ಬೆಂಗಳೂರು: ಮದುವೆ ಆಗಿ ಇನ್ನೂ ಒಂದು ವಾರ ಕಳೆದಿಲ್ಲ, ಆಗಲೇ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ಪೊಗರು ಚಿತ್ರದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ನಂದಾ ಕಿಶೋರ್ ನಿರ್ದೇಶನದ ಈ ಚಿತ್ರದ ಡಬ್ಬಿಂಗ್ ಕೆಲಸ ನಡೆಯುತ್ತಿದೆ. ಶುಕ್ರವಾರದಿಂದ ಡಬ್ಬಿಂಗ್ ಕಾರ್ಯ ಆರಂಭಿಸುವ ಸಾಧ್ಯತೆ ಇದೆ. ಡಿಸೆಂಬರ್ 5ರಿಂದ ಹಾಡಿನ ಭಾಗದ ಚಿತ್ರೀಕರಣಕ್ಕೆ ಚಿತ್ರ ತಂಡ ಚಿಂತನೆ ನಡೆಸಿದೆ.
ಈ ಸಿನಿಮಾ ನಾಲ್ಕು ಹಾಡುಗಳನ್ನೊಳಗೊಂಡಿದ್ದು, ಡಿಸೆಂಬರ್ ತಿಂಗಳಿನಲ್ಲಿ ಇಡೀ ಚಿತ್ರೀಕರಣ ಮುಕ್ತಾಯಗೊಳ್ಳಲಿದೆ. ಇದು ಧ್ರುವ ಸರ್ಜಾ ಅವರ ನಾಲ್ಕನೇ ಸಿನಿಮಾವಾಗಿದೆ. ಅದ್ದೂರಿ, ಬಹದ್ದೂರ್, ಭಂಜರಂಗಿ ಹ್ಯಾಟ್ರಿಕ್ ಹಿಟ್ ಬಳಿಕ ಬರುತ್ತಿರುವ ಪೊಗರು ಚಿತ್ರದ ಮೇಲೂ ಆರಂಭದಿಂದಲೂ ನಿರೀಕ್ಷೆ ಹೆಚ್ಚಾಗಿದೆ.
ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾದ ಈ ಚಿತ್ರದ ಡೈಲಾಂಗ್ ಟ್ರೈಲರ್ ಮಿಲಿಯನ್ ಗಟ್ಟಲೇ ವೀಕ್ಷಣೆ ಪಡೆದುಕೊಂಡಿತ್ತು. ಪೊಗರು ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾದರೆ ಧನಂಜನ್ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಮಯೂರಿ, ರವಿಶಂಕರ್, ಚಿಕ್ಕಣ್ಣ, ಕುರಿ ಪ್ರತಾಪ್ ಮತ್ತಿತರರು ನಟಿಸಿದ್ದಾರೆ.
ಬಿಕೆ ಗಂಗಾಧರ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಅಂತಾರಾಷ್ಟ್ರೀಯ ಬಾಡಿ ಬಿಲ್ಡರ್ ಗಳಾದ ಕೈ ಗ್ರೇನಿ, ಮೊರ್ಗಾನ್ ಅಸ್ತೆ, ಜೊಹಾನ್ ಲ್ಯೂಕಾಸ್ ಮತ್ತು ಜೊ ಲಿಂಡರ್ ಅವರು ಕ್ಲೈಮ್ಯಾಕ್ಸ್ ಹಂತದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಕೂಡಾ ಈ ಚಿತ್ರದ ಮತ್ತೊಂದು ಹೈಲೈಟ್ ಆಗಿದೆ. ವಿಜಯ್ ಮಿಲ್ಟನ್ ಅವರ ಛಾಯಾಗ್ರಹಣವಿದೆ.