜಯ ನಿರ್ಮಲಾ 11ನೇ ವರ್ಷದಲ್ಲಿ ತೆಲುಗು ಚಿತ್ರ ಪಾಂಡುರಂಗ ಮಹಾತ್ಮಯಮ್ ಮೂಲಕ 1957ರಲ್ಲಿ ಚೊಚ್ಚಲ ಬಾರಿಗೆ ನಟಿಸಿದರು. 1964ರಲ್ಲಿ ಪ್ರೇಮ್ ನಾಜಿರ್ ಎದುರು ಮಲಯಾಳಂ ಚಿತ್ರ ಭಾರ್ಗವಿ ನಿಲಯಮ್ ಮೂಲಕ ಜನಪ್ರಿಯರಾದರು.
ನಂತರ ತೆಲುಗು ಮತ್ತು ತಮಿಳು ಭಾಷೆಯ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಎಂಗ ವೀಟ್ಟು ಪೆನ್ನ್ (1965), ರಂಗುಲ ರತ್ನಂ(1966), ಸಾಕ್ಷಿ(1967), ಅಲ್ಲುರಿ ಸೀತಾರಾಮ್ ರಾಜು(1974), ಶ್ರೀ ಶ್ರೀ (2016) ಮೊದಲಾದವು ಪ್ರಮುಖ ಚಿತ್ರಗಳು. 
ವಿಜಯ ಕೃಷ್ಣ ಮೂವೀಸ್ ಹೆಸರಿನಲ್ಲಿ ತಮ್ಮದೇ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ ವಿಜಯ ನಿರ್ಮಲಾ ಸುಮಾರು 15 ಚಿತ್ರಗಳನ್ನು ನಿರ್ಮಿಸಿದ್ದಾರೆ. 
ಹಿರಿಯ ನಟಿ, ನಿರ್ದೇಶಕಿ ನಿಧನಕ್ಕೆ ನಟ ಮಂಚೊ ಮನೋಜ್ ಸೇರಿದಂತೆ ಇತರ ನಟ, ನಟಿಯರು ಸಂತಾಪ ಸೂಚಿಸಿದ್ದಾರೆ.
200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿ, 44 ಚಿತ್ರಗಳನ್ನು ನಿರ್ದೇಶಿಸಿರುವ ವಿಜಯ ನಿರ್ಮಲಾ ಅವರು ಪತಿ ಹಿರಿಯ ನಟ ಕೃಷ್ಣ ಮತ್ತು ಪುತ್ರ ವಿಜಯ ಕೃಷ್ಣ ನರೇಶ್ ಅವರನ್ನು ಅಗಲಿದ್ದಾರೆ.
SCROLL FOR NEXT