ಸಿನಿಮಾ ಸುದ್ದಿ

ಫ್ರಾನ್ಸ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ನಟೇಶ್ ಹೆಗ್ಡೆ ನಿರ್ದೇಶನದ ಪೆಡ್ರೊ ಕನ್ನಡ ಸಿನಿಮಾಗೆ ಪ್ರಶಸ್ತಿ

Harshavardhan M

ಉದಯೋನ್ಮುಖ ನಿರ್ದೇಶಕ ನಟೇಶ್ ಹೆಗ್ಡೆ ನಿರ್ದೇಶಕನದ ಕನ್ನಡ ಸಿನಿಮಾ 'ಪೆಡ್ರೊ', ಫ್ರಾನ್ಸ್ ನಲ್ಲಿ ನಡೆದ Festival des 3 Continents ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡು ಪ್ರಶಸ್ತಿ ಗೆದ್ದುಕೊಂಡಿದೆ. 

ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕವನ್ನೊಳಗೊಂಡು ಮೂರು ಖಂಡಗಳ ಸಿನಿಮಾಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವುದು ಸೇರಿದಂತೆ ವೇದಿಕೆ ಕಲ್ಪಿಸುವುದು ಈ Festival des 3 Continents ಚಿತ್ರೋತ್ಸವದ ಉದ್ದೇಶವಾಗಿದೆ. 

ಈ ಪ್ರತಿಷ್ಟಿತ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪೆಡ್ರೊ ಸಿನಿಮಾ ಸಿಲ್ವರ್ ಬಲೂನ್ ಅಂದರೆ ಎರಡನೇ ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.  ಪೆಡ್ರೊ ಸಿನಿಮಾ, ನಟ ರಿಷಬ್ ಶೆಟ್ಟಿ ನಿರ್ಮಾಣದಲ್ಲಿ ಮೂಡಿ ಬಂದಿದೆ.ಪೆಡ್ರೊ ಸಿನಿಮಾದ ಕಥಾನಾಯಕನಾಗಿ ಕಾಣಿಸಿಕೊಂಡಿರುವುದು ನಟೇಶ್ ಹೆಗ್ಡೆ ತಂದೆ ಗೋಪಾಲ್ ಹೆಗ್ಡೆ ಎನ್ನುವುದು ವಿಶೇಷ.

ಗರುಡ ಗಮನ ವೃಷಭ ವಾಹನ ಸಿನಿಮಾ ಮೂಲಕ ಜನಪ್ರಿಯತೆ ಗಳಿಸುತ್ತಿರುವ ರಾಜ್ ಶೆಟ್ಟಿ 'ಪೆಡ್ರೋ' ಸಿನಿಮಾದಲ್ಲಿ ನಟಿಸಿದ್ದಾರೆ.  ತಾರಾಗಣದಲ್ಲಿ ರಾಮಕೃಷ್ಣ ಭಟ್, ಮೇದಿನಿ ಕೆಳಮನೆ ಮತ್ತಿತರರು ನಟಿಸಿದ್ದಾರೆ.  ವಿಕಾಸ್ ಅರಸ್ ಸಿನಿಮೆಟೊಗ್ರಫಿ ಹೊಣೆ ಹೊತ್ತಿದ್ದಾರೆ. ಶ್ರೇಯಾಂಕ್ ನಂಜಪ್ಪ ಸೌಂಡ್ ಎಂಜಿನಿಯರ್ ಜವಾಬ್ದಾರಿ ನಿರ್ವಹಿಸಿದ್ದು, ಸಂಕಲನ ಪರೇಶ್ ಕಮ್ ದಾರ್ ಅವರದು.

ಉತ್ತರಕಕನ್ನಡದ ಹಳ್ಳಿಯಲ್ಲಿ ನಡೆಯುವ ಕಥಾನಕವನ್ನು ಸಿನಿಮಾ ಒಳಗೊಂಡಿದೆ. ಕಥಾನಾಯಕ ತಾನು ಎಸಗುವ ಕೃತ್ಯದಿಂದ ಊರವರಿಂದ, ಮನೆಯವರಿಂದ ಬಹಿಷ್ಕಾರಕ್ಕೆ ಒಳಗಾಗುತ್ತಾನೆ. ತನ್ನನ್ನು ಇರುವ ಹಾಗೆಯೇ ಎಲ್ಲರೂ ಸ್ವೀಕರಿಸಬೇಕು ಎನ್ನುವುದು ಕಥಾನಾಯಕನ ಹಂಬಲ. 

ಸಂಘಟಕರು ಮತ್ತು ಪ್ರಶಸ್ತಿ ವಿಜೇತರೊಂದಿಗೆ

ಇಂದಿನ ಪ್ರಪಂಚದಲ್ಲಿ ನಡೆಯುತ್ತಿರುವ ಎಲ್ಲಾ ಬಗೆಯ ಮನೋವ್ಯಾಪಾರಗಳಲ್ಲಿ ಸ್ವೀಕಾರ, Acceptance ಎನ್ನುವುದೇ ಪ್ರಮುಖವಾದುದು. ಅದರ ಸುತ್ತಲೇ ನಿರ್ಮಾಣವಾಗಿರುವ 'ಪೆಡ್ರೋ' ಸಿನಿಮಾಗೆ ಅಂತಾರಾಷ್ಟ್ರೀಯ ಗೌರವ ಪ್ರಾಪ್ತವಾಗಿರುವುದು ಕನ್ನಡಿಗರು ಹೆಮ್ಮೆ ಪಡುವ ವಿಚಾರ.  

SCROLL FOR NEXT