ಸಿನಿಮಾ ಸುದ್ದಿ

ರಚನಾ ಇಂದರ್- ಅಜಯ್ ಪೃಥ್ವಿ ನಟನೆಯ 'ನಾಟ್ ಔಟ್' ಚಿತ್ರಕಥೆ ಹುಲಿ-ಕುರಿ ಆಟವನ್ನು ಆಧರಿಸಿದೆ: ನಿರ್ದೇಶಕ ಅಂಬರೀಶ

Ramyashree GN

ನಾಟ್ ಔಟ್ ಚಿತ್ರದ ಶೂಟಿಂಗ್ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸವು ಇತ್ತೀಚೆಗಷ್ಟೇ ಮುಗಿದಿದ್ದು, ನಿರ್ಮಾಪಕರು ಕ್ಲಿಯರೆನ್ಸ್‌ಗಾಗಿ ಸೆನ್ಸಾರ್ ಮಂಡಳಿಯ ಮೊರೆ ಹೋಗಿದ್ದಾರೆ. ಈಮಧ್ಯೆ, ಚಿತ್ರತಂಡವು ಚಿತ್ರದ ಮೊದಲ ಮೋಷನ್ ಪೋಸ್ಟರ್ ಅನ್ನು ಎಂಎಲ್‌ಸಿ ಪುಟ್ಟಣ್ಣ ಮತ್ತು ಕಿಸ್ ಸಿನಿಮಾ ನಿರ್ದೇಶಕ ಎ.ಪಿ. ಅರ್ಜುನ್ ಅವರ ಸಮ್ಮುಖದಲ್ಲಿ ಬಿಡುಗಡೆ ಮಾಡಿತು.

ಅಂಬರೀಷ ನಿರ್ದೇಶನದ ಈ ಚಿತ್ರವು 'ಅದೃಶ್ಯ ಅಂಪೈರ್‌ನಿಂದ ತೀರ್ಪು' ಎಂಬ ಅಡಿಬರಹವನ್ನು ಹೊಂದಿದೆ. 'ಕರ್ನಾಟಕ, ತಮಿಳುನಾಡು ಮತ್ತು ಆಂಧ್ರದ ಗಡಿಯಲ್ಲಿರುವ ಹಳ್ಳಿಯಲ್ಲಿ ಜನಪ್ರಿಯವಾಗಿರುವ ಹುಲಿ-ಕುರಿ ಆಟವನ್ನು ಆಧರಿಸಿದ ಕಥೆ ಸಿನಿಮಾದಲ್ಲಿದೆ' ಎಂದು ನಿರ್ದೇಶಕರು ತಮ್ಮ ಚಿತ್ರದ ಬಗ್ಗೆ ವಿವರಿಸುತ್ತಾರೆ.

ಚೊಚ್ಚಲ ಚಿತ್ರದಲ್ಲಿ ಅಜಯ್ ಪೃಥ್ವಿ ಆ್ಯಂಬ್ಯುಲೆನ್ಸ್ ಚಾಲಕನಾಗಿ ಕಾಣಿಸಿಕೊಳ್ಳುತ್ತಿದ್ದರೆ, ನಟಿ ರಚನಾ ಇಂದರ್ ನರ್ಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಡಾರ್ಕ್ ಹ್ಯೂಮರ್ ಚಿತ್ರದಲ್ಲಿ ರವಿಶಂಕರ್ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ. 'ರವಿಶಂಕರ್ ಅವರು ಹಿಂದೆಂದೂ ಕಂಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಮತ್ತು ಈ ಕಥೆಯ ಮುಖ್ಯ ಆಧಾರ ಸ್ತಂಭವಾಗಿದ್ದಾರೆ. ಸಿದ್ಧಿ ಕೂಡ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ' ಎಂದಿದ್ದಾರೆ.

ರಾಷ್ಟ್ರಕೂಟ ಪಿಕ್ಚರ್ಸ್ ಬ್ಯಾನರ್‌ನಡಿಯಲ್ಲಿ ವಿ. ರವಿಕುಮಾರ್ ಮತ್ತು ಶಂಶುದ್ದೀನ್ ಅವರ ನಿರ್ಮಾಣದ ಈ ಚಿತ್ರಕ್ಕೆ ಜೂಡಾ ಸ್ಯಾಂಡಿ ಅವರ ಸಂಗೀತ ಮತ್ತು ಹಾಲೇಶ್ ಅವರ ಛಾಯಾಗ್ರಹಣವಿದೆ. ನಾಟ್ ಔಟ್‌ನಲ್ಲಿ ಗೋಪಾಲಕೃಷ್ಣ ದೇಶಪಾಂಡೆ, ಸಲ್ಮಾನ್, ಗೋವಿಂದೇಗೌಡ ಮತ್ತು ಪ್ರಶಾಂತ್ ಸಿದ್ದಿ ಚಿತ್ರದ ತಾರಾಗಣದಲ್ಲಿದ್ದಾರೆ.

ಸೆನ್ಸಾರ್ ಮಂಡಳಿಯ ಅನುಮತಿಗಾಗಿ ಕಾಯುತ್ತಿರುವ ನಿರ್ಮಾಪಕರು ಈ ವರ್ಷಾಂತ್ಯದಲ್ಲಿ ಅಥವಾ 2023 ರ ಆರಂಭದಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆಯನ್ನು ಹೊಂದಿದ್ದಾರೆ.

SCROLL FOR NEXT