ಸಿನಿಮಾ ಸುದ್ದಿ

ಅರಮನೆ ಮೈದಾನದಲ್ಲಿ 'ಪುನೀತ್ ನಮನ' ಕಾರ್ಯಕ್ರಮ: ಗಣ್ಯರಿಗೆ ಆಹ್ವಾನ, ಸಿನಿಮಾ ಪ್ರದರ್ಶನ ಹೊರತುಪಡಿಸಿ ಬೇರೆಲ್ಲಾ ಚಟುವಟಿಕೆಗೆ ಬ್ರೇಕ್

Sumana Upadhyaya

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಲ್ಲರ ಪ್ರೀತಿಯ ಅಪ್ಪು ನಿಧನರಾಗಿ ಇಂದು ಮಂಗಳವಾರಕ್ಕೆ 19 ದಿನಗಳಾಗುತ್ತಿದೆ. ಅವರ ಅಭಿಮಾನಿಗಳ ನೋವು ಇನ್ನೂ ಕಡಿಮೆಯಾಗಿಲ್ಲ. ಪುನೀತ್ ಸಮಾಧಿಯಿರುವ ಸ್ಥಳ ಕಂಠೀರವ ಸ್ಟುಡಿಯೊಕ್ಕೆ ಈಗಲೂ ಜನಸಾಗರ ಹರಿದುಬರುತ್ತಿದೆ.

ಪುನೀತ್ ರಾಜ್ ಕುಮಾರ್ ಅವರು ಕನ್ನಡ ಚಿತ್ರರಂಗಕ್ಕೆ, ಸಮಾಜಕ್ಕೆ ನೀಡಿದ ಕೊಡುಗೆಯನ್ನು ಅವರು ನಡೆದುಕೊಂಡು ಬಂದ ಹಾದಿಯನ್ನು ಸ್ಮರಿಸಲು ಸ್ಯಾಂಡಲ್ ವುಡ್ ಚಂದನವನ ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ 'ಪುನೀತ್ ನಮನ' ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆಯೋಜಿಸುತ್ತಿದೆ. ಈ ಕಾರ್ಯಕ್ರಮಕ್ಕೆ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಅಂತಿಮ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಸಾರ್ವಜನಿಕರಿಗೆ ಇಲ್ಲ ಪ್ರವೇಶ: ಪುನೀತ್ ನಮನ ಕಾರ್ಯಕ್ರಮ ಕೇವಲ ಚಿತ್ರರಂಗದವರು ಮತ್ತು ಗಣ್ಯರಿಗೆ ಸೀಮಿತವಾಗಿದ್ದು ಸಾರ್ವಜನಿಕರಿಗೆ ಕಾರ್ಯಕ್ರಮಕ್ಕೆ ಪ್ರವೇಶವಿಲ್ಲ. ಅಪರಾಹ್ನ 3 ಗಂಟೆಗೆ ಕಾರ್ಯಕ್ರಮ ಆರಂಭವಾಗಿ ಸಾಯಂಕಾಲ 6 ಗಂಟೆಯವರೆಗೆ ಮುಂದುವರಿಯಲಿದೆ. ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಜನರು ಸುದ್ದಿವಾಹಿನಿಗಳಲ್ಲಿ ಕಾರ್ಯಕ್ರಮಗಳ ನೇರಪ್ರಸಾರವನ್ನು ಕುಳಿತಲ್ಲಿಯೇ ವೀಕ್ಷಿಸಬಹುದು. 

ಗಣ್ಯರಿಗೆ ಪಾಸ್ ವ್ಯವಸ್ಥೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳು, ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ಸೇರಿದಂತೆ ಪ್ರಮುಖ ಗಣ್ಯರು ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ಕಲಾವಿದರು ಇಂದಿನ ಪುನೀತ್ ನಮನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕಲಾವಿದರಿಗೆ, ಗಣ್ಯರಿಗೆ ಪ್ರತ್ಯೇಕ ಪಾಸ್ ವ್ಯವಸ್ಥೆಯಿರುತ್ತದೆ. 

ಪುನೀತ್ ನಮನ ಕಾರ್ಯಕ್ರಮದಲ್ಲಿ ಡಾ ರಾಜ್ ಕುಮಾರ್ ಕುಟುಂಬ, ಸ್ಯಾಂಡಲ್ ವುಡ್ ನ ಪ್ರಮುಖ ಕಲಾವಿದರು ಸೇರಿದಂತೆ 200ಕ್ಕೂ ಹೆಚ್ಚು ಮಂದಿ ಕಲಾವಿದರು ಭಾಗಿಯಾಗಲಿದ್ದಾರೆ. ಪುನೀತ್​ ಹೆಸರಲ್ಲೇ ಕಾರ್ಯಕ್ರಮ ನಡೆಯುತ್ತಿರುವುದರಿಂದ ದೊಡ್ಮನೆಯ ಎಲ್ಲರೂ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಶಿವರಾಜ್​ಕುಮಾರ್​, ರಾಘವೇಂದ್ರ ರಾಜ್​ಕುಮಾರ್​ ಹಾಗೂ ಅವರ ಕುಟುಂಬದವರು ‘ಪುನೀತ ನಮನ’ಕ್ಕೆ ಬರಲಿದ್ದಾರೆ.

2 ಸಾವಿರ ಜನರಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ವ್ಯವಸ್ಥೆ ಮಾಡಲಾಗಿದೆ. ಪರಭಾಷಾ ಚಿತ್ರರಂಗದಿಂದ ತಮಿಳು ನಟ ವಿಶಾಲ್, ರಜನಿಕಾಂತ್, ದಳಪತಿ ವಿಜಯ್, ಅಜಿತ್, ವಿಜಯ್ ಸೇತುಪತಿ, ಚಿರಂಜೀವಿ, ಅಲ್ಲು ಅರ್ಜುನ್, ಜ್ಯೂ. ಎನ್​ಟಿಆರ್, ಪ್ರಭಾಸ್, ಅಮಿತಾಭ್​ ಬಚ್ಚನ್, ರಾಮ್ ಚರಣ್, ಮೋಹನ್ ಲಾಲ್ ಸೇರಿದಂತೆ ಪ್ರಮುಖ ಕಲಾವಿದರು ಭಾಗವಹಿಸುವ ಸಾಧ್ಯತೆ ಇದೆ.

ಕಾರ್ಯಕ್ರಮದಲ್ಲಿ ಭಾಗಿಯಾಗುವ ಗಣ್ಯರಿಗೆ ಆಸನ ವ್ಯವಸ್ಥೆ, ಸಾಯಂಕಾಲ ಉಪಾಹಾರ ವ್ಯವಸ್ಥೆಯಿರುತ್ತದೆ. ಎಲ್ ಇಡಿ ಮೂಲಕ ಕಾರ್ಯಕ್ರಮ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಪುನೀತ್ ಅವರಿಗೆ ಪುಷ್ಪನಮನ, ಗೀತನಮನವನ್ನು ಸಲ್ಲಿಸಲಾಗುತ್ತದೆ. ಚಿತ್ರ ಸಾಹಿತಿ ಹಾಗೂ ಸಂಗೀತ ಸಾಹಿತಿ ವಿ ನಾಗೇಂದ್ರ ಪ್ರಸಾದ್ ಅವರು ಬರೆದಿರುವ ಹಾಡಿಗೆ ಗುರುಕಿರಣ್ ಸಂಗೀತ ಸಂಯೋಜಿಸಿದ್ದು ಅದು ಸುಮಾರು 10 ನಿಮಿಷಗಳ ಕಾಲ ಪ್ರದರ್ಶನವಾಗಲಿದೆ.  ಗೀತೆಯ ಮೂಲಕ ನಮನ ಕಾರ್ಯಕ್ರಮ ಆರಂಭ ಆಗುತ್ತದೆ. ವಿಜಯ್ ಪ್ರಕಾಶ್, ಗುರುಕಿರಣ್ ಹಾಗೂ ರಾಜೇಶ್ ಕೃಷ್ಣನ್ ಅವರಿಂದ ಗೀತ ನಮನ ನಡೆಯಲಿದೆ. 

ಚಿತ್ರ ಪ್ರದರ್ಶನ ಹೊರತುಪಡಿಸಿ ಬೇರೆಲ್ಲಾ ಚಟುವಟಿಕೆಗಳಿಗೆ ಬ್ರೇಕ್: ಇಂದು ಪುನೀತ್ ನಮನ ಕಾರ್ಯಕ್ರಮ ಹಿನ್ನೆಲೆಯಲ್ಲಿ ಸಿನಿಮಾ ಪ್ರದರ್ಶನಗಳು ಇಂದು ಎಂದಿನಂತೆ ಮುಂದುವರಿಯಲಿದ್ದು, ಸಿನಿಮಾ ಸಂಬಂಧಿ ಬೇರೆಲ್ಲಾ ಚಟುವಟಿಕೆಗಳಿಗೆ ಚಲನಚಿತ್ರ ವಾಣಿಜ್ಯ ಮಂಡಳಿ ಬ್ರೇಕ್ ಹಾಕಿದೆ. 

SCROLL FOR NEXT